ಹಂಪಿಯಲ್ಲಿ ಮೂಲ ಸೌಕರ್ಯದ್ದೇ ಕೊರತೆ: ಜಿ- 20 ಶೃಂಗಸಭೆ ಇದ್ದರೂ ಸೌಲಭ್ಯ ಮರೀಚಿಕೆ..!

By Kannadaprabha News  |  First Published May 25, 2023, 4:00 AM IST

ಜಿ- 20 ಶೃಂಗಸಭೆ ಹಂಪಿಯಲ್ಲೇ ನಡೆಯುತ್ತಿದ್ದರೂ ಸಿದ್ಧತಾ ಸಭೆಯಿಂದ ಹಂಪಿ ಗ್ರಾಮ ಪಂಚಾಯಿತಿಯನ್ನೇ ಕಡೆಗಣಿಸಲಾಗಿದೆ. ಇದುವರೆಗೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಈ ಬಗ್ಗೆ ಪರಿಗಣಿಸಿಲ್ಲ. ಹಂಪಿ ಗ್ರಾಪಂನ ಅಧಿಕಾರಿ ಸಿಬ್ಬಂದಿಗೂ ಈ ಸಭೆಗೆ ಆಹ್ವಾನಿಸಿಲ್ಲ. ಹಂಪಿ ಉತ್ಸವಕ್ಕೆ ಗ್ರಾಮ ಪಂಚಾಯಿತಿಯನ್ನು ಪರಿಗಣಿಸಲಾಗುತ್ತದೆ. ಆದರೆ, ಮೂಲ ಸೌಕರ್ಯ ಹಾಗೂ ಸ್ವಚ್ಛತೆಯಲ್ಲಿ ಮುಖ್ಯಪಾತ್ರ ವಹಿಸಬೇಕಾದ ಗ್ರಾಮ ಪಂಚಾಯಿತಿಯನ್ನೇ ಈ ವಿಷಯದಲ್ಲಿ ಕಡೆಗಣಿಸಲಾಗಿದೆ. 


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಮೇ.25): ವಿಶ್ವವಿಖ್ಯಾತ ಹಂಪಿಯಲ್ಲಿ ಜಿ- 20 ಶೃಂಗಸಭೆ ಜುಲೈನಲ್ಲಿ ನಡೆಯಲಿದೆ. ಆದರೆ, ಮೂಲ ಸೌಕರ್ಯ ಹಾಗೂ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿ- 20 ಶೃಂಗಸಭೆ ಹಂಪಿಯಲ್ಲೇ ನಡೆಯುತ್ತಿದ್ದರೂ ಸಿದ್ಧತಾ ಸಭೆಯಿಂದ ಹಂಪಿ ಗ್ರಾಮ ಪಂಚಾಯಿತಿಯನ್ನೇ ಕಡೆಗಣಿಸಲಾಗಿದೆ. ಇದುವರೆಗೆ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಈ ಬಗ್ಗೆ ಪರಿಗಣಿಸಿಲ್ಲ. ಹಂಪಿ ಗ್ರಾಪಂನ ಅಧಿಕಾರಿ ಸಿಬ್ಬಂದಿಗೂ ಈ ಸಭೆಗೆ ಆಹ್ವಾನಿಸಿಲ್ಲ. ಹಂಪಿ ಉತ್ಸವಕ್ಕೆ ಗ್ರಾಮ ಪಂಚಾಯಿತಿಯನ್ನು ಪರಿಗಣಿಸಲಾಗುತ್ತದೆ. ಆದರೆ, ಮೂಲ ಸೌಕರ್ಯ ಹಾಗೂ ಸ್ವಚ್ಛತೆಯಲ್ಲಿ ಮುಖ್ಯಪಾತ್ರ ವಹಿಸಬೇಕಾದ ಗ್ರಾಮ ಪಂಚಾಯಿತಿಯನ್ನೇ ಈ ವಿಷಯದಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Tap to resize

Latest Videos

undefined

ಕುಡಿಯುವ ನೀರಿನ ಸಮಸ್ಯೆ:

ಹಂಪಿಯ ವಿಜಯವಿಠ್ಠಲ ದೇವಾಲಯದ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಂಪಿಯ ಪ್ರಮುಖ ಸ್ಮಾರಕವಾಗಿರುವ ಕಲ್ಲಿನತೇರು ಕೂಡ ಇದೇ ಪ್ರದೇಶದಲ್ಲಿದೆ. ಹೀಗಿದ್ದರೂ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಬಿರುಬಿಸಿಲಿನಲ್ಲೂ ಪ್ರವಾಸಿಗರು ಪರದಾಡುತ್ತಿದ್ದಾರೆ. ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಶಾಶ್ವತ ಕುಡಿಯುವ ನೀರಿನ ಯೋಜನೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕರ್ನಾಟಕದ ಏಳು ಅದ್ಭುತ ಹಂಪಿಗೆ ಗರಿಮೆ

ವಿಜಯ ವಿಠ್ಠಲ ದೇವಾಲಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ, ಈ ಘಟಕಕ್ಕೆ ನೀಡಿದ್ದ ವಿದ್ಯುತ್‌ ಸಂಪರ್ಕ ಹಾಳಾಗಿದೆ. ಈ ನೀರಿನ ಘಟಕ ಆರಂಭಿಸಿದರೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಭಾರತೀಯ ಪುರಾತತ್ವ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಗ್ರಾಮ ಪಂಚಾಯಿತಿ, ಕಮಲಾಪುರ ಪುರಸಭೆ, ಪ್ರವಾಸೋದ್ಯಮ ಇಲಾಖೆಗಳು ಇದ್ದರೂ ಹಂಪಿ, ಕಮಲಾಪುರ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳ ಬಳಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಮಾಡಿದರೂ ಬೆರಳೆಣಿಕೆ ಸ್ಮಾರಕಗಳ ಬಳಿ ಮಾಡಿ, ಸುಮ್ಮನಾಗಿದ್ದಾರೆ.

ಸಮರ್ಪಕ ಬಸ್‌ ಸೌಕರ್ಯ ಇಲ್ಲ:

ಹೊಸಪೇಟೆಯಿಂದ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಬಸ್‌ ಸೌಕರ್ಯ ಇದೆ. ಆದರೆ ಕಮಲ ಮಹಲ್‌, ಮಹಾನವಮಿ ದಿಬ್ಬ ಸೇರಿದಂತೆ ಇತರೆ ಸ್ಮಾಕರಗಳಿಗೆ ತೆರಳಲು ಬಸ್‌ ಸೌಕರ್ಯ ಇಲ್ಲದಾಗಿದೆ. ಪ್ರವಾಸಿಗರು ಸ್ವಂತ ವಾಹನ ಇಲ್ಲವೇ ಬಾಡಿಗೆ ವಾಹನಗಳನ್ನೇ ಬಳಸುವಂತಾಗಿದೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕಾಲ್ನಡಿಗೆಯಲ್ಲಿ ನೋಡಿ, ಬಿಸಿಲಿನಲ್ಲಿ ಸುಸ್ತಾಗುತ್ತಿದ್ದಾರೆ. ಬದಲಿಗೆ ಹಂಪಿ ಸ್ಮಾರಕಗಳ ಗುಚ್ಛ ವೀಕ್ಷಣೆಗೆ ಮಿನಿ ಬಸ್‌ಗಳ ಸೌಕರ್ಯವನ್ನೂ ಇದುವರೆಗೆ ಮಾಡಿಲ್ಲ.

ಮೂಲ ಸೌಕರ್ಯ ಕೊರತೆ:

ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೆಲವೆಡೆ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ ನಿರ್ವಹಣೆಯಿಲ್ಲದೇ ಹೊಲಸು ನಾರುತ್ತಿವೆ. ಹಂಪಿ ಅಭಿವೃದ್ಧಿ ಪ್ರಾಧಿಕಾರ ಆರಂಭದಲ್ಲಿ ಸ್ಮಾರಕಗಳ ಮಾದರಿಯ ಶೌಚಾಲಯಗಳನ್ನು ನಿರ್ಮಿಸಿ ಶೂರತ್ವ ಮೆರೆದಿತ್ತು. ಅವು ಹಾಳಾದ ತಕ್ಷಣವೇ ಶೌಚಾಲಯದ ತಂಟೆಗೆ ಹೋಗದೆ ಸುಮ್ಮನಾಗಿದೆ.

ಐತಿಹಾಸಿಕ ಹಂಪಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ: ಅಧಿಕಾರಿಗಳು ಮೌನ?

ಹಂಪಿಯಲ್ಲಿ ದೇಶ- ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಮೂಲ ಸೌಕರ್ಯದೊಂದಿಗೆ ಸ್ಮಾರಕಗಳ ರಕ್ಷಣೆ ಕೂಡ ಅಷ್ಟೇ ಮಹತ್ವದಾಗಿದೆ. ಆದರೆ, ಹೊಣೆ ವಹಿಸಬೇಕಾದ ಇಲಾಖೆಗಳು ವಿಮುಖವಾಗುತ್ತಿರುವುದರಿಂದ; ಹಂಪಿ ಸ್ಮಾರಕಗಳ ವೀಕ್ಷಣೆಗೆ ಬಿರು ಬಿಸಿಲಿನಲ್ಲಿ ಬರುವ ಪ್ರವಾಸಿಗರು, ಬಸವಳಿದು ನೋಡುವಂಥ ಸ್ಥಿತಿ ನಿರ್ಮಾಣಗೊಂಡಿದೆ.

ಹಂಪಿಯಲ್ಲಿ ಶುದ್ಧ ಕುಡಿಯುವ ನೀರಿನ ಜತೆಗೆ ಮೂಲ ಸೌಕರ್ಯ ಒದಗಿಸಬೇಕು. ದೇಶ- ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಹೈಟೆಕ್‌ ಅಲ್ಲದಿದ್ದರೂ ಕನಿಷ್ಠ ಶೌಚಾಲಯವನ್ನಾದರೂ ಒದಗಿಸಬೇಕು. ಬಸ್‌ ಸೌಲಭ್ಯ ಇರಬೇಕು. ಹಂಪಿಯಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯ ದೊರಕಿಸಬೇಕು ಅಂತ ಪ್ರವಾಸಿಗರಾದ ನರೇಶ್‌, ರಾಜೇಂದ್ರನ್‌ ತಿಳಿಸಿದ್ದಾರೆ. 

click me!