Kodagu: ಜನತೆಗೆ ಸಿಗದ ಆರೋಗ್ಯ ಸೇವೆ, ಪಾಲಿಬೆಟ್ಟ ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

By Suvarna News  |  First Published Dec 12, 2022, 8:18 PM IST

ವೈದ್ಯರು, ಸಿಬ್ಬಂದಿ, ಅಂಬುಲೆನ್ಸ್ ಕೊರತೆಯಿಂದ ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಸುತ್ತಮುತ್ತಲಿನ ನಿವಾಸಿಗಳು ಆಸ್ಪತ್ರೆ ಎದುರು  ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು(ಡಿ.12): ವೈದ್ಯರು, ಸಿಬ್ಬಂದಿ, ಅಂಬುಲೆನ್ಸ್ ಕೊರತೆಯಿಂದ ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಹೀಗಾಗಿ ವ್ಯವಸ್ಥಿತವಾದ ಆರೋಗ್ಯ ಸೇವೆ ಒದಗಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಸುತ್ತಮುತ್ತಲಿನ ನಿವಾಸಿಗಳು ಆಸ್ಪತ್ರೆ ಎದುರು  ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು  ಪಾಲಿಬೆಟ್ಟ ಆಸ್ಪತ್ರೆಯನ್ನು ಅವಲಂಬಿತರಾಗಿದ್ದು ಹೆಚ್ಚುವರಿ ವೈದ್ಯರ ಕೊರತೆ, ಆಕ್ಸಿಜನ್ ಸಮಸ್ಯೆ, ಲ್ಯಾಬ್ ಟೆಕ್ನಿಷಿಯನ್, ಆಂಬುಲೆನ್ಸ್ ಸಮಸ್ಯೆಯಿಂದ ಸಾಮಾನ್ಯ ಜನರಿಗೆ ಸಮರ್ಪಕವಾದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಆರೋಗ್ಯ ಇಲಾಖೆ  ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ನೌಫಲ್ ಮಾತನಾಡಿ ಕಾಡು ಪ್ರಾಣಿಗಳ ಹಾವಳಿ, ಅಪಘಾತಗಳು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸರಿಯಾಗಿ ಸೌಲಭ್ಯಗಳು ಸಿಗುತ್ತಿಲ್ಲ.

Latest Videos

undefined

ಇತ್ತೀಚೆಗೆ ಅಪಘಾತ ಒಂದರಲ್ಲಿ ಯುವಕನೋರ್ವ ತುರ್ತು ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಆಕ್ಸಿಜನ್ ಇರಲಿಲ್ಲ. ಬೇರೆಡೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯೋಣ ಎಂದರೆ ಆಂಬುಲೆನ್ಸ್ ಇರಲಿಲ್ಲ. ಸಿಬ್ಬಂದಿಗಳ ಕೊರತೆಯಿಂದ ತುರ್ತು ಸೇವೆ ಸಿಗದೆ ಗಾಯಾಳುವನ್ನು ಬೇರೆ ಆಸ್ಪತ್ರೆಗೆ ಕಳಿಸಬೇಕಾದರೆ ಪರದಾಡಬೇಕಾಯಿತು ಅಸಮಾಧಾನ ಹೊರ ಹಾಕಿದರು. ಈ ಹಿಂದೆ  ಕಾಡುಪ್ರಾಣಿಗಳ ದಾಳಿಯಿಂದ ಗಾಯಗೊಂಡಿದ್ದವರಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿತ್ತು. ಜೊತೆಗೆ ಅಪಘಾತಗಳಲ್ಲಿ ಗಾಯಗೊಂಡರು ಎಂದರೆ ಅಂತಹವರಿಗೆ ಚಿಕಿತ್ಸೆಗೂ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲ. ಅಪಘಾತಗಳ ಸಂದರ್ಭದಲ್ಲಿ ಹಲವು ಸಾವು, ನೋವುಗಳು ಸಂಭವಿಸಿದ್ದರು, ಅಂತವರನ್ನು ಮಡಿಕೇರಿ ಆಸ್ಪತ್ರೆಗೆ ಬಾಡಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಅಗತ್ಯ ವೈದ್ಯರು, ಆಂಬುಲೆನ್ಸ್, ಸಿಬ್ಬಂದಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೂಪಿಸಿದರು.

ಪೋಷಕರೇ ಎಚ್ಚರ ! ಹರಡ್ತಿದೆ ಸ್ಟ್ರೆಪ್ ಎ ವೈರಸ್, ಸೋಂಕಿಗೆ 6 ಮಕ್ಕಳು ಸಾವು

ಕೂಡಲೇ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗದಿದ್ದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಸ್ಥಳಕ್ಕೆ  ಆಗಮಿಸಿ ಸಂಬಂಧಪಟ್ಟ ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸ್ಥಳದಿಂದಲೇ ಕರೆ ಮಾಡಿ ಮಾತುಕತೆ ನಡೆಸಿದರು. ಆಂಬುಲೆನ್ಸ್, ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಗಳ ಕೊರತೆ, ಹೆಚ್ಚುವರಿ ವೈದ್ಯರ ಸೇವೆ ಒದಗಿಸುವ ಭರವಸೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿಂದಿನಿಂದಲೂ ಗ್ರಾಮೀಣ ಭಾಗದ ಜನರಿಗೆ ಪಾಲಿಬೆಟ್ಟ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದ್ದು ಕೆಲವು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾಗಬಹುದು.

 

Raichur : 5 ವರ್ಷದ ಮಗುವಿಗೆ ಝಿಕಾ ವೈರಸ್‌ ಪತ್ತೆ: ಮಕ್ಕಳ ಆರೋಗ್ಯ ಮಾರ್ಗಸೂಚಿ ರಚನೆ

ಈಗಾಗಲೇ ಶಾಶ್ವತ ಆಂಬುಲೆನ್ಸ್ ವ್ಯವಸ್ಥೆಗೆ ರಾಜ್ಯಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು ಪಾಲಿಬೆಟ್ಟ ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು. ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾಗಿವೆ. ಹೆಚ್ಚುವರಿ ವೈದ್ಯರ ಸೇವೆಯು ಅಗತ್ಯವಾಗಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಗೆಹರಿಸಲಾಗುವುದು ಎಂದರು. ಈ ಸಂದರ್ಭ ಪಾಲಿಬೆಟ್ಟ, ಹುಂಡಿ ಚೆನ್ನಯ್ಯನಕೋಟೆ ಸುತ್ತಮುತ್ತಲ ಹಲವಾರು ಮಂದಿ ಪಾಲ್ಗೊಂಡಿದ್ದರು.

click me!