ಕೊಡಗಿನಲ್ಲಿ ಮಳೆ ಅವಾಂತರ ಕೊಯ್ಲಿಗೆ ಬಂದಿರುವ ಭತ್ತ, ಕಾಫಿ-ಕರಿಮೆಣಸು ಬೆಳೆ ಹಾಳು

By Suvarna News  |  First Published Dec 12, 2022, 8:07 PM IST

ರೈತರು ಕಷ್ಟಪಟ್ಟು ಬೆಳೆದಿರುವ ಭತ್ತದ ಬೆಳೆ , ಮಳೆಗೆ ಉದುರಿ ಹೋಗುತ್ತಿದೆ. ಕೊಡಗಿನಲ್ಲಿ ಹಲವು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪ್ರಸ್ತುತ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಗದ್ದೆಗಳನ್ನು ತುಳಿದು ಹಾಳು ಮಾಡುತ್ತಿವೆ. ಇದರಿಂದ ಬೇಸತ್ತ ರೈತರು ಭತ್ತ ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.12): ಮಾಂಡೌಸ್ ಚಂಡಮಾರುತ್ತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲೂ ಕಳೆದ ನಾಲ್ಕು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ಕೊಯ್ಲಿಗೆ ಬಂದಿರುವ ಭತ್ತ, ಕಾಫಿ ಹಾಗೂ ಕರಿಮೆಣಸು ಬೆಳೆಗಳು ನಷ್ಟವಾಗುವಾಗುತ್ತಿವೆ. ಇದರಿಂದ ವರ್ಷದಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆ ಹಾಳಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುವ ಆತಂಕದಲ್ಲಿ ಇದ್ದಾರೆ. ಕುಶಾಲನಗರ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳು ಸೇರಿದಂತೆ ಎಲ್ಲೆಡೆ ಸುತ್ತಮುತ್ತ ಸಾಕಷ್ಟು ಮಳೆಯಾಗುತ್ತಿದೆ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದಿರುವ ಭತ್ತದ ಬೆಳೆ , ಮಳೆಗೆ ಉದುರಿ ಹೋಗುತ್ತಿದೆ. ಕೊಡಗಿನಲ್ಲಿ ಹಲವು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪ್ರಸ್ತುತ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗಿದೆ.

Latest Videos

undefined

ಇತ್ತೀಚೆಗೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಗದ್ದೆಗಳನ್ನು ತುಳಿದು ಹಾಳು ಮಾಡುತ್ತಿವೆ. ಇದರಿಂದ ಬೇಸತ್ತ ರೈತರು ಭತ್ತ ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ. ಇದರ ನಡುವೆ ರೈತರು ಕಷ್ಟಪಟ್ಟು ಬೆಳೆದಿದ್ದ ಭತ್ತದ ಬೆಳೆಗಳು ಬಲಿತು ಸಂಪೂರ್ಣವಾಗಿ ಒಣಗಿ ನಿಂತಿವೆ. ಹೀಗಾಗಿ ಅದನ್ನು ಈಗಾಗಲೇ ಕೊಯ್ಲು ಮಾಡಬೇಕಾಗಿತ್ತು. ಆದರೆ ನಾಲ್ಕು ದಿನಗಳಿಂದ ಆಗಿಂದಾಗ್ಗೆ ಮಳೆ ಸುರಿಯುತ್ತಿರುವುದರಿಂದ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಕೊಯ್ಲು ಮಾಡಿದರೆ ಗದ್ದೆಯಲ್ಲಿ ಭತ್ತದ ಹುಲ್ಲು ನೆನೆದು ಕರಗುವ ಆತಂಕವಿದೆ. ಗದ್ದೆಯಲ್ಲಿ ಹುಲ್ಲು ನೆನೆಯಿತ್ತೆಂದರೆ ಮತ್ತೆ ಅದನ್ನು ಒಣಗಿಸಿ ಒಕ್ಕಣೆ ಮಾಡಲು ಸಾಗಿಸುವುದು ಇನ್ನೂ ಕಷ್ಟದ ಕೆಲಸ. ಒಣಗಲಿ ಎಂದು ಗದ್ದೆಯಲ್ಲಿ ಬಿಟ್ಟರೆ ಅಲ್ಲಿಯೇ ಭತ್ತವೆಲ್ಲಾ ಮೊಳಕೆಯೊಡೆದು ಹಾಳಾಗಲಿದೆ.

ಹೀಗಾಗಿ ಕೊಯ್ಲು ಮಾಡುತ್ತಿಲ್ಲ ಎನ್ನುತ್ತಾರೆ ರೈತರು. ಕೊಯ್ಲು ಮಾಡದೆ  ಹಾಗೆಯೇ ಬಿಟ್ಟಿರುವುದರಿಂದ ಮಳೆಗೆ ಸಾಕಷ್ಟು ಭತ್ತ ಉದುರಿ ಹೋಗುತ್ತಿದೆ. ಜೊತೆಗೆ ಮಳೆಯಲ್ಲಿ ನೆನೆದು ಭತ್ತ ಕಪ್ಪಾಗುತ್ತಿದೆ. ಇನ್ನಷ್ಟು ಜೊಳ್ಳುಗಳಾಗುತ್ತಿವೆ. ಇದರಿಂದ ಅರ್ಧಕ್ಕೆ ಅರ್ಧಷ್ಟು ಬೆಳೆ ನಷ್ಟವಾಗುವ ಆತಂಕ ಎದುರಿಸುತ್ತಿದ್ದಾರೆ. ಮಳೆ ಹೀಗೆ ಮುಂದುವರೆದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಪ್ರದೀಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಗಣಿಕಾರಿಕಾ ಕೇಂದ್ರದಲ್ಲಿ ಭೂಸುಕಿತ, 620 ಅಡಿ ಆಳದಲ್ಲಿ ಕಾಫಿ ಪುಡಿಯಿಂದ 9 ದಿನ ಬದುಕುಳಿದ ಕಾರ್ಮಿಕರು!

ಕೊಡಗಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಈಗಾಗಲೇ ಹಣ್ಣಾಗಿದ್ದು, ಕಾಫಿ ಕೊಯ್ಲು ಮಾಡಲಾಗುತಿತ್ತು. ಆದರೆ ಮಳೆ ಸುರಿಯುತ್ತಿರುವುದರಿಂದ ಕಾಫಿ ಹಣ್ಣನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಕೊಯ್ಲು ಮಾಡಿದರೆಂದರೆ ಮಳೆ ಸುರಿಯುತ್ತಿರುವುದರಿಂದ ಕಾಫಿ ಪಲ್ಪಿಂಗ್ ಮಾಡಿ ಒಣಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗಿಡದಲ್ಲಿಯೇ ಕಾಫಿ ಹಣ್ಣು ಉಳಿದಿದ್ದು, ಮಳೆಗೆ ಗಿಡದಲ್ಲಿಯೇ ಹಣ್ಣು ಒಡೆದು ಹಾಳಾಗುತ್ತಿದೆ. ಹೀಗಾಗಿ ಹಣ್ಣು ಕೊಳೆತು ಉದುರಿ ಭೂಮಿ ಸೇರುತ್ತಿದೆ. ಅಷ್ಟೇ ಅಲ್ಲ ಜೊತೆಗೆ ಕಾಫಿ ತೋಟದಲ್ಲಿಯೇ ಪರ್ಯಾಯ ಆದಾಯದ ಮೂಲವಾಗಿರುವ ಕಾಳುಮೆಣಸು ಬೆಳೆಕೂಡ ಹಾಳಾಗುತ್ತಿದೆ. ಕಾಳುಮೆಣಸು ಫಸಲು ಬಂದಿದ್ದ ಅದನ್ನು ಕೊಯ್ಲು ಮಾಡಿ ಒಣಗಿಸಲು ಆಗುತ್ತಿಲ್ಲ.

 

Kodagu; ರಾಜಸೀಟಿನಲ್ಲಿ ಎರಡು ದಿನಗಳ ಕಾಲ ನಡೆದ ಕಾಫಿ ಉತ್ಸವ, ನಿಗರ್ಸದಲ್ಲಿ ಕಾಫಿ ಸವಿದ ಪ್ರವಾಸಿಗರು

ಕೊಯ್ಲು ಮಾಡಿದರೆ ಒಣಗಿಸಲಾಗದೆ ಎಲ್ಲವೂ ಕರಗಿ ಹಾಳಾಗುವ ಆತಂಕವಿದೆ. ಕೊಯ್ಲು ಮಾಡದಿದ್ದರೆ ಬಳ್ಳಿಯಲ್ಲಿಯೇ ಉದುರಿ ಹೋಗುವ ಪರಿಸ್ಥಿತಿ ಇದೆ. ಇದರಿಂದ ಕಾಫಿ ಬೆಳೆಗಾರರಿಗೂ ಸಾಕಷ್ಟು ನಷ್ಟವಾಗುತ್ತಿದೆ ಎಂದು ಬೆಳೆಗಾರರಾದ ಪ್ರವೀಣ್ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಾಂಡೌಸ್ ಚಂಡಮಾರುತ್ತದ ಪರಿಣಾಮವಾಗಿ ಕೊಡಗಿನಲ್ಲೂ ಹವಾಮಾನ ಬದಲಾಗಿದ್ದು, ರೈತರ ಹಲವು ಬೆಳೆಗಳು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

click me!