ಜಾಗೃತಿ ಕೊರತೆಯಿಂದಾಗಿ ಕೊರೋನಾ ಸೋಂಕು ಹೆಚ್ಚಳ

By Kannadaprabha NewsFirst Published Aug 12, 2020, 8:57 AM IST
Highlights

ಜನ ಪರಸ್ಪರ ಮಾತನಾಡುವಾಗ ಮೂಗು, ಬಾಯಿಯಿಂದ ಮಾಸ್ಕ್‌ ಗಲ್ಲಕ್ಕೆ ಜಾರಿಸುತ್ತಿರುವುದು, ಪ್ರತಿದಿನ ಮಾಸ್ಕ್‌ ಬದಲಾಯಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸೋಂಕು ಆವರಿಸಿಕೊಳ್ಳಲು ಮುಖ್ಯ ಕಾರಣ ಎಂದು ಕೋವಿಡ್‌-19 ತಾಲೂಕು ನೋಡಲ್‌ ಅಧಿಕಾರಿ ಡಾ. ಮಧುಸೂದನ್‌ ಹೇಳಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮೂಡಿಗೆರೆ(ಆ.12): ಜನ ಮಾಸ್ಕ್‌ ಧರಿಸುವ ವಿಧಾನ ಹಾಗೂ ಸಾಮಾಜಿಕ ಅಂತರ ಬಗ್ಗೆ ಸರಿಯಾಗಿ ಅರಿವು ಹೊಂದಿಲ್ಲದಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚಾಗಲು ಕಾರಣವಾಗಿದೆ ಎಂದು ಕೋವಿಡ್‌-19 ತಾಲೂಕು ನೋಡಲ್‌ ಅಧಿಕಾರಿ ಡಾ. ಮಧುಸೂದನ್‌ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಇದುವರೆಗೆ 90 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಾಲ್ವರು ಮೃತಪಟ್ಟಿದ್ದಾರೆ. 23 ಮಂದಿಗೆ ಮನೆಯಲ್ಲೇ ಐಸೋಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 67 ಮಂದಿ ಗುಣಮುಖರಾಗಿದ್ದಾರೆ. 32 ಕಂಟೇನ್ಮೆಂಟ್‌ ವಲಯದ ಪೈಕಿ 15 ತೆರವುಗೊಂಡಿವೆ. 17 ಮುಂದುವರಿದಿವೆ. ಜನ ಪರಸ್ಪರ ಮಾತನಾಡುವಾಗ ಮೂಗು, ಬಾಯಿಯಿಂದ ಮಾಸ್ಕ್‌ ಗಲ್ಲಕ್ಕೆ ಜಾರಿಸುತ್ತಿರುವುದು, ಪ್ರತಿದಿನ ಮಾಸ್ಕ್‌ ಬದಲಾಯಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸೋಂಕು ಆವರಿಸಿಕೊಳ್ಳಲು ಮುಖ್ಯ ಕಾರಣ ಎಂದು ತಿಳಿಸಿದರು.

ಕೊರೋನಾ; ಮೃತಪಟ್ಟ ತಂದೆ ದೇಹ ನೋಡಲು ಸ್ಮಶಾನದಲ್ಲಿ ಆಸ್ಪತ್ರೆಯ ಚೌಕಾಶಿ ವ್ಯವಹಾರ!

ಎನ್‌-95 ಮಾಸ್ಕ್‌ ಧರಿಸುವವರು ಒಬ್ಬರು 6 ಮಾಸ್ಕ್‌ ಖರೀದಿಸಬೇಕು. ವಾರದ ಮೊದಲ ದಿನ ಧರಿಸಿದ್ದನ್ನು ಪೇಪರ್‌ ಬ್ಯಾಗ್‌ನಲ್ಲಿ ತೆಗೆದಿರಿಸಿ 6ನೇ ದಿನ ಮತ್ತೆ ಅದನ್ನು ತೊಳೆಯದೇ ಬಳಸಬೇಕು. ತೊಳೆದರೆ ಅದರ ಗುಣಮಟ್ಟ ಕ್ಷೀಣಿಸುತ್ತದೆ. ಬಟ್ಟೆಮಾಸ್ಕ್‌ ಧರಿಸುವವರು ಪ್ರತಿದಿನ ತೊಳೆದು ಇಸ್ತ್ರೀ ಮಾಡಿ ಬಳಸಬೇಕು ಎಂದು ಮಾಹಿತಿ ನೀಡಿದರು.

ಉಗುಳು ಬಳಸುವ ವ್ಯಾಪಾರಿಗಳಿಗೆ ದಂಡ:

ತರಕಾರಿ, ದಿನಸಿ, ಮೀನು, ಕೋಳಿ, ಕುರಿ ಮಾಂಸ ಸೇರಿ ಬಹುತೇಕ ಎಲ್ಲಾ ವ್ಯಾಪಾರ ಕೇಂದ್ರದಲ್ಲಿ ಪ್ಲಾಸ್ಟಿಕ್‌ ಬಾಯಿ ತೆರೆಯುವಾಗ ಹಾಗೂ ಹಣ ಎಣಿಸುವಾಗ ಬಾಯಿಗೆ ಕೈ ಹಾಕಿ ಎಂಜಲು ಹಾಕುತ್ತಿರುವುದು ವ್ಯಾಪಕವಾಗಿ ಕಂಡು ಬರುತ್ತಿದೆ. ವ್ಯಾಪಾರಿಗಳಿಂದಲೇ ವೈರಸ್‌ ಹರಡುವ ಅಪಾಯವಿದೆ. ಹಾಗಾಗಿ ಎಂಜಲು ಮುಟ್ಟಿಪ್ಲಾಸ್ಟಿಕ್‌ ಬಾಯಿ ತೆರೆಯುವುದು, ಹಣ ಎಣಿಸುವುದು, ನಂತರ ತರಕಾರಿ, ದಿನಸಿ ಪದಾರ್ಥ ಮುಟ್ಟುವ ವ್ಯಾಪಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

click me!