7 ವರ್ಷಗಳ ಬಳಿಕ ಐಎಸ್‌ಡಿ ಠಾಣೆಯಲ್ಲಿ ಪ್ರಕರಣ ದಾಖಲು| ಭಾಸ್ಕರ್ ರಾವ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡ್ರಗ್ಸ್ ದಂಧೆಕೋರರಿಗೆ ಬಿಸಿ| ರಾಜ್ಯ ವ್ಯಾಪ್ತಿ ಅಧಿಕಾರ ಹೊಂದಿರುವ ಐಎಸ್‌ಡಿ ಠಾಣೆಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ಥಾಪನೆ|
ಬೆಂಗಳೂರು(ಆ.12): ಏಳು ವರ್ಷಗಳ ಬಳಿಕ ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸ್ ಠಾಣೆಗೆ ಮತ್ತೆ ಜೀವ ಬಂದಿದ್ದು, ಇದೇ ಮೊದಲ ಬಾರಿಗೆ ಮಾದಕ ಮಾರಾಟ ಜಾಲದ ಇಬ್ಬರನ್ನು ಬಂಧಿಸಿ ಐಎಸ್‌ಡಿ ಜೈಲಿಗೆ ಅಟ್ಟಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತ ಹುದ್ದೆಯಿಂದ ನಿಗರ್ಮನಗೊಂಡ ಭಾಸ್ಕರ್ ರಾವ್, ಐಎಸ್‌ಡಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಆ ವಿಭಾಗವನ್ನು ಚುರುಕುಗೊಳಿಸಿದ್ದಾರೆ.
ರಾಜ್ಯ ವ್ಯಾಪ್ತಿ ಅಧಿಕಾರ ಹೊಂದಿರುವ ಐಎಸ್‌ಡಿ ಠಾಣೆಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಅಕ್ರಮ ಸಶಸ್ತ್ರ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ, ಸ್ಫೋಟಕ ವಸ್ತುಗಳ ಸಂಗ್ರಹ, ಸ್ಫೋಟ ಸಾಗಾಟ, ಆಟೋಮೆಷನ್ ಕಾಯ್ದೆ ಹಾಗೂ ದೇಶದ ಭದ್ರತೆಗೆ ಆತಂಕ ಮತ್ತು ದೇಶ ದ್ರೋಹ ಸೇರಿದಂತೆ 10 ವಿಶೇಷ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬಹುದಾಗಿದೆ. ಈ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಲು ನಿರ್ಧರಿಸಲಾಗಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ದಾಂಧಲೆಯ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ
ಕೆ.ಆರ್.ಪುರದ ಐಟಿಐ ವಸತಿ ಸಮುಚ್ಛಯ ಸಮೀಪ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆ.ಆರ್.ಪುರದ ಲಾರೆನ್ಸ್ ಮತ್ತು ಗುಲಾಬ್ ಖಾನ್‌ನನ್ನು ಬಂಧಿಸಿ, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಸ್ವತಂತ್ರ ತನಿಖೆಗೆ ಹಿಂಜರಿಕೆ:
2015ರಲ್ಲಿ ಬೆಂಗಳೂರು ಹಾಗೂ ಭಟ್ಕಳದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರನ್ನು ಬೆಂಗಳೂರು ನಗರ ಹಾಗೂ ಐಎಸ್‌ಡಿ ಪೊಲೀಸರು ಬಂಧಿಸಿದ್ದರು. ಅಲ್ಲದೆ 2019ರಲ್ಲಿ ಸಹ ದಕ್ಷಿಣ ಭಾರತ ಐಸಿಸ್ ಸಂಘಟನೆಯ ಸಂಘಟನೆ ಸಜ್ಜಾಗಿದ್ದ ಜಿಹಾದಿ ಗ್ಯಾಂಗ್ ವಿರುದ್ಧ ಕಾರ್ಯಾಚರಣೆಯಲ್ಲಿ ಸಹ ಐಎಸ್‌ಡಿ ಪಾತ್ರವಹಿಸಿತ್ತು. ಇನ್ನು ಕಾನೂನು ಉಲ್ಲಂಘಿಸಿದ ಆರೋಪದ ಮೇರೆಗೆ ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ ವಿರುದ್ಧ ಐಎಸ್‌ಡಿ ಎಫ್‌ಐಆರ್‌ಗಳನ್ನು ದಾಖಲಿಸಿತ್ತು. ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೂ ಆರೋಪ ಪಟ್ಟಿಸಲ್ಲಿಸಿದ್ದರು. ಇದೀಗ ಡ್ರಗ್ಸ್ ದಂಧೆ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಮಾದಕ ವಸ್ತು ಜಾಲ ಸೇರಿದಂತೆ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳ ಸಂಬಂಧ ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಐಎಸ್‌ಡಿ ಹಿಂಜರಿದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಎಸ್‌ಡಿಯಲ್ಲಿ 2013ರಲ್ಲಿ ಪೊಲೀಸ್ ಠಾಣೆ ಸ್ಥಾಪಿಸಿದ್ದರೂ ಕಾರ್ಯ ಚಟುವಟಿಕೆ ಶುರುವಾಗಿರಲಿಲ್ಲ. ಈಗ ಠಾಣೆಗೆ ಚಾಲನೆ ನೀಡಲಾಗಿದ್ದು, ಆ.5 ರಂದು ಮಾದಕ ಜಾಲದ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ. ಈ ಕೆಲಸಕ್ಕೆ ಗೃಹ ಸಚಿವರು ಹಾಗೂ ಡಿಜಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾವ್ ಐಎಸ್‌ಡಿ ಎಡಿಜಿಪಿ ಎಸ್.ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.