ಕೆಎಎಸ್ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ರ‌್ಯಾಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆದು ಮುಖ್ಯಾಧಿಕಾರಿ ಹುದ್ದೆಗೆ ಏರಿದ ಮಂಜುನಾಥ ಮಲ್ಲಪ್ಪ ಗುಂಡೂರು|ತಂದೆ ಇಲ್ಲದ ತಬ್ಬಲಿ, ತಾಯಿ ಕೂಲಿ ಮಾಡಿಯೇ ಮಗನನ್ನು ಸಲುಹಿದ್ದಾಳೆ| ಬಡತನದಿಂದಾಗಿ ನಿಗದಿತವಾಗಿ ಕಾಲೇಜಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಾಗದೇ ದೂರ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪಡೆದಿರುವ ಮಂಜುನಾಥಗೆ ಹತ್ತು ಸರ್ಕಾರಿ ನೌಕರಿಗಳು ಒಲಿದು ಬಂದಿವೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ[ಡಿ.25]: ಸರ್ಕಾರಿ ನೌಕರಿ ಪಡೆಯಲು ಹರಸಾಹಸ ಮಾಡುತ್ತಾರೆಯಾದರೂ ದಕ್ಕುವುದು ವಿರಳ. ಇಲ್ಲೊಬ್ಬ ಪ್ರತಿಭಾನ್ವಿತನಿಗೆ ಹತ್ತು ಬಾರಿ ಸರ್ಕಾರಿ ನೌಕರಿ ಭಾಗ್ಯ ಒಲಿದು ಬಂದಿದೆ. ಈಗ ಕೆಎಎಸ್ ಪಾಸಾಗುವ ಮೂಲಕ ಮುಖ್ಯಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಹೊರತಟ್ನಾಳ ಗ್ರಾಮದ ನಿವಾಸಿ ಮಂಜುನಾಥ ಮಲ್ಲಪ್ಪ ಗುಂಡೂರು ಈ ಸಾಧನೆ ಮಾಡಿದವರು. ತಂದೆ ಇಲ್ಲದ ತಬ್ಬಲಿ, ತಾಯಿ ಕೂಲಿ ಮಾಡಿಯೇ ಮಗನನ್ನು ಸಲುಹಿದ್ದಾಳೆ. ಬಡತನದಿಂದಾಗಿ ನಿಗದಿತವಾಗಿ ಕಾಲೇಜಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಾಗದೇ ದೂರ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪಡೆದಿರುವ ಮಂಜುನಾಥಗೆ ಹತ್ತು ಸರ್ಕಾರಿ ನೌಕರಿಗಳು ಒಲಿದು ಬಂದಿವೆ. ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಕೆಎಎಸ್ ಪರೀಕ್ಷೆ ಬರೆದು ಕಲ್ಯಾಣ ಕರ್ನಾಟಕ ರಾರಯಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆದು ಮುಖ್ಯಾಧಿಕಾರಿ ಹುದ್ದೆಗೆ ಏರಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಎಎಸ್ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 6ನೇ ರ‌್ಯಾಂಕ್ ಬಂದಿರುವುದಕ್ಕೆ ಖುಷಿಯಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗಲೇ ಬೇಕು ಎನ್ನುವ ಛಲದಂಕ ಮಲ್ಲನಂತೆ ಶ್ರಮಿಸಿ ಯಶಸ್ವಿಯಾಗಿದ್ದಾರೆ.
ಅರಸಿ ಬಂದ ನೌಕರಿಗಳು:
ಪಿಯುಸಿ ಅರ್ಹತೆಯ ಮೇಲೆ ಬರೆದು ಎಸ್‌ಡಿಎ ಹುದ್ದೆಗೆ ನೇಮಕವಾಗುತ್ತಾರೆ. ಮೂರು ಬಾರಿ ಎಸ್‌ಡಿಎ ಹುದ್ದೆಗೆ ಆಯ್ಕೆಯಾಗಿ, ಅಕೌಂಟೆಂಟ್ ಹುದ್ದೆ ಸ್ವೀಕರಿಸುತ್ತಾರೆ. ಇದಾದ ಮೇಲೆ ಎಫ್‌ಡಿಎ ಹುದ್ದೆ ಲಭಿಸುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿಯೂ ಅವಕಾಶ ದೊರೆಯುತ್ತದೆ. ಆದರೆ, ಆಡಳಿತಾಧಿಕಾರಿಯೇ ಆಗಬೇಕು ಎನ್ನುವ ಕಾರಣಕ್ಕೆ ಇವುವೆಲ್ಲವನ್ನು ತಿರಸ್ಕರಿಸುತ್ತಾರೆ. ಕೊನೆಗೆ ಪಿಡಿಒ ಆಗಿ ಕೊಪ್ಪಳ ತಾಲೂಕಿನ ಗಿಣಿಗೇರಿಯಲ್ಲಿ ಸದ್ಯ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಇದೀಗ ಎರಡನೇ ಬಾರಿ ಕೆಎಎಸ್ ಪಾಸಾಗಿದ್ದಾರೆ. ಈ ಹಿಂದೆ ತೇರ್ಗಡೆಯಾದಾಗ ಸಂದರ್ಶನದಲ್ಲಿ ವಿಫಲರಾದರೂ ಛಲಬಿಡದೆ ಮತ್ತೆ ಈ ವರ್ಷ ಬರೆದು ತೇರ್ಗಡೆಯಾಗಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ 6ನೇ ರ‌್ಯಾಂಕ್ ಪಡೆದುಕೊಂಡಿದ್ದು, ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ ಗ್ರೇಡ್ 1 ಹುದ್ದೆ ಅರಸಿ ಬಂದಿದೆ.
ಓದಿದ್ದು ದೂರ ಶಿಕ್ಷಣ:
ಮಂಜುನಾಥ 6ನೇ ತರಗತಿ ಓದುತ್ತಿರುವಾಗಲೇ ತಂದೆ ತೀರಿ ಹೋಗಿದ್ದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಾಯಿ ಕೂಲಿ ಮಾಡಿಯೇ ಮಕ್ಕಳನ್ನು ಸಲಹಬೇಕು. ಮೂವರು ತಂಗಿಯರು ಹಾಗೂ ಓರ್ವ ತಮ್ಮನಿದ್ದಾರೆ. ಹೇಗೋ ಪಿಯುಸಿ ವರೆಗೂ ಶಿಕ್ಷಣ ಮುಗಿಸಿದ ನಂತರ ಮುಂದೆ ಓದಲು ಬಡತನ ಅಡ್ಡಿಯಾಯಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ, ಮೈಸೂರು ಮಾನಸಗಂಗೋತ್ರಿ ವಿವಿಯಲ್ಲಿ ದೂರ ಶಿಕ್ಷಣದ ಮೂಲಕ ಪದವಿ, ಸ್ನಾತಕ್ಕೋತ್ತಕ ಪದವಿ ಪಡೆದುಕೊಂಡಿದ್ದಾರೆ. ಹೀಗೆ ಪಡೆಯುತ್ತಲೇ ಡಿಇಡಿ, ಬಿಇಡಿ ಕೋರ್ಸ್ ಸಹ ಮುಗಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಂಜುನಾಥ ಗುಂಡೂರು ಅವರು, ನನಗೆ ತುಂಬಾ ಖುಷಿಯಾಗಿದೆ. ಈ ವರೆಗೂ 8 ಹುದ್ದೆಗಳು ಬಂದಿದ್ದರೂ ಇಷ್ಟು ಖುಷಿಯಾಗಿರಲಿಲ್ಲ. ಈಗ ಕೆಎಎಸ್ ಪಾಸಾಗಿರುವುದು, ಮುಖ್ಯಾಧಿಕಾರಿ ಹುದ್ದೆ ಬಂದಿರುವುದು ಖುಷಿಯಾಗಿದೆ ಎಂದು ತಿಳಿಸಿದ್ದಾರೆ.