
ಬೆಂಗಳೂರು (ಆ.31): ಒಂದು ಆಪರೇಶನ್ ಅರಗಿಸಿಕೊಂಡು ಸುಧಾರಿಸಿಕೊಳ್ಳುವುದು ಕಷ್ಟ. ಅದರಲ್ಲೂ ಹೃದಯ ಆಪರೇಶನ್ ಅಂದರೆ ಅದನ್ನು ಊಹಿಸಿಕೊಳ್ಳುವುದು ಇನ್ನೂ ಕಷ್ಟ. 1986ರಿಂದ ಈತನ ಹೃದಯಕ್ಕೆ ಸಂಬಂಧಿಸಿದಂತೆ 22 ಬಾರಿ ಎದೆಗುಂದದೆ ಆಪರೇಶನ್‌ಗೆ ತನ್ನೆದೆಯನ್ನು ಒಡ್ಡಿ ಇಂದಿಗೂ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಪ್ಪತ್ತೈದನೇ ವಸಂತಕ್ಕೆ ಕಾಲಿರಿಸಿರುವ ಹಿರಿಯ ಪತ್ರಕರ್ತ ಎನ್.ಎಸ್.ರಾಮಚಂದ್ರ ಅವರನ್ನು ಬಸವೇಶ್ವರ ನಗರದ ಅವರ ಮನೆಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸನ್ಮಾನಿಸಿತು.
ಸ್ವಾತಂತ್ರ್ಯತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದ ಸರಣಿಯಲ್ಲಿ ರಾಮಚಂದ್ರ ಅವರನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಮತದ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿ ಈ ಸಂಜೆ, ಅರಗಿಣಿ ಪತ್ರಿಕೆಯಲ್ಲಿ ಸತತವಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ, ಈಗಲೂ ಅಂಕಣಗಳನ್ನು ಬರೆಯುತ್ತಿರುವ ರಾಮಚಂದ್ರ ಅವರು ಸ್ಪೂರ್ತಿಯ ಸೆಲೆ ಎಂದರು. ಕೇವಲ ಪತ್ರಕರ್ತರಾಗಿ ಅಷ್ಟೇ ಅಲ್ಲ, ಅಂಬರೀಶ್ ಅಭಿನಯದ ಒಲವಿನ ಉಡುಗೊರೆ ಸಿನೆಮಾ ನಿರ್ಮಾಕ ಎನ್ನುವುದು ಅಭಿಮಾನದ ಸಂಗತಿ.
ಮಾದರಿ ಕ್ಷೇತ್ರ ಮಾಡುವುದು ನನ್ನ ಜೀವನದ ಗುರಿ: ಸಾ.ರಾ.ಮಹೇಶ್
ಹೊಸ ರಾಗ, ಗುಂಡನ ಮದುವೆ ಸೇರಿದಂತೆ ಹಲವಾರು ಸಿನಿಮಾಗಳ ಪ್ರೊಡಕ್ಷನ್ಸ್‌ನಲ್ಲಿ ಇವರ ಪಾತ್ರವಿದೆ. ಆದರೂ ತನ್ನೊಳಗಿನ ಪತ್ರಕರ್ತ ಕಳೆದು ಹೋಗದಂತೆ ಕಾಪಿಟ್ಟುಕೊಂಡಿರುವುದು ವಿಶೇಷ ಎಂದರು. ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದ ರಾಮಚಂದ್ರ ಅವರು, ಎಪ್ಪತ್ತರ ದಶಕದಲ್ಲಿ ನಾನು ಪತ್ರಿಕೋದ್ಯಮ ಪ್ರವೇಶಿಸಿದೆ. ಅದಕ್ಕೂ ಮೊದಲು ನನ್ನ ಹೆಸರಿನ ಮುಂದೆ ಜರ್ನಲಿಸ್ಟ್ ಎಂದು ಹಾಕಿಕೊಳ್ಳುತ್ತಿದ್ದೆ. ಬಳಿಕ ಪತ್ರಕರ್ತನಾಗುವ ಅವಕಾಶ ದೊರೆಯಿತು ಎಂದರು. ಸಿನೆಮಾ ಅಂಕಣ ಗುರುತಿಸಿ ಚಿಕ್ಕಮಗಳೂರಿನಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿದೆ.
ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಕೂಡ ಗೌರವಿಸಿದೆ ಎಂದರು. ಪತ್ರಕರ್ತ ಆಗಲೇಬೇಕು ಎನ್ನುವ ತುಡಿತ ಇಷ್ಟು ಎತ್ತರಕ್ಕೆ ಕರೆದುಕೊಂಡು ಬಂದು ಗೌರವ ನೀಡಿದೆ. ನಾನು ಕೆಯುಡಬ್ಲ್ಯೂಜೆ ಸದಸ್ಯನಾಗಿದ್ದೆ. ಈಗ ಸಂಘವೇ ನಮ್ಮ ಮನೆಯಂಗಳದಲ್ಲಿ ಸನ್ಮಾನಿಸಿರುವುದು ಜೀವನದ ಅವಿಸ್ಮರಣೀಯ ದಿನ. ನನ್ನ ಜೀವನೋತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. 1986 ರಲ್ಲಿ ಹೃದಯದ ಸಮಸ್ಯೆ ತಲೆದೋರಿತು. ಆಗಿನಿಂದ ಈತನಕ ಸ್ಟಂಟ್, ಒಪನ್ ಹಾರ್ಟ್ ಸರ್ಜರಿ, ಫೇಸ್ ಮೇಕರ್ ಸರ್ಜರಿ ಸೇರಿದಂತೆ 22 ಬಾರಿ ಸರ್ಜರಿ ಆಗಿದೆ. ಆಸ್ಪತ್ರೆಗೆ ಹೋದಾಗಲೆಲ್ಲ ವೈದ್ಯರು ನಿಬ್ಬೆರಗಾಗಿ ನೋಡಿ, ಬೇರೆಯವರಿಗೆ ಉದಾಹರಣೆ ಕೊಡುತ್ತಾರೆ.
ಸಾಕು ಪ್ರಾಣಿಗಳ ಆರೋಗ್ಯಕ್ಕಾಗಿ ಆಸ್ಪತ್ರೆಗಳು ಅವಶ್ಯಕ: ಪರಮೇಶ್ವರ್
ಮನೆಯವರ ಪ್ರೀತಿ, ದೇವರ ಆರ್ಶೀವಾದದಿಂದ ಆರೋಗ್ಯವಾಗಿದ್ದೇನೆ. ಪತ್ರಕರ್ತನಾಗಿ ಬರೆಯುತ್ತಾ, ಓದುತ್ತಾ ಸಮಸ್ಯೆ ಮರೆತುಬಿಡುತ್ತೇನೆ ಎಂದು ತಮ್ಮ ಆರೋಗ್ಯದ ಗುಟ್ಟು ಹೇಳಿಕೊಂಡರು. ನನ್ನ ಎಲ್ಲರೂ ಮರೆತಿದ್ದಾರೆ ಎಂದುಕೊಂಡಾಗಲೇ ನೆನಪಿಸಿಕೊಂಡು ಮನೆಗೆ ಬಂದಿರುವುದು ನನಗೆ ಇನ್ನಷ್ಟು ಧೈರ್ಯ ಬಂದಿದೆ ಎಂದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಜಕ್ರಿಯಾ, ಹರೀಶ್ ಮತ್ತಿತರರು ಹಾಜರಿದ್ದರು.