ಕುವೆಂಪು ಅವರ ಕಾದಂಬರಿಗಳು ಯುವಜನತೆಗೆ ಸ್ಪೂರ್ತಿ : ಫ್ರೊ. ಗೋವಿಂದರಾಯ

By Kannadaprabha News  |  First Published Jan 11, 2024, 10:58 AM IST

ಕನ್ನಡ ಸಾಹಿತ್ಯದ ಸೃಜಶೀಲನತೆ ಮತ್ತು ವೈಚಾರಿಕತೆಯ ಉತ್ಕರ್ಷದ ಪ್ರತಿನಿಧಿಯಾಗಿದ್ದ ಕುವೆಂಪು ಅವರು ಬರೆದಿರುವ ಕಾದಂಬರಿಗಳು, ಕವಿತೆಗಳು, ಪುಸ್ತಕಗಳು ಯುವಜನತೆಗೆ ಸ್ಪೂರ್ತಿದಾಯಕವಾಗಿವೆ


ತಿಪಟೂರು : ಕನ್ನಡ ಸಾಹಿತ್ಯದ ಸೃಜಶೀಲನತೆ ಮತ್ತು ವೈಚಾರಿಕತೆಯ ಉತ್ಕರ್ಷದ ಪ್ರತಿನಿಧಿಯಾಗಿದ್ದ ಕುವೆಂಪು ಅವರು ಬರೆದಿರುವ ಕಾದಂಬರಿಗಳು, ಕವಿತೆಗಳು, ಪುಸ್ತಕಗಳು ಯುವಜನತೆಗೆ ಸ್ಪೂರ್ತಿದಾಯಕವಾಗಿವೆ. ಅವುಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಗೋವಿಂದರಾಯ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವಿಭಾಗದಿಂದ ಆಯೋಜಿಸಿದ್ದ ನುಡಿ ನಮನ ಮತ್ತು ಗೀತ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಮತ್ತು ಯುಗ ಪ್ರಜ್ಞೆಗಳೆರಡರ ಸಮನ್ವಯವೇ ಕುವೆಂಪು ದರ್ಶನದ ವೈವಿದ್ಯತೆಯಾಗಿದ್ದು, ಅವರ ವಿಶ್ವ ಮಾನವ ಸಂದೇಶ, ಅನಿಕೇತನ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿ ಇಂದಿನ ಸಮಾಜಕ್ಕೆ ಅಗತ್ಯವಿದೆ. ಕುವೆಂಪು ಈ ಜಗದ ಬೆಳಕು ಅವರ ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಒಳಗೊಂಡಿದೆಎಂದರು.

Tap to resize

Latest Videos

undefined

ಅವರ ಸಾಹಿತ್ಯದಲ್ಲಿ ಹೆಚ್ಚಾಗಿ ನಿಸರ್ಗದ ಬಗ್ಗೆ ಪ್ರೇಮ ಕಾವ್ಯದ ಬಗ್ಗೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳನ್ನು ಅವರ ಸಾಹಿತ್ಯ ಕೊಡುಗೆ ಇದೆ. ಆದ್ದರಿಂದ ಅವರು ಬರೆದಿರುವಂತಹ ಪುಸ್ತಕಗಳು, ಕಾದಂಬರಿಗಳನ್ನು ಓದುವ ಮೂಲಕ ಸಾಹಿತ್ಯಾಭ್ಯಾಸ ಮಾಡಬೇಕು. ಜ್ಞಾನಕ್ಕಿಂತ ವರ್ತನೆ ಮತ್ತು ನಡವಳಿಕೆ ತುಂಬಾ ಮುಖ್ಯವಾಗುತ್ತದೆ. ಹೆಚ್ಚು ಜ್ಞಾನವನ್ನು ಸಂಪಾದಿಸಿ ನಿಮ್ಮ ಜ್ಞಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಸಾಧನೆ ಮಾಡಿ ತಂದೆ ತಾಯಿಗಳ ಕನಸನ್ನು ನನಸು ಮಾಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಕುವೆಂಪು ಅವರು ಬರೆಯದೆ ಇರುವ ಸಾಹಿತ್ಯ ಯಾವುದು ಇಲ್ಲ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿ ರಾಷ್ಟ್ರಕವಿ, ಯುಗದ, ಜಗದ ಕವಿ ಎಂದು ಬಿರುದಾಂಕಿತರಾದರು. ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿ ಸಾಹಿತ್ಯ ಲೋಕದಲ್ಲಿ ಅಜರಾಮರರಾಗಿ ಉಳಿದು ಈ ರಸ ಋಷಿಯ ಸಾಹಿತ್ಯ ಅಧ್ಯಯನ ಇಂದಿನ ಸಮಾಜಕ್ಕೆ ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳು ಕುವೆಂಪು ಅವರ ಎಲ್ಲಾ ಕೃತಿಗಳನ್ನು ಓದಿಕೊಂಡು ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ.ಟಿ. ವೆಂಕಟಾಚಲಯ್ಯ, ಕನ್ನಡ ವಿಭಾಗ ಮುಖ್ಯಸ್ಥೆ ಎಚ್.ಎಸ್. ಸ್ಮಿತಾ, ಅಧ್ಯಾಪಕರಾದ ಡಾ.ಎಂ.ಆರ್‌. ಚಿಕ್ಕಹೆಗ್ಗಡೆ, ಡಾ.ಎಲ್.ಎಂ. ವೆಂಕಟೇಶ್, ಸುರೇಶ್, ಶ್ರೀನಿವಾಸ್, ಕಲ್ಪನಾ, ಅರುಣ್‌ಕುಮಾರ್, ಗಿರೀಶ್‌ಕುಮಾರ್ ಸೇರಿದಂತೆ ಬೋದಕ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

click me!