ಉಡುಪಿ: ಕುಂದಾಪುರದ ಮಣಿಕಂಠಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ..!

By Kannadaprabha News  |  First Published Oct 14, 2023, 12:16 PM IST

ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಕುರಿತು ಪ್ರತಿಕ್ರಿಯಿಸಿದ ಮಣಿಕಂಠ, ರಸ್ತೆ ಪಕ್ಕದಲ್ಲಿ ಕುಳಿತು ಚಪ್ಪಲಿ ಹೊಲಿಯುವ ನಮ್ಮಂಥವರನ್ನೂ ಸರ್ಕಾರ ಗುರುತಿಸಿದೆ ಅಂದರೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದ ಮಣಿಕಂಠ


ಉಡುಪಿ(ಅ.14): ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆದು, ಸ್ವಉದ್ಯೋಗ ನಡೆಸಿ ಯಶಸ್ಸು ಕಂಡ ಉಡುಪಿ ಜಿಲ್ಲೆಯ ಕುಂದಾಪುರದ ಮಣಿಕಂಠ ಅವರು ಮುಂದಿನ ವರ್ಷ ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಮಣಿಕಂಠ (38) ಅವರು ಕಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಲಿಡ್ಕರ್‌ನ ಪಾದರಕ್ಷೆ ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದಾರೆ. ಮೂಲತಃ ಭದ್ರಾವತಿಯವರಾದ ಅವರ ಅಜ್ಜ ಮುನುಸ್ವಾಮಿ ಸುಮಾರು 50 ವರ್ಷಗಳ ಹಿಂದೆ ಇಲ್ಲಿಗೆ ಬಂದು ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಆರಂಭಿಸಿದರು. ಸ್ವಲ್ಪ ಸಮಯ ಮಣಿಕಂಠ ಅವರ ತಂದೆ ಇದನ್ನು ಮುಂದುವರಿಸಿದರು, ಅವರ ಅನಾರೋಗ್ಯದ ಮಣಿಕಂಠ ಈ ಕುಲಕಸುಬನ್ನು ಮುನ್ನಡೆಸುತ್ತಿದ್ದಾರೆ.

Tap to resize

Latest Videos

undefined

ಓಡಿಶಾದ ಮಾನಸಿಕ ಅಸ್ವಸ್ಥ ಕುಟುಂಬಕ್ಕೆ ಹಸ್ತಾಂತರ : ಕಳೆದ 10 ತಿಂಗಳಲ್ಲಿ 17 ಮಂದಿಯನ್ನು ಕುಟುಂಬಕ್ಕೆ ಹಸ್ತಾಂತರಿಸಿದ ವಿಶು ಶೆಟ್ಟಿ

ಚಪ್ಪಲಿ, ಕೊಡೆ ರಿಪೇರಿ ಮಾಡಿ ಬರುವ ಅಷ್ಟಿಷ್ಟು ಆದಾಯದಲ್ಲಿಯೇ ತಾಯಿ, ತಮ್ಮ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಮಣಿಕಂಠ, ಅಂಗಡಿಯಲ್ಲಿ ಮಾರಾಟಕ್ಕೆ ಚಪ್ಪಲಿ, ಕೊಡೆ ಮತ್ತು ರಿಪೇರಿಗೆ ಬೇಕಾದ ಇತರ ಕಚ್ಚಾ ಸಾಮಗ್ರಿ ಖರೀದಿಗೆ ಅಲ್ಲಿ ಇಲ್ಲಿ ದುಬಾರಿ ಬಡ್ಡಿ ತೆತ್ತು ಸಾಲ ಪಡೆಯುತ್ತಿದ್ದರು. ಆದಾಯವೆಲ್ಲ ಸಾಲದ ಬಡ್ಡಿಗೆ ಸರಿದೂಗುತ್ತಿತ್ತು.

ಎರಡು ವರ್ಷಗಳ ಹಿಂದೆ ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಅವರಿಗೆ ಪಿಎಂ ಸ್ವನಿಧಿ (ಬೀದಿ ವ್ಯಾಪಾರಿಗಳಿಗೆ ನೀಡುವ ಸಾಲ) ಯೋಜನೆಯಡಿ 10 ಸಾವಿರ ರು. ಸಾಲ ನೀಡಿತು. ಶೇ.7ರ ಬಡ್ಡಿ ದರದ ಈ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠ 2,500 ರು.ನಂತೆ ಕಟ್ಟಿ ಐದೇ ತಿಂಗಳಲ್ಲಿ ತೀರಿಸಿದರು.

ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದ್ದನ್ನು ಮೆಚ್ಚಿ ಇಲಾಖೆ ಇನ್ನೂ 20 ಸಾವಿರ ರು. ಸಾಲ ನೀಡಿತು. ಅದರಿಂದ ಈ ಮಳೆಗಾಲದಲ್ಲಿ ಬೇಕಾಗುವ ಚಪ್ಪಲಿ ಮತ್ತು ಕೊಡೆಗಳನ್ನು ತಂದು ಮಾರಾಟ ಮಾಡಿ ಯಶಸ್ವಿಯೂ ಆದರು. ಲಾಭವನ್ನೂ ಗಳಿಸಿದರು, ಐದೇ ತಿಂಗಳಲ್ಲಿ ಪೂರ್ತಿ ಸಾಲ ಮರುಪಾವತಿಸಿದರು.

ಪ್ರಮೋದ್‌ ಮುತಾಲಿಕ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌: ಉಡುಪಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣ ನಿರ್ವಿಘ್ನ

10 ಸಾವಿರ ಸಾಲವನ್ನು ವರ್ಷಾನುಗಟ್ಟಲೇ ಮರುಪಾವತಿಸದೆ ಸತಾಯಿಸುವವರ ಮಧ್ಯೆ ಮಣಿಕಂಠ ಅವರ ಪ್ರಾಮಾಣಿಕತೆಗಾಗಿ ಇಲಾಖೆ ಮತ್ತೆ 50 ಸಾವಿರ ರು. ಸಾಲ ಮಂಜೂರು ಮಾಡಿದೆ. ಅದರಲ್ಲೀಗ ತನ್ನ ಚಪ್ಪಲಿ ಅಂಗಡಿ ಪಕ್ಕ ಸೀಟ್ ಕುಶನ್ ಅಂಗಡಿ ಹಾಕಿರುವ ತಮ್ಮನಿಗೂ ಸಹಾಯ ಮಾಡುವುದಾಗಿ ಹೇಳುತ್ತಾರೆ ಮಣಿಕಂಠ.

ನಮ್ಮಂಥವರನ್ನೂ ಗುರುತಿಸಿದ್ದಾರೆ-ಮಣಿಕಂಠ 

ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಕುರಿತು ಪ್ರತಿಕ್ರಿಯಿಸಿದ ಮಣಿಕಂಠ, ರಸ್ತೆ ಪಕ್ಕದಲ್ಲಿ ಕುಳಿತು ಚಪ್ಪಲಿ ಹೊಲಿಯುವ ನಮ್ಮಂಥವರನ್ನೂ ಸರ್ಕಾರ ಗುರುತಿಸಿದೆ ಅಂದರೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ತಮಗೆ ಸಿಕ್ಕಿದ್ದು ಸಣ್ಣ ಸಾಲವೇ ಆಗಿದ್ದರೂ, ಬಡ್ಡಿ ಕಮ್ಮಿ ಇದ್ದುದರಿಂದ ಲಾಭ ಹೆಚ್ಚು ಸಿಕ್ಕಿತು. ಆದ್ದರಿಂದ ಅದನ್ನು ತೀರಿಸುವುದೂ ಸುಲಭ ಆಯಿತು ಎನ್ನುತ್ತಾರೆ ಮಣಿಕಂಠ

click me!