ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕೃಷ್ಣಾಪುರ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಅವರಿಂದ ಪವಾಡ| ನಿತ್ರಾಣರಾಗಿದ್ದ ಶ್ರೀಗಳಿಗೆ ಶಿರಹಟ್ಟಿ ಫಕೀರೇಶ್ವರ ಶ್ರೀ, ಹೂವಿನಶಿಗ್ಲಿಯ ಚನ್ನವೀರ ಶ್ರೀ, ಹತ್ತಿಮತ್ತೂರಿನ ನಿಜಗುಣ ಶ್ರೀಗಳ ಸಮ್ಮುಖದಲ್ಲಿ ಹಾಲು ನೀಡಿ, ಕುಮಾರ ಮಹಾರಾಜರ ಅನುಷ್ಠಾನ ಮಂಗಲ ಹಾಡಲಾಯಿತು|
ಹಾವೇರಿ(ಸೆ.11): ಮುಚ್ಚಿದ ಗುಹೆಯಲ್ಲಿ 62 ದಿನಗಳ ಕಾಲ ನಿರಾಹಾರಿಯಾಗಿ ಮೌನಾನುಷ್ಠಾನದಲ್ಲಿ ನಿರತರಾಗಿದ್ದ ಜಿಲ್ಲೆಯ ಸವಣೂರು ತಾಲೂಕಿನ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿಯವರು ಗುರುವಾರ ಹೊರಬಂದಿದ್ದಾರೆ. ಶ್ರೀಗಳ ಪವಾಡವನ್ನು ಸಾವಿರಾರು ಭಕ್ತರು ಸೇರಿ ಕಣ್ಮುಂಬಿಕೊಂಡಿದ್ದಾರೆ.
ಲೋಕಕಲ್ಯಾಣಕ್ಕಾಗಿ ಹಾಗೂ ಕೊರೋನಾ ಮಹಾಮಾರಿ ತೊಲಗುವಂತೆ ಸಂಕಲ್ಪ ತೊಟ್ಟು ಕುಮಾರ ಮಹಾರಾಜರು ಎರಡು ತಿಂಗಳ ಹಿಂದೆ ಕೃಷ್ಣಾಪುರದ ಮಠದಲ್ಲಿ ತಪೋನುಷ್ಠಾನ ಕೈಗೊಂಡಿದ್ದರು. ಶ್ರೀಗಳ ಇಚ್ಛೆಯಂತೆ ಅವರಿರುವ ಕೋಣೆಯ ಬಾಗಿಲನ್ನು ಇಟ್ಟಿಗೆಯಿಂದ ಮುಚ್ಚಲಾಗಿತ್ತು. ಕಿಟಕಿ, ಮೇಲ್ಚಾವಣಿಗಳನ್ನು ಭದ್ರಪಡಿಸಲಾಗಿತ್ತು. 62 ದಿನಗಳವರೆಗೆ ಯಾರೂ ಬಾಗಿಲು ತೆರೆಯದಂತೆ ಶ್ರೀಗಳು ಕಟ್ಟಪ್ಪಣೆ ಮಾಡಿ ಅನುಷ್ಠಾನ ನಿರತರಾಗಿದ್ದರು.
ಗುರುವಾರ 62 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಡಿನ ಹಿರಿಯ ಶ್ರೀಗಳು, ಭಕ್ತರು ಸಮ್ಮುಖದಲ್ಲಿ ಬಾಗಿಲಿಗೆ ಜೋಡಿಸಿದ್ದ ಇಟ್ಟಿಗೆಗಳನ್ನು ತೆರೆದು ಶ್ರೀಗಳಿರುವ ಕೋಣೆ ಪ್ರವೇಶಿಸಲಾಯಿತು. ಅನ್ನಾಹಾರವಿಲ್ಲದೇ ಅನುಷ್ಠಾನದಲ್ಲಿ ನಿರತರಾಗಿದ್ದರಿಂದ ನಿತ್ರಾಣ ಸ್ಥಿತಿಗೆ ತಲುಪಿದ್ದ ಶ್ರೀಗಳನ್ನು ಭಕ್ತರು ಹೊತ್ತು ಹೊರತಂದರು. ಜಯಘೋಷ ಹಾಕಿ ಶ್ರೀಗಳನ್ನು ಭಕ್ತರು ಸ್ವಾಗತಿಸಿದರು. ನಿತ್ರಾಣರಾಗಿದ್ದ ಶ್ರೀಗಳಿಗೆ ಶಿರಹಟ್ಟಿ ಫಕೀರೇಶ್ವರ ಶ್ರೀ, ಹೂವಿನಶಿಗ್ಲಿಯ ಚನ್ನವೀರ ಶ್ರೀ, ಹತ್ತಿಮತ್ತೂರಿನ ನಿಜಗುಣ ಶ್ರೀಗಳ ಸಮ್ಮುಖದಲ್ಲಿ ಹಾಲು ನೀಡಿ, ಕುಮಾರ ಮಹಾರಾಜರ ಅನುಷ್ಠಾನ ಮಂಗಲ ಹಾಡಲಾಯಿತು.
ಕೊರೋನಾಗೆ ಹಾವೇರಿ ಜಿಲ್ಲೆಯಲ್ಲಿ 9 ಶಿಕ್ಷಕರು ಬಲಿ!
ಶ್ರೀಗಳಿಗೆ ಸ್ನಾನ ಮಾಡಿಸಿ, ಸೇರಿದ್ದ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಕೇವಲ 23 ವರ್ಷದ ಶ್ರೀಗಳು ಲೋಕಕಲ್ಯಾಣಾರ್ಥವಾಗಿ ಕೈಗೊಂಡಿರುವ ಅನುಷ್ಠಾನಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಕೂಡ ಅವರು 40 ದಿನಗಳ ಮೌನಾನುಷ್ಠಾನ ಮಾಡಿದ್ದರು. ಗುಡ್ಡದಮಲ್ಲಾಪುರದಲ್ಲಿ ಕೂಡ 20 ದಿನಗಳ ಮೌನಾನುಷ್ಠಾನಕ್ಕೆ ಕುಳಿತಿದ್ದರೂ ಭಕ್ತರು ಆತಂಕಗೊಂಡು 11 ದಿನಕ್ಕೇ ಬಾಗಿಲು ತೆರೆದಿದ್ದರು. ಆದ್ದರಿಂದ ಈ ಸಲ ತಾವು ಸತ್ತರೂ ಇದ್ದರೂ 62 ದಿನಗಳ ವರೆಗೆ ಯಾರೂ ಬಾಗಿಲು ತೆರೆಯಬಾರದು ಎಂದು ಕುಮಾರ ಮಹಾರಾಜರು ಕಟ್ಟಪ್ಪಣೆ ಮಾಡಿದ್ದರು ಎಂದು ಭಕ್ತರು ಹೇಳುತ್ತಾರೆ. ಕೃಷ್ಣಾಪುರದಲ್ಲಿ 4 ವರ್ಷಗಳ ಹಿಂದೆ ಅವರು ಮಠ ಸ್ಥಾಪಿಸಿದ್ದರು.
ಲೋಕಕಲ್ಯಾಣಕ್ಕಾಗಿ ನಿರಾಹಾರಿಯಾಗಿ ಮೌನಾನುಷ್ಠಾನ ಕೈಗೊಂಡಿದ್ದೆ. ದೇವರ ದಯೆ, ಭಕ್ತರು ಇಟ್ಟಿರುವ ವಿಶ್ವಾಸದಿಂದ ಮೌನಾನುಷ್ಠಾನ ಸಂಪನ್ನಗೊಳಿಸಿದ್ದೇನೆ. ಸಕಲ ಜೀನಾತ್ಮರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಕೃಷ್ಣಾಪುರ ಬಂಜಾರ ಗುರುಪೀಠದ ಶ್ರೀ ಕುಮಾರ ಮಹಾರಾಜ ಶ್ರೀಗಳು ಹೇಳಿದ್ದಾರೆ.
ಕೃಷ್ಣಾಪುರ ಗುರುಪೀಠದ ಕುಮಾರ ಮಹಾರಾಜರು ಕಿರಿಯ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಲೋಕೋದ್ಧಾರಕ್ಕಾಗಿ ಅವರು ನಿರಾಹಾರಿಗಳಾಗಿ ಎರಡು ತಿಂಗಳ ಕಾಲ ಅನುಷ್ಠಾನ ಕೈಗೊಂಡು ಗುರುವಾರ ಹೊರಬಂದಿರುವುದು ಭಕ್ತರಿಗೆ ಸಂತಸ ತಂದಿದೆ ಎಂದು ಭಕ್ತ ಲಮಾಣಿ ಎಚ್.ಆರ್ ವಕೀಲರು, ತಿಳಿಸಿದ್ದಾರೆ.