'ಸಚಿವ ಬಿ.ಸಿ. ಪಾಟೀಲ್‌ ರಾಜಕೀಯದಲ್ಲಿ ನಟನೆ ಮಾಡಿದ್ದು ಸಾಕು, ಯೂರಿಯಾ ಪೂರೈ​ಸ​ಲಿ'

By Kannadaprabha News  |  First Published Sep 11, 2020, 12:22 PM IST

ಸುಗ್ರೀವಾಜ್ಞೆ ರದ್ದುಪಡಿಸಿ, ರೈತರ ಹಿತ ಕಾಪಾಡಿ| 21ರಂದು ಸುಗ್ರೀವಾಜ್ಞೆ ರದ್ದತಿಗೆ ವಿಧಾನಸೌಧಕ್ಕೆ ಮುತ್ತಿಗೆ-ಕೋಡಿಹಳ್ಳಿ ಚಂದ್ರಶೇಖರ| ಗಾಂಜಾದಲ್ಲಿ ಕೆಲವು ಔಷಧಿಯ ಗುಣವಿದ್ದರೂ ಸಹಿತ ಅದನ್ನು ಲೀಗಲ್‌ ಮಾಡಬಾರದು| ಇದರಿಂದ ಭವಿಷ್ಯದ ಮಕ್ಕಳಿಗೆ ದೊಡ್ಡ ಪೆಟ್ಟು ಬೀಳಲಿದೆ| 


ಕೊಪ್ಪಳ(ಸೆ.11): ರಾಜ್ಯ ಸರ್ಕಾರ ಕೋವಿಡ್‌ ಸಂಕಷ್ಟದ ವೇಳೆಯಲ್ಲಿಯೇ ಜನಾಭಿಪ್ರಾಯ ಪಡೆಯದೇ ಜಾರಿ ಮಾಡಿರುವ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ರದ್ದು ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಕಾಯ್ದೆ ಮತ್ತು ಕೃಷಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೈಬಿಡದಿದ್ದರೆ ಸೆ. 21ರಂದು ನಾವು ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಜಾರಿ ಇದ್ದರೂ ಸರ್ಕಾರ ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ನಾವೇನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಪರವಲ್ಲ. ನಾವು ರೈತ ಸಂಘದವರು. ನಮಗೆ ರೈತರ ಹಿತ ಮುಖ್ಯ ಎಂದರು.

ರೈತ ವಿರೋಧಿ ಸರ್ಕಾರದ ಪಟ್ಟ ಸಿಗುತ್ತೆ

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ಕಾರ್ಮಿಕ ಕಾಯ್ದೆ ಹೀಗೆ ಹಲವು ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಎಷ್ಟರ ಮಟ್ಟಿಗೆ ಸರಿ? ಇವುಗಳೆಲ್ಲವೂ ರಾಷ್ಟ್ರೀಯ ಭದ್ರತಾ ವಿಷಯವೇ? ಯಾರಿಗೋಸ್ಕರ ಅತಿ ತುರ್ತಾಗಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರ ಕಾರ್ಪೊರೇಟ್‌ ಪರ ನಿಂತಿದೆ. ರೈತರಿಗೆ ಬೇರೆ ಉದ್ಯೋಗದ ಭರವಸೆಯೇ ಇಲ್ಲ. ಅವರ ಜೀವನಕ್ಕೆ ಭದ್ರತೆಯೇ ಇಲ್ಲ. ಅನ್ನದಾತನನ್ನು ದಿವಾಳಿ ಮಾಡಿದ್ದಾರೆ. ಮೋದಿಗೆ ರೈತರ ಜೀವನದ ಬಗ್ಗೆ ಗೊತ್ತೆ ಇಲ್ಲ. ಬಿ.ಎಸ್‌. ಯಡಿಯೂರಪ್ಪ ಅವರು ಹಸಿರು ಶಾಲು ಧರಿಸಿ ರೈತರ ಮೇಲೆ ಪ್ರಮಾಣ ಮಾಡ್ತಾರೆ. ಆದರೆ ರೈತರಿಗೆ ಇಂತಹ ದ್ರೋಹ ಮಾಡೋದು ಸರಿನಾ? ಇಲ್ಲದಿದ್ದರೆ ರೈತ ವಿರೋಧಿ ಸರ್ಕಾರ ಎನ್ನುವ ಪಟ್ಟಪಡೆದುಕೊಳ್ಳಲಿದ್ದೀರಿ ಎಂದರು.

ಕೊಪ್ಪಳ: ಅನ್‌ಲಾಕ್‌ ಆದ್ರೂ ಭಕ್ತರಿಗೆ ದರ್ಶನ ನೀಡಿದ ಹುಲಿಗೆಮ್ಮ..!

ಸಿನಿಮಾದವರನ್ನು ಕೃಷಿ ಮಂತ್ರಿ ಮಾಡಿದ್ದಾರೆ

ರಾಜ್ಯದಲ್ಲಿ ರಸಗೊಬ್ಬರದ ಸಮಸ್ಯೆ ಹೆಚ್ಚಿದೆ. ಸಿನಿಮಾ ಮಾಡಿದ ವ್ಯಕ್ತಿಯನ್ನು ಕರೆತಂದು ಕೃಷಿ ಸಚಿವರನ್ನಾಗಿ ಮಾಡಿದ್ದಾರೆ. ಸಚಿವ ಬಿ.ಸಿ. ಪಾಟೀಲ್‌ ಅವರು ಸಿನಿಮಾ ನಟನ ತರ ಇಲ್ಲಿ ನಟನೆ ಮಾಡೋದು ಸಾಕು. ಸಚಿವರು ಯೂರಿಯಾ ಏಕೆ ಪೂರೈಸಿಲ್ಲ? ಮಾರ್ಕೆಟ್‌ನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾದ್ರೂ ​ಎಷ್ಟು ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ? ಎನ್ನುವುದನ್ನು ಪಟ್ಟಿ ಬಿಡುಗಡೆ ಮಾಡಲಿ. ಕೃಷಿ ಪದವಿ ಪ್ರವೇಶ ಪರೀಕ್ಷೆ ರದ್ದು ಪಡಿಸಿದ್ದಾರೆ. ಇದರಿಂದ 3 ಸಾವಿರ ರೈತರ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಪಾಟೀಲರು ರೈತರ ಮಕ್ಕಳಿಗೆ ನಾಮ ಹಾಕುವ ಕೆಲಸ ಮಾಡುತ್ತಿದ್ದಾರೆ. ಒಂದು ಸೀಟಿಗೆ ಎಷ್ಟು ವ್ಯವಹಾರ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಗಾಂಜಾ ಲೀಗಲ್‌ ಮಾಡಬಾರದು

ಗಾಂಜಾದಲ್ಲಿ ಕೆಲವು ಔಷಧಿಯ ಗುಣವಿದ್ದರೂ ಸಹಿತ ಅದನ್ನು ಲೀಗಲ್‌ ಮಾಡಬಾರದು. ಇದರಿಂದ ಭವಿಷ್ಯದ ಮಕ್ಕಳಿಗೆ ದೊಡ್ಡ ಪೆಟ್ಟು ಬೀಳಲಿದೆ. ಜನರ ಕೈಗೆ ಇದು ಸೇರಿದರೆ ಮುಂದೆ ದೊಡ್ಡ ಅನಾಹುತ ಸಂಭವಿಸಲಿದೆ. ಈಗ ಅದನ್ನು ಚರ್ಚೆ ಮಾಡುತ್ತಿದ್ದಾರೆ. ಯಾವುದನ್ನೋ ದಿಕ್ಕು ತಪ್ಪಿಸಲು ಗಾಂಜಾ ಚರ್ಚೆಗೆ ಬಂದಿದೆ. ಗಾಂಜಾ ದಂಧೆ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎಲ್ಲರಿಗೂ ಈ ಮಾಹಿತಿ ಇರುತ್ತದೆ. ಇದಕ್ಕೊಂದು ವಿಶೇಷ ಅಧಿಕಾರಿ ನೇಮಿಸಿ ಕ್ರಮ ಕೈಗೊಳ್ಳಿ ಎಂದರು.
 

click me!