ಹೆಂಡತಿ ಬೆಡ್‌ ರೂಂಗೆ ಹೋಗಲು ಸಹಿ ಬೇಕಾ : ಭೈರಪ್ಪ ವಿರುದ್ಧ ಕುಂ.ವಿ ಕಿಡಿ

By Web DeskFirst Published May 19, 2019, 10:38 AM IST
Highlights

ಸಾಹಿತಿ ಎಸ್.ಎಲ್ ಭೈರಪ್ಪ ವಿರುದ್ಧ ಕುಂ ವೀರಭದ್ರಪ್ಪ ಕಿಡಿ ಕಾರಿದ್ದಾರೆ. ಸಮಾಜದಲ್ಲಿ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ. 

ಬೆಂಗಳೂರು :  ಸಂವೇದನಶೀಲ ಲೇಖಕ ಹಾಗೂ ಪ್ರಭುತ್ವದ ನಡುವೆ ಎಲ್ಲ ಕಾಲಕ್ಕೂ ಅಸಮಾಧಾನ ಇರುತ್ತದೆ ಎಂದು ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಹೇಳಿದರು.

ಸಪ್ನ ಬುಕ್‌ ಹೌಸ್‌ ಶನಿವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ಡಾ.ಕುಂ.ವೀರಭದ್ರಪ್ಪ ಅವರ ‘ಜೈ ಭಜರಂಗಬಲಿ’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ಈ ಕಾದಂಬರಿಯಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮ ರಂಗದ ಅವ್ಯವಸ್ಥೆಯನ್ನು ವಿಢಂಬನೆಯ ಮೂಲಕ ಬಯಲು ಮಾಡಲಾಗಿದೆ. ಸಂವೇದನಶೀಲ ಲೇಖಕನಿಗೆ ಮಾತ್ರ ಈ ವಿಢಂಬನೆಯ ಮೂಲಕ ವ್ಯವಸ್ಥೆಯ ಅವ್ಯವಸ್ಥೆ ಹೊರಹಾಕಲು ಸಾಧ್ಯ ಎಂದರು.

ಎಸ್‌.ಎಲ್‌.ಭೈರಪ್ಪ ವಿರುದ್ಧ ಕಿಡಿ:

ಲೇಖಕ ಡಾ.ಕುಂ.ವೀರಭದ್ರಪ್ಪ ಮಾತನಾಡಿ, ಇಂದು ಸಮಾಜದಲ್ಲಿ ಅಪಾಯಕಾರಿ, ಭಯದ ವಾತಾವರಣ ನಿರ್ಮಾಣವಾಗಿದೆ. ಇಷ್ಟದ ಬಟ್ಟೆ, ಇಷ್ಟದ ಆಹಾರ ತೊಡುವ ಹಾಗೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲದಂತಾಗಿದೆ. ಇಡ್ಲಿ, ಕಾಫಿಗೂ ಜಿಎಸ್‌ಟಿ ಕಟ್ಟುವ ಪರಿಸ್ಥಿತಿಯಿದೆ. ಇಂತಹ ದಾರಿದ್ರ್ಯ ಸರ್ಕಾರದ ಪರ ಲೇಖಕ ಎಸ್‌.ಎಲ್‌.ಭೈರಪ್ಪ ಮಾತನಾಡುತ್ತಾರೆ. ಹೆಂಡತಿಯ ಬೆಡ್‌ ರೂಂಗೆ ಹೋಗಲು ಸಹಿ ಹಾಕಬೇಕಾ ಎಂದು ಅವರು ಕೇಳುತ್ತಾರೆ. ಮಹಿಳೆಯರ ಬಗ್ಗೆ ಹೀಗೆ ಮಾತನಾಡುವುದು ಖಂಡನೀಯ ಎಂದರು.

ಭ್ರೂಣಗಳನ್ನೂ ನಿಲ್ಲಿಸಬಹುದು!

ಕಳೆದ ಐದು ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ರಾಜಕಾರಣಿಗಳು ಖರೀದಿಯ ಸರಕಾಗಿದ್ದಾರೆ. ವಿಧಾನಸೌಧ, ಸಂಸತ್ತುಗಳು ಬಿಗ್‌ಬಜಾರ್‌ ಮಾಲ್‌ಗಳಂತಾಗಿವೆ. ಮತದಾರರನ್ನು ಹರಾಜಿಗೆ ಇರಿಸಲಾಗಿದೆ. ಇನ್ನು ತಮಗೂ ಕೂಡ ಚುನಾವಣೆಗೆ ನಿಲ್ಲಬೇಕೆಂಬ ಆಸೆಯಿದೆ. ಆದರೆ, ಇಂದಿನ ರಾಜಕಾರಣಿಗಳು ಮಕ್ಕಳು, ಮೊಮ್ಮಕ್ಕಳನ್ನೇ ನಿಲ್ಲಿಸುತ್ತಿದ್ದಾರೆ. ಮುಂದೆ ಭ್ರೂಣಗಳನ್ನು ನಿಲ್ಲಿಸಬಹುದು. ಇವರೇನು ವಿಧಾನಸೌಧವನ್ನು ಜಹಗೀರ್‌ ಪಡೆದಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೇಖಕ ಎಸ್‌.ದಿವಾಕರ್‌ ಮಾನತಾಡಿದರು. ಲೇಖಕ ಡಾ.ಬಸವರಾಜ ಕಲ್ಗುಡಿ, ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಶಾ ಮತ್ತಿತರರು ಉಪಸ್ಥಿತರಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!