
ರಾಜ್ಯದ ಟ್ರೆಕ್ಕಿಂಗ್ ಪ್ರದೆಶದಲ್ಲಿ ಒಂದಾದ ಚಾರಣದ ಸಮಯ ಬದಲಾವಣೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ತೆರಳುವ ಟ್ರೆಕ್ಕಿಂಗ್ ವ್ಯವಸ್ಥೆಯಲ್ಲಿ ಇತ್ತೀಚೆಗೆ ಮಾಡಿರುವ ಬದಲಾವಣೆಗಳ ಬಗ್ಗೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಎತ್ತಿದರು. ಶಾಸಕಿ ಭಾಗೀರಥಿ ಮರುಳ್ಯ ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಮೀಪದಿಂದ ಕುಮಾರ ಪರ್ವತಕ್ಕೆ ಹೋಗುವ ಚಾರಣವನ್ನು ಹಿಂದಿನಂತೆ ಬೆಳಗ್ಗೆ 5 ಗಂಟೆಗೆ ಆರಂಭಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ಟ್ರೆಕ್ಕಿಂಗ್ ಆರಂಭಿಸುವ ಸಮಯವನ್ನು ಬೆಳಗ್ಗೆ 6 ಗಂಟೆಗೆ ಬದಲಿಸಲಾಗಿದೆ. ಈ ಬದಲಾವಣೆಯಿಂದ ಪರ್ವತದ ತುದಿಗೆ ತಲುಪಲು ಸಮಯ ವ್ಯತ್ಯಾಸ ಉಂಟಾಗುತ್ತಿದ್ದು, ಅನೇಕ ಚಾರಣಿಗರು ಶೇಷಗಿರಿ ಪರ್ವತದ ಭಾಗವರೆಗೂ ತೆರಳಲು ಸಾಧ್ಯವಾಗುತ್ತಿಲ್ಲ ಎಂದರು. ಹೀಗಾಗಿ ಚಾರಣಿಗರ ಅನುಕೂಲಕ್ಕಾಗಿ ಹಿಂದಿನಂತೆ ಬೆಳಗ್ಗೆ 5 ಗಂಟೆಯಿಂದಲೇ ಟ್ರೆಕ್ಕಿಂಗ್‌ಗೆ ಅವಕಾಶ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸುಬ್ರಹ್ಮಣ್ಯದಿಂದ ಕುಮಾರ ಪರ್ವತದ ಚಾರಣಕ್ಕೆ ಸಾಮಾನ್ಯವಾಗಿ ಎರಡು ದಿನಗಳ ಸಮಯ ಬೇಕಾಗುತ್ತದೆ ಎಂದು ಹೇಳಿದರು. ಹಲವರು ಪರ್ವತದ ಮೇಲೆ ತೆರಳಿ ಅಲ್ಲಿ ವಾಸ್ತವ್ಯ ಮಾಡುವ ಪದ್ಧತಿ ಇದ್ದರೂ, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಪರ್ವತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವುದರಿಂದ ಮತ್ತು ಚಾರಣ ಮಾರ್ಗವು ಅರಣ್ಯ ಪ್ರದೇಶದೊಳಗೆ ಸಾಗುವುದರಿಂದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಸುಮಾರು 19 ಕಿಲೋಮೀಟರ್‌ಗಳ ಚಾರಣಕ್ಕೆ ಕನಿಷ್ಠ 10 ಗಂಟೆಗಳ ಕಾಲ ಬೇಕಾಗುತ್ತದೆ. ಹಿಂದೆ ಸುಮಾರು 24 ಕಿಲೋಮೀಟರ್‌ಗಳಷ್ಟು ದೀರ್ಘ ಮಾರ್ಗ ಇದ್ದುದನ್ನು ಈಗ ಕಡಿಮೆ ಮಾಡಲಾಗಿದೆ. ಬೆಳಗ್ಗೆ ಹೊರಡುವ ಪ್ರವಾಸಿಗರು ಸಂಜೆ ವೇಳೆಗೆ ಹಿಂದಿರುಗುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದೇ ಸಮಯದಲ್ಲಿ ಎರಡು ಅಥವಾ ಮೂರು ಸಾವಿರ ಜನರು ಪರ್ವತ ಪ್ರದೇಶದಲ್ಲಿ ಸೇರಿಕೊಂಡರೆ ಸುರಕ್ಷತೆ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದರು.
ಬೇಸಿಗೆ ಕಾಲದಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅತಿಯಾದ ಜನಸಂದಣಿ ತಪ್ಪಿಸಲು ಮತ್ತು ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಮಯದ ನಿಯಂತ್ರಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಮತ್ತೆ ಮಾತನಾಡಿದ ಶಾಸಕಿ ಭಾಗೀರಥಿ ಮರುಳ್ಯ, ಬೆಳಗ್ಗೆ 10 ಗಂಟೆಯ ನಂತರವೂ ಚಾರಣಕ್ಕೆ ಅವಕಾಶ ನೀಡುವ ಕುರಿತು ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದರಿಂದ ದೂರದೂರಿನಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಆರ್ ಅಶೋಕ್ ಮಧ್ಯಪ್ರವೇಶ ಮಾಡಿ ಸಫಾರಿ ಸ್ಥಗಿತಗೊಳಿಸಿರುವ ವಿಷಯವನ್ನು ಪ್ರಸ್ತಾಪಿಸಿದರು. ಸಫಾರಿ ಸಂಪೂರ್ಣವಾಗಿ ನಿಲ್ಲಿಸುವ ಮೊದಲು ಸಮಗ್ರ ಸಮೀಕ್ಷೆ ನಡೆಸಬೇಕಾಗಿತ್ತು ಎಂದು ಅವರು ಹೇಳಿದರು. ಸಫಾರಿಯ ಮೇಲೆ ಅವಲಂಬಿತವಾಗಿರುವ ಸ್ಥಳೀಯರ ಆದಾಯಕ್ಕೂ ಇದರಿಂದ ಹೊಡೆತ ಬಿದ್ದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ, ಸಫಾರಿ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶ ಸರ್ಕಾರದದ್ದಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಇತ್ತೀಚೆಗೆ ಸಫಾರಿ ಪ್ರದೇಶದಲ್ಲಿ ಹುಲಿ ದಾಳಿಯಿಂದ ಮೂವರು ಗಾಯಗೊಂಡ ಘಟನೆ ನಡೆದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದರು.
ಸಫಾರಿಗೆ ಏಕಾಏಕಿ ಹೆಚ್ಚಿನ ಜನರು ಬರುತ್ತಿದ್ದ ಕಾರಣ ಹಾಗೂ ಮಾನವ–ಪ್ರಾಣಿ ಸಂಘರ್ಷದ ಸಾಧ್ಯತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಅವರು ವಿವರಿಸಿದರು. ಕೆಲವು ರೈತ ಸಂಘಟನೆಗಳೂ ಸಹ ಸಫಾರಿ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದವು ಎಂದು ಸಚಿವರು ತಿಳಿಸಿದರು.
ಇನ್ನೊಂದೆಡೆ, ಸಫಾರಿ ಸ್ಥಗಿತದಿಂದ ಸ್ಥಳೀಯರಿಗೆ ಆದಾಯ ಕೊರತೆ ಉಂಟಾಗುತ್ತದೆ ಎಂಬ ಮನವಿಯೂ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಹಾಗೂ ಕೇಂದ್ರದ ವನ್ಯಜೀವಿ ಮಂಡಳಿಯ ಸದಸ್ಯರಿಂದ ಸಲಹೆ ಪಡೆದು ಸಫಾರಿ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರು ಸಫಾರಿ ಆರಂಭಿಸುವ ಸಮಯದಲ್ಲೂ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಸೂಚಿಸಿದರು. ಪ್ರಸ್ತುತ ಬೆಳಗ್ಗೆ 6.30ಕ್ಕೆ ಆರಂಭವಾಗುವ ಸಫಾರಿಯನ್ನು ಮುಂದಿನ ದಿನಗಳಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭಿಸುವ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಒಟ್ಟಾರೆ, ಪ್ರವಾಸಿಗರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸ್ಥಳೀಯರ ಜೀವನೋಪಾಯ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.