
ಹುಬ್ಬಳ್ಳಿ (ಜು.19): ಒಂದೆಡೆ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಶ್ರೀಗಳಿಗೆ ಉಚ್ಛಾಟನೆ ಮಾಡೋದು ಬಹುತೇಕ ಫಿಕ್ಸ್‌ಆಗುತ್ತಿದ್ದಂತೆ, ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಪಂಚಮಸಾಲಿ ಶ್ರೀಗಳ ಆರೋಗ್ಯದಲ್ಲಿ ಶನಿವಾರ ದಿಢೀರ್ ಏರುಪೇರಾಗಿದೆ. ಬೆಳಿಗಿನ ಜಾವ ಶ್ರೀಗಳಿಗೆ ತೆಲೆನೋವು, ವಾಂತಿ, ಎದೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದಿಂದ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ದಣಿದಿರುವಂತೆ ಕಂಡಿದೆ.
ಇದರಿಂದಾಗಿ ಅವರನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮಠದಿಂದ ಸ್ವಾಮೀಜಿಯನ್ನ ಭಕ್ತರು ಕರೆದುಕೊಂಡು ಬಂದಿದ್ದಾರೆ. ಕೂಡಲಸಂಗಮ ಪೀಠದಿಂದ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಹಂತದಲ್ಲಿ ಸ್ವಾಮೀಜಿ ನಡೆದುಕೊಂಡೇ ಆಸ್ಪತ್ರೆ ಒಳಗೆ ತೆರಳಿದ್ದಾರೆ.
ಪಂಚಮಸಾಲಿ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಕಲಬುರ್ಗಿ ಪಂಚಮಸಾಲಿ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್, ನಿನ್ನೆ ಮಧ್ಯಾಹ್ನ ಸ್ವಾಮೀಜಿಗೆ ಫುಡ್ ಪಾಯ್ಸನ್ ಆಗಿತ್ತು. ಡಾಕ್ಟರ್ ಗೆ ಕೇಳಿ ಮಾತ್ರ ತೆಗೆದುಕೊಂಡಿದ್ದುರು. ಬಳಿಕ ರಾತ್ರಿ ಸ್ವಲ್ಪ ಚೇತರಿಸಿಕೊಂಡಿದ್ದರು. ಬೆಳಿಗ್ಗೆ ತಲೆನೋವು, ವಾಂತಿ, ಎದೆ ನೋವು ಶುರುವಾಗಿ ಅಸ್ವಸ್ಥರಾಗಿದ್ದರು. ಭಕ್ತರು ಆಸ್ಪತ್ರೆಗೆ ಹೋಗೋಣ ಎಂದರು ಅದಕ್ಕೆ ಬಾಗಲಕೋಟೆ ಆಸ್ಪತ್ರೆಗೆ ಬಂದಿದ್ದೇವೆ. ಭಕ್ತರು ಭಯ ಪಡುವಂತದ್ದು ಏನಿಲ್ಲ ಶ್ರೀಗಳು ಕ್ಷೇಮವಾಗಿದ್ದಾರೆ. ಸ್ವಲ್ಪ ಆರೋಗ್ಯ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ಬಂದಿದ್ದೆವು ಎಂದು ಹೇಳಿದ್ದಾರೆ.
ಈ ನಡುವೆ ಹುಬ್ಬಳ್ಳಿಯಲ್ಲಿ ಶಾಸಕ ಹಾಗೂ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಪ್ರಮುಖ ಹೇಳಿಕೆಯನ್ನು ನೀಡಿದ್ದು, 'ಜಯಮೃತ್ಯುಂಜಯ ಶ್ರೀಗಳ ನಡವಳಿಕೆ ಬದಲಾಗಿದೆ. ನಮ್ಮ ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ತೇವೆ. ಮತ್ತೊರ್ವ ಗುರುಗಳನ್ನು ನೇಮಕ ಮಾಡಲಿದ್ದೇವೆ' ಎಂದು ತಿಳಿಸಿದ್ದಾರೆ. ಅದರೊಂದಿಗೆ ಜಯಮೃತ್ಯುಂಜಯ ಶ್ರೀಗಳ ಉಚ್ಛಾಟನೆ ಬಹುತೇಕ ಫಿಕ್ಸ್ ಆದಂತಾಗಿದೆ.
'ಸ್ವಾಮೀಜಿಗಳಿಗೆ ಇರೋದಕ್ಕೆ ಅಷ್ಟೇ ಕೊಟ್ಟಿದ್ದೇವೆ. ಆಚಾರ ವಿಚಾರ ಪ್ರಚಾರ ಮಾಡಿ ಅಂತ ಹೇಳಿದ್ದೇವೆ. ಊರೂರು ಸಂಚಾರ ಮಾಡಿ ಅಂತ ಹೇಳಿಲ್ಲ. ಅವರು ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ ಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಠ ಮುನ್ನಡೆಸಬೇಕಾದ ಶ್ರೀ ಗಳು ಒಂದು ಪಕ್ಷದ ವೇದಿಕೆ ಮೇಲೆ ಕೂರುವ ಕೆಲಸ ಮಾಡುತ್ತಿದ್ದಾರೆ. ಅವರ ನಡವಳಿಕೆ ನೋಡಿದರೆ ಈ ಸಮಾಜವನ್ನು ಅವರೇ ಹುಟ್ಟು ಹಾಕಿದ್ದಾರೆ ಅನಿಸುತ್ತೆ. ಅಗ್ರ ನಾಯಕರು ಸ್ವಾಮೀಜಿಗಳಿಗೆ ಹುಬ್ಬಳ್ಳಿ- ಬೆಳಗಾವಿ ನಡುವೆ ಮಠ ಕಟ್ಟೋದಾಗಿ ಹೇಳಿದ್ದಾರೆ ಶ್ರೀಗಳೇ ಖುದ್ದು ಮಲಪ್ರಭಾ ನದಿ ದಂಡೆ ಮೇಲೆ ಮಠ ಕಟ್ಟಿಕೊಳ್ಳೋದಾಗಿ ಹೇಳಿದ್ದಾರೆ ಅವರನ್ನು ಹೊರಗೆ ಹೋಗಿ ಅಂತ ಹೇಳಲು ನಾವ್ಯಾರು..?' ಎಂದು ಪ್ರಶ್ನೆ ಮಾಡಿದ್ದಾರೆ.
ಪೀಠ ಬಿಟ್ಟು ಹೋಗಿ ಅಂತ ಹೇಳುವಷ್ಟು ನಾವು ದೊಡ್ಡವರಲ್ಲ. ಅವರೇ ಮಠ ಬಿಟ್ಟು ಹೋಗ್ತೇವೆ ಅಂತ ಹೇಳಿದ್ದಾರೆ. ಅವರಾಗಿಯೇ ಹೋದರೆ ಸಂತೋಷ
ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡೋದು ನಿಶ್ಚಿತ. ನಮ್ಮ ಮಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ತೇವೆ. ಮಠ ತ್ಯಾಗ ಮಾಡಿರೋದಾಗಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಮಠದ ರಕ್ಷಣೆಗೆ ಗೇಟ್ ಮಾಡಿಸಿ ಬೀಗ ಹಾಕಿದ್ದೆವು. ಅಹಿತಕರ ಘಟನೆ ನಡೆಯಬಾರದು ಅಂತ ಬೀಗ ಹಾಕಿದ್ದೆವು ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗಿದೆ. ಇವರು ಪ್ರಚಾರ ಪ್ರಿಯರು, ಪ್ರಚಾರ ಪಡೆಯಲು ಹೀಗೆ ಮಾಡುತ್ತಿದ್ದಾರೆ. ಮೊನ್ನೆ ರಾತ್ರಿ ಏಳು ಜನರನ್ನು ಶ್ರೀಗಳು ಕಳಿಸಿದ್ದಾರೆ. ಅವರು ಕೀಲಿ ಮುರಿದಿದ್ದಾರೆ. ಕಳೆದ ಎರಡು ವರ್ಷಗಳಿಂದ ಸ್ವಾಮೀಜಿಗಳು ನಮ್ಮ ಸಂಪರ್ಕದಲ್ಲಿಲ್ಲ. ಹುನುಗುಂದಕ್ಕೆ ಬಂದ ಗುರುಗಳು ನಮ್ಮ ವಿರೋಧಿಗಳ ಸಭೆ ಮಾಡುತ್ತಾರೆ. ಕಾಶಪ್ಪ ಕೀಲಿ ಹಾಕಿ, ಮಠಕ್ಕೆ ಹೋಗಲು ಬಿಡ್ತಿಲ್ಲ ಅಂತ ಆರೋಪಿಸಿದ್ದಾರೆ. ಇವರು ಬಂದ ಮೇಲೆಯೇ ಸಮಾಜ ಸಂಘಟನೆ ಆಯ್ತು ಅನ್ನೋ ರೀತಿಯಲ್ಲಿ ಶ್ರೀ ಗಳು ಬಿಂಬಿಸ್ತಿದ್ದಾರೆ. 2 ಎ ಮೀಸಲಾತಿ ಬೇಕಿರೋದು. 2ಸಿ ಮತ್ತು 2 ಡಿ ಮೀಸಲಾತಿಗಾಗಿ ನಾವು ಹೋರಾಟ ಮಾಡಲಿಲ್ಲ. ನಮಗೆ ಬೇಕಿರೋದು 2ಎ ಮೀಸಲಾತಿ. ಇದಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.