ಕಳೆದ ಎರಡು ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟ ಅನುಭವಿಸುತ್ತಿರುವ ಸಾರಿಗೆ ಸಿಬ್ಬಂದಿ| ಸಿಬ್ಬಂದಿಗೆ ಸಂಬಳ ನೀಡದಷ್ಟು ಸರ್ಕಾರ ಬಡವಾಗಿದೆಯೇ? ಎಂದು ಡಿಸಿಎಂ ಲಕ್ಷ್ಮಣ ಸವದಿಗೆ ಪ್ರಶ್ನಿಸಿದ ಶಾಸಕ ಪ್ರಿಯಾಂಕ್ ಖರ್ಗೆ| ಕೂಡಲೇ ಸಾರಿಗೆ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ ಖರ್ಗೆ|
ಕಲಬುರಗಿ(ಜು.23): ಸಾರಿಗೆ ಇಲಾಖೆಯಿಂದ 9.5 ಕೋಟಿ ರೂಪಾಯಿ ಸಿಎಂ ಪರಿಹಾರ ನಿಧಿಗೆ ನೀಡಿದ್ದರ ಫಲವಾಗಿ ಇಂದು ಸಾರಿಗೆ ಇಲಾಖೆಯ ನೌಕರರು ಸಂಬಳವಿಲ್ಲದೇ ಪರದಾಡುವಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸಾರಿಗೆ ಇಲಾಖೆಯ ವತಿಯಿಂದ ದೊಡ್ಡ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡುವ ಬದಲು ಲಾಕ್‌ಡೌನ್ ಸಂದರ್ಭದಲ್ಲಿ ಹೊರ ರಾಜ್ಯದಲ್ಲಿ ಸಿಲುಕಿದ್ದ ಕಾರ್ಮಿಕರನ್ನು, ಜನಸಾಮಾನ್ಯರನ್ನು ಕರೆತರುವಂತೆ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಶಾಸಕರ ಸಲಹೆಯನ್ನು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವೆಂದು ಹೇಳಿದ್ದರು. ಸಾರಿಗೆ ಸಿಬ್ಬಂದಿಯ ವಾಸ್ತವ ಪರಿಸ್ಥಿತಿ ಅವಲೋಕಿಸಿದೇ ಅವರೊಡನೆ ಚರ್ಚಿಸದೇ ಏಕಾಏಕಿ ಅವರ ಒಂದು ದಿನದ ಸಂಬಳವನ್ನು ಕಡಿತಗೊಳಿಸಿ ಅದನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಿದ್ದರಿಂದಲೇ ಲಕ್ಷಾಂತರ ಸಾರಿಗೆ ಸಿಬ್ಬಂದಿ ಕುಟುಂಬಗಳು ಪರಿತಪಿಸುವಂತಾಗಿದೆ. ಇತ್ತ ಕಡೆ ಮುಖ್ಯಮಂತ್ರಿ ಪರಿಹಾರ ನಿಧಿಯನ್ನೂ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕರು ದೂರಿದ್ದಾರೆ.
ಕಲಬುರಗಿ: ಕೊರೋನಾ ಸೋಂಕಿತರಿಗೆ ಸಮಯಕ್ಕೆ ಚಿಕಿತ್ಸೆ ನೀಡಲು ಪ್ರಿಯಾಂಕ್ ಖರ್ಗೆ ಆಗ್ರಹ
ಕಳೆದ ಎರಡು ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟ ಅನುಭವಿಸುತ್ತಿರುವ ಸಾರಿಗೆ ಸಿಬ್ಬಂದಿ ಕುಟುಂಬಗಳಿಗೆ ಈಗ ಏನು ಉತ್ತರ ನೀಡುತ್ತೀರಿ? ಅವರಿಗೆ ಸಂಬಳ ನೀಡದಷ್ಟು ಸರ್ಕಾರ ಬಡವಾಗಿದೆಯೇ? ಎಂದು ಉಪಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದ ಅವರು, ಕೂಡಲೇ ಸಾರಿಗೆ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಬೇಕೆಂದು ಶಾಸಕರಿಗೆ ಆಗ್ರಹಿಸಿದ್ದಾರೆ.