ಸ್ಟಿಂಗ್ ಆಪರೇಷನ್ ಮೊದಲ ಬಲಿಪಶು ನಾನೆ! ನಾನು, ಬಿ.ವೈ. ರಾಘವೇಂದ್ರ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರವನ್ನು ಗೆಲ್ಲುತ್ತೇವೆ: ಹರತಾಳು ಹಾಲಪ್ಪ ಸವಾಲ್

Kannadaprabha News   | Kannada Prabha
Published : Oct 20, 2026, 10:42 AM IST
Shivamogga BJP

ಸಾರಾಂಶ

ಆನವಟ್ಟಿಯಲ್ಲಿ ನಡೆದ ಬೃಹತ್ ಬೈಕ್ ರ‍್ಯಾಲಿಯಲ್ಲಿ ಪ್ರಭಾವಿ ಮುಖಂಡ ಕಡ್ಲೇರ್ ರುದ್ರಪ್ಪ 165 ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಸಂಸದ ಬಿ.ವೈ. ರಾಘವೇಂದ್ರ ಮತ್ತು ಹರತಾಳು ಹಾಲಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ಸೊರಬ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದರು.

ಆನವಟ್ಟಿ: ರೈತರ ಹಿತದೃಷ್ಟಿಯಿಂದ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸೋಮವಾರ ಹುಣಸವಳ್ಳಿಯಿಂದ ಕಮನವಳ್ಳಿವರೆಗೆ ಬೃಹತ್ ಬೈಕ್ ರ‍್ಯಾಲಿ ನಡೆಸಿ, ಕಮನವಳ್ಳಿಯ ಪ್ರಭಾವಿ ಮುಖಂಡ ಕಡ್ಲೇರ್ ರುದ್ರಪ್ಪ ಅವರಿಗೆ ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ರೈತರಿಗೆ 5 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಯಲ್ಲಿತ್ತು. ಅವರ ನಂತರ ಅಧಿಕಾರಕ್ಕೆ ಬಂದ ಇಬ್ಬರು ಮುಖ್ಯಮಂತ್ರಿಗಳು ಈ ಯೋಜನೆಯನ್ನು ರದ್ದುಗೊಳಿಸಿದ್ದರು. ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ರೈತರ ಅನುಕೂಲಕ್ಕಾಗಿ 10 ಎಚ್‌ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಸಿದರು ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ 35 ಸಾವಿರ ರು. ಕೋಟಿ ಮೊತ್ತದ ಹೊಸ ಯೋಜನೆಗಳನ್ನು ಘೋಷಿಸಿದೆ. ಆದರೆ, ಈ ಹಿಂದೆ ಕೈಗೊಂಡ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಚುನಾವಣೆ ದೃಷ್ಟಿಯಿಂದ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ವಿವಿಧ ನೀರಾವರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ಅವರು ಆಡಳಿತ ನಡೆಸಿದ್ದಾರೆ. ಇಂತಹ ನಾಯಕರ ಬಗ್ಗೆ ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ಅಹಂಕಾರದ ಮಾತು ಬಿಡಿ:

ಜಿಲ್ಲಾ ಉಸ್ತುವಾರಿ ಸಚಿವರು ಅಹಂಕಾರದ ಮಾತುಗಳನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗಲೆಲ್ಲ ಸೊರಬ ಕ್ಷೇತ್ರದಿಂದ ಬಿಜೆಪಿಗೆ ಶಾಸಕರನ್ನು ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ನಮ್ಮದೇ ತಪ್ಪುಗಳಿಂದ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಆ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ. ಮತದಾರರ ಭಾವನೆಗಳಿಗೆ ತಕ್ಕಂತೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೊರಬ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೈಲಿಗೆ ಕಳಿಸಿದ್ದ ಮರೆತಿಲ್ಲ: ಹಾಲಪ್ಪ

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಸ್ಟಿಂಗ್ ಆಪರೇಷನ್ ಮೊದಲ ನಾಯಕ ಮಧು ಬಂಗಾರಪ್ಪ, ಮೊದಲ ಬಲಿಪಶು ನಾನೇ ಎಂದು ಲೇವಡಿ ಮಾಡಿದರು. ರಾಜಕೀಯವಾಗಿ ನನ್ನನ್ನು ಹತ್ತಿಕ್ಕುವ ಉದ್ದೇಶದಿಂದ ಷಡ್ಯಂತ್ರ ನಡೆಸಿ ಜೈಲಿಗೆ ಕಳುಹಿಸಲಾಗಿತ್ತು. ಆ ಘಟನೆಯನ್ನು ನಾನು ಮರೆತಿಲ್ಲ ಎಂದರು.

192 ಬಾರಿ ಪ್ರಕರಣಗಳು ದಾಖಲಾಗಿದ್ದ ವ್ಯಕ್ತಿಯ ಮನೆಗೆ ಬಂಗಾರಪ್ಪ ಅವರ ಹೆಸರನ್ನು ಬಳಸಿಕೊಂಡು ಮಧು ಬಂಗಾರಪ್ಪ ಕರೆ ಮಾಡಿದ್ದರು. ಆ ಪೈಕಿ ಒಂದು ಕರೆ 54 ನಿಮಿಷಗಳ ಕಾಲ ಸಂಭಾಷಣೆ ನಡೆದಿತ್ತು ಎಂದು ಆರೋಪಿಸಿದರು. ನಾನು ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ್, ಸ್ಟಿಂಗ್ ಆಪರೇಷನ್ ಮೂಲಕ ಅವಮಾನಿಸಿದವರ ವಿರುದ್ಧ ಹರತಾಳು ಹಾಲಪ್ಪ ಅವರೇ ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ವಿಧಾನಸಭೆಗೆ ಬರಬೇಕು ಎಂಬುದು ನನ್ನ ಆಶಯ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವುದರಿಂದ ರಾಜ್ಯದಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಅವರು, ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಎಂಟು ವರ್ಷ ಬಡವರ ಪರ ಆಡಳಿತ ನೀಡಿದ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದ ಅವರು 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

165 ಬೆಂಬಲಿಗರೊಂದಿಗೆ ಸೇರ್ಪಡೆ

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಡ್ಲೇರ್ ರುದ್ರಪ್ಪ ಕಮಲ ಮಾತನಾಡಿ, ಕಳೆದ 40 ವರ್ಷಗಳಿಂದ ಬಂಗಾರಪ್ಪ ಕುಟುಂಬದೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ದೀರ್ಘಕಾಲದ ಪ್ರಾಮಾಣಿಕ ರಾಜಕಾರಣದ ನಡುವೆಯೂ ಮಧು ಬಂಗಾರಪ್ಪ ಅವರು ನನ್ನ ಬಗ್ಗೆ ತಿರಸ್ಕಾರದ ಮನೋಭಾವ ತೋರಿಸಿದ್ದಾರೆ ಎಂದು ಆರೋಪಿಸಿದರು.

ನಾನು ಮನೆಗೆ ಬಂದರೆ ಗೇಟ್‌ನಿಂದ ಹೊರಗೆ ನಿಲ್ಲಿಸಿ ಎಂಬ ರೀತಿಯಲ್ಲಿ ಅವಮಾನಕರವಾಗಿ ಮಾತನಾಡಿದ್ದರು. ಕೆಲವು ವಿಚಾರಗಳಲ್ಲಿ ಜನರಿಗೆ ನ್ಯಾಯ ಒದಗಿಸುವ ಬದಲು ನಿರ್ಲಕ್ಷ್ಯ ತೋರಿದ್ದಾರೆ. ಬಿಜೆಪಿ ನಾಯಕರು ಪಕ್ಷಕ್ಕೆ ಆಹ್ವಾನಿಸಿದ ಬಳಿಕವೂ ವಿಶ್ವಾಸದಿಂದ 10 ತಿಂಗಳು ಕಾದಿದ್ದೆ. ಆದರೆ, ಮಧು ಬಂಗಾರಪ್ಪ ಅವರು ಕ್ಷೇತ್ರದ ಕಡೆ ಗಮನ ಹರಿಸಲಿಲ್ಲ. ಹೀಗಾಗಿ, ಇಂದು ತಾಲೂಕು ಪಂಚಾಯತಿ ಮಾಜಿ ಸದಸ್ಯ ಮಂಜಪ್ಪ ಉದ್ರಿ, ಟಿ.ಹನುಮಂತಪ್ಪ, ಆಂಜನೇಯ ಸುರೇಶ್ ಶಿವಲಿಂಗ ಸೇರಿದಂತೆ 165 ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು. ಬಿಜೆಪಿ ನಾಯಕರ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.

ಪಕ್ಷಕ್ಕೆ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ಶಾಸಕ ಡಿಎಸ್ ಅರುಣ್, ಮಾಜಿ ಶಾಸಕ ಆರ್. ಕೆ ಸಿದ್ರಾಮಣ್ಣ, ಜಿಲ್ಲಾ, ಎಂ.ಕೆ. ಜಗದೀಶ್, ಪಕ್ಷದ ಮುಖಂಡರಾದ ಪದ್ಮನಾಭ ಭಟ್, ಹರಿಕೃಷ್ಣ, ಮಾಲತೇಶ್, ಮೇಘರಾಜ್, ಪ್ರಕಾಶ್ ಅಗಸನಹಳ್ಳಿ, ರಾಜು ತಲ್ಲೂರ್, ವೈದ್ಯ ಜ್ಞಾನೇಶ್, ರಾಜು ಗೌಡ ಹಿರೇಜೌಟಿ, ಮಲ್ಲಿಕಾರ್ಜುನ ಗುತ್ತೇರ್, ಹೊನ್ನಪ್ಪ ಎಣ್ಣೆಕೊಪ್ಪ, ಮಂಜಪ್ಪ ಹಿತ್ಲಮನಿ, ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಜಾನಕಪ್ಪ, ಸುರೇಶ್ ಉದ್ರಿ ಇದ್ದರು.

PREV
Read more Articles on
click me!

Recommended Stories

Rapido Bike Lift: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ವಿವಾದದ ನಡುವೆಯೇ ರಾಪಿಡೋ ಹೊಸ ಪ್ಲ್ಯಾನ್, ಏನಿದು ‘ಬೈಕ್ ಲಿಫ್ಟ್’?
Cash refusal: ‘ನಾನು ನಿಮ್ಮ ಗ್ರಾಹಕನಲ್ಲವೇ?’ ಬೆಂಗಳೂರು ದರ್ಶಿನಿಯಲ್ಲಿ ನಗದು ಕೊಡಲು ಹೋದ ಮಹಿಳೆಗೆ ಎದುರಾದ ಅನುಭವವೇನು?