ಬೆಂಗಳೂರು: ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮೆಟ್ರೋ ಶೀಘ್ರ ಆರಂಭ?

By Kannadaprabha NewsFirst Published Jan 10, 2023, 6:21 AM IST
Highlights

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌ವರೆಗಿನ ಮಾರ್ಗವನ್ನು ಮಾರ್ಚ್‌ನಲ್ಲಿ ಪ್ರಯಾಣಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಹಾಗಾಗಿ ಫೆ.15ರಿಂದ 20ರವರೆಗೆ ಸಿಎಂಆರ್‌ಎಸ್‌ ಈ ಸುರಕ್ಷತಾ ಪರೀಕ್ಷೆ ಕೈಗೊಳ್ಳಲಿದೆ. ಪ್ರಸ್ತುತ ಈ ಮಾರ್ಗದ ಟ್ರ್ಯಾಕ್‌, ಸಿಗ್ನಲಿಂಗ್‌ ಸೇರಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. 

ಬೆಂಗಳೂರು(ಜ.10):  ‘ನಮ್ಮ ಮೆಟ್ರೋ’ ನೇರಳೆ ಮಾರ್ಗದ ಮುಂದುವರಿದ 2ನೇ ಹಂತದ ಯೋಜನೆ ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮಾರ್ಗದ ಸುರಕ್ಷತಾ ಪರೀಕ್ಷೆಯನ್ನು ‘ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ’ (ಸಿಎಂಆರ್‌ಎಸ್‌) ಫೆಬ್ರವರಿಯಲ್ಲಿ ನಡೆಸಲಿದೆ.

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌ವರೆಗಿನ ಮಾರ್ಗವನ್ನು ಮಾರ್ಚ್‌ನಲ್ಲಿ ಪ್ರಯಾಣಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಹಾಗಾಗಿ ಫೆ.15ರಿಂದ 20ರವರೆಗೆ ಸಿಎಂಆರ್‌ಎಸ್‌ ಈ ಸುರಕ್ಷತಾ ಪರೀಕ್ಷೆ ಕೈಗೊಳ್ಳಲಿದೆ. ಪ್ರಸ್ತುತ ಈ ಮಾರ್ಗದ ಟ್ರ್ಯಾಕ್‌, ಸಿಗ್ನಲಿಂಗ್‌ ಸೇರಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಸದ್ಯ ಒಂದು ರೈಲಿನ ಮೂಲಕ ಪ್ರಾಯೋಗಿಕ ಚಾಲನೆ ನಡೆಸಲಾಗುತ್ತಿದೆ. ಶೀಘ್ರವೇ ಜೋಡಿ ಹಳಿಗಳಲ್ಲಿ ಎರಡು ರೈಲುಗಳ ಪ್ರಾಯೋಗಿಕ ಚಾಲನೆ ಕೂಡ ಆರಂಭವಾಗಲಿದೆ.

Namma Metro: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ 1.70 ಕೋಟಿ ಆದಾಯ: ಹಿಂದಿನ ದಾಖಲೆ ಉಡೀಸ್

‘ಕನ್ನಡಪ್ರಭ’ ಜತೆ ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಪ್ರಾಯೋಗಿಕ ಚಲನೆ ವೇಳೆ ಕಂಡುಬರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿದ್ದೇವೆ. ಬಾಕಿ ಇರುವ ಚಿಕ್ಕಪುಟ್ಟಕಾಮಗಾರಿಗಳನ್ನು ಫೆ.15ರೊಳಗೆ ಪೂರ್ಣಗೊಳಿಸಲಾಗುವುದು. ವಿದ್ಯುತ್‌ ಪೂರೈಕೆ, ಬೋಗಿಗಳ ಚಲನೆ ಸೇರಿ ಇತರೆ ಸಂಗತಿಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಕೊಳ್ಳಲಾಗುವುದು. ಇದರ ಜತೆಗೆ ಈ ಮಾರ್ಗದಲ್ಲಿನ ನಿಲ್ದಾಣಗಳ ಲಿಫ್ಟ್‌, ಎಸ್ಕಲೇಟರ್‌ ವ್ಯವಸ್ಥೆ, ಎಲೆಕ್ಟ್ರಿಕಲ್‌ ಇನ್‌ಸ್ಟಾಲೇಶನ್‌ನಲ್ಲಿ ಆಗಬೇಕಾದ ಸುಧಾರಣೆ ತಪಾಸಣೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ಸಿಎಂಆರ್‌ಎಸ್‌ ಆಗಮಿಸುವುದಕ್ಕೂ ಮೊದಲು ಅಲ್ಲಿನ ತಜ್ಞರ ತಂಡ ಆಗಮಿಸಿ ದಾಖಲಾತಿಗಳನ್ನು ಪರಿಶೀಲಿಸಲಿದೆ. ಇವರು ವರದಿ ನೀಡಿದ ಬಳಿಕ ಆಯುಕ್ತರ ತಂಡ ಆಗಮಿಸಲಿದೆ. ಆಯುಕ್ತರ ತಂಡ ಕೇವಲ ರೈಲ್ವೆ ಸಂಚಾರ ಮಾತ್ರವಲ್ಲದೆ ಪ್ರಯಾಣಿಕರಿಗೆ ಒದಗಿಸಲಾದ ಸೌಕರ್ಯ ಸೇರಿ ಸಮಗ್ರವಾಗಿ ಸುರಕ್ಷತಾ ಪರೀಕ್ಷೆ ನಡೆಸಲಿದೆ. ಸಮರ್ಪಕವಾಗಿದ್ದರೆ ಅವರು ಚಾಲನೆಗೆ ಸುರಕ್ಷತಾ ಪ್ರಮಾಣಪತ್ರ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

Metro: ಹೊಸ ವರ್ಷಕ್ಕೆ ಮೆಟ್ರೋ ಗಿಫ್ಟ್‌: ಗುಂಪಾಗಿ ಹೋಗುವ ಪ್ರಯಾಣಿಕರಿಗೆ ಭರ್ಜರಿ ರಿಯಾಯಿತಿ

13.5 ಕಿ.ಮೀ. ಮಾರ್ಗ ಆರಂಭ

ಒಟ್ಟು 16 ಕಿ.ಮೀ. ಇರುವ ಈ ಮಾರ್ಗವನ್ನು ಎರಡು ಹಂತದಲ್ಲಿ ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುತ್ತಿದೆ. ಮೊದಲ ಹಂತವಾಗಿ ಮಾಚ್‌ರ್‍ನಲ್ಲಿ ಕೆ.ಆರ್‌.ಪುರ ಮತ್ತು ವೈಟ್‌ ಫೀಲ್ಡ್‌ವರೆಗಿನ 13.5 ಕಿಮೀ ಮಾರ್ಗ ಆರಂಭಿಸಲು ಯೋಜಿಸಿದೆ. ಉಳಿದಂತೆ ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರದ ವರೆಗಿನ 3.5 ಕಿಮೀ ಮಾರ್ಗದಲ್ಲಿ ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ಚಲನೆ ಆರಂಭವಾಗಲಿದೆ. ಬೆನ್ನಿಗಾನಹಳ್ಳಿಯಲ್ಲಿ ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನೇರಳೆ ಮಾರ್ಗ ಪೂರ್ಣವಾಗಿ ಆರಂಭವಾಗಲು ಇನ್ನೂ ಕಾಲಾವಕಾಶ ಬೇಕು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮಾರ್ಗದಲ್ಲಿ ಪ್ರಯಾಣಿಕರ ಸೇವೆ ಆರಂಭವಾದ ಬಳಿಕ ಐಟಿ ಕಾರಿಡಾರ್‌ಗೆ ಮೆಟ್ರೋ ಪ್ರವೇಶ ಆದಂತಾಗಲಿದೆ. ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚುವ ನಿರೀಕ್ಷೆಯಿದೆ. ಇದಕ್ಕಾಗಿ ಬೈಯಪ್ಪನಹಳ್ಳಿಯಿಂದ ಫೀಡರ್‌ ಬಸ್ಸುಗಳನ್ನು ಒದಗಿಸುವ ಯೋಜನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!