ನಂದಿನಿ ಬರ್ಫಿಗೆ ವಿ.ಸಿ.ಫಾರಂ ಬೆಲ್ಲ...!

By Kannadaprabha NewsFirst Published Jan 10, 2023, 5:59 AM IST
Highlights

ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ನಂದಿನಿ ಬೆಲ್ಲದ ಬರ್ಫಿಗೆ ವಿ.ಸಿ.ಫಾರಂ ಬ್ರಾಂಡ್‌ ಬೆಲ್ಲವನ್ನು ಉಪಯೋಗಿಸುತ್ತಿರುವುದು ಹೆಗ್ಗಳಿಕೆಯ ಸಂಗತಿ. ವಿಶ್ವ ವಿದ್ಯಾನಿಲಯದ ಮಾರ್ಗದರ್ಶನದಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಜಿಲ್ಲಾ ಹಾಲು ಒಕ್ಕೂಟದವರು ನಂದಿನಿ ಬೆಲ್ಲದ ಬರ್ಫಿಗೆ ಆಯ್ಕೆ ಮಾಡಿಕೊಂಡು ಮಂಡ್ಯ ಬೆಲ್ಲಕ್ಕೆ ಗತವೈಭವ ಸೃಷ್ಟಿಸಿದ್ದಾರೆ.

 ಮಂಡ್ಯ ಮಂಜುನಾಥ

  ಮಂಡ್ಯ :  ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ನಂದಿನಿ ಬೆಲ್ಲದ ಬರ್ಫಿಗೆ ವಿ.ಸಿ.ಫಾರಂ ಬ್ರಾಂಡ್‌ ಬೆಲ್ಲವನ್ನು ಉಪಯೋಗಿಸುತ್ತಿರುವುದು ಹೆಗ್ಗಳಿಕೆಯ ಸಂಗತಿ. ವಿಶ್ವ ವಿದ್ಯಾನಿಲಯದ ಮಾರ್ಗದರ್ಶನದಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಜಿಲ್ಲಾ ಹಾಲು ಒಕ್ಕೂಟದವರು ನಂದಿನಿ ಬೆಲ್ಲದ ಬರ್ಫಿಗೆ ಆಯ್ಕೆ ಮಾಡಿಕೊಂಡು ಮಂಡ್ಯ ಬೆಲ್ಲಕ್ಕೆ ಗತವೈಭವ ಸೃಷ್ಟಿಸಿದ್ದಾರೆ.

2021-22ನೇ ಸಾಲಿನಿಂದ ಪಿಎಂಎಫ್‌ಎಂಇ ಯೋಜನೆಯಡಿ ದ ಪಾರ್ಕ್ನ್ನು ಇನ್‌ಕ್ಯೂಬೇಷನ್‌ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆ ಮಾದರಿಯಲ್ಲಿ ಇ-ಟೆಂಡರ್‌ ಪ್ರಕ್ರಿಯೆ ನಡೆಸಿ ದ ಕಲ್ಲಿಕೋಟೆಯ ವರ್ಷ ಮೆಡಿಪ್ಲೋರ ಹರ್ಬಲ್‌ ಸಲ್ಯೂಷನ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸಲಾಗುತ್ತಿದೆ.

ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಹೇಗೆ?

ವಿಸಿಎಫ್‌ 0517 ತಳಿಯ ಕಬ್ಬಿನಿಂದ ಬೆಲ್ಲವನ್ನು ತಯಾರಿಸಲಾಗುತ್ತಿದೆ. ಬೆಲ್ಲಕ್ಕೆ ಸ್ವಲ್ಪವೂ ರಾಸಾಯನಿಕ ಬಳಸುವುದಿಲ್ಲ. ಸುಣ್ಣದ ಜೊತೆಗೆ ಗಂಡಿ ಕಡ್ಡಿ (ಬೆಂಡೆಕಾಯಿ ಕಾಂಡ), ದಾಸವಾಳ ಕಾಂಡ ಬಳಸಲಾಗುತ್ತದೆ. ಅಲ್ಲದೆ, ನೆಲಗಡಲೆ, ಸೋಯಾ, ಅವರೆ ಬೀಜವನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ರಾಸಾಯನಿಕ ಮುಕ್ತ ಬೆಲ್ಲವನ್ನು ಉತ್ಪಾದನೆ ಮಾಡಲಾಗುತ್ತಿದೆ.

ಬೆಲ್ಲದ ತಯಾರಿಕೆಯಲ್ಲಿ ಘನರೂಪದ ಬೆಲ್ಲ, ದ್ರವರೂಪದ ಬೆಲ್ಲ ಮತ್ತು ಪುಡಿ ಬೆಲ್ಲ ತಯಾರು ಮಾಡುವ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೌಲ್ಯವರ್ಧಿತ ಬೆಲ್ಲ ಉತ್ಪನ್ನಗಳಾದ ತುಳಸಿ, ಪುದೀನ, ಶುಂಠಿ ಉಪಯೋಗಿಇಸಿ ಬೆಲ್ಲ ತಯಾರು ಮಾಡುವ ಸಂಶೋಧನೆಯನ್ನೂ ಸಹ ಕೈಗೊಳ್ಳಲಾಗಿದೆ.

ಎಷ್ಟುಬೆಲ್ಲ ಉತ್ಪಾದನೆ?

ಬೆಲ್ಲದ ಪಾರ್ಕ್ನಲ್ಲಿ ಸ್ಥಾಪಿಸಿರುವ ಬೆಲ್ಲ ತಯಾರಿಕಾ ಘಟಕದಲ್ಲಿ ಪ್ರತಿದಿನ 10 ರಿಂದ 12 ಟನ್‌ ಕಬ್ಬನ್ನು ನುರಿಸಿ 10ರಿಂದ 12 ಕ್ವಿಂಟಲ್‌ ಬೆಲ್ಲ ತಯಾರು ಮಾಡುವ ಸಾಮರ್ಥ್ಯವಿದೆ. ಗುಣಮಟ್ಟದ ಕಬ್ಬಿನ ಲಭ್ಯತೆಗೆ ಅನುಸಾರವಾಗಿ ಪ್ರಸ್ತುತ ಪ್ರತಿ ದಿನಕ್ಕೆ 6 ರಿಂದ 7 ಟನ್‌ ಕಬ್ಬನ್ನು ನುರಿಸಿ ಬೆಲ್ಲ ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿ.ಸಿ.ಫಾರಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಬೆಲ್ಲದ ಪಾರ್ಕ್ನಲ್ಲಿ ತಯಾರಾದ ಬೆಲ್ಲವನ್ನು ಕೃಷಿ ವಿಶ್ವವಿದ್ಯಾನಿಲಯದ ವಿ.ಸಿ.ಫಾರಂ ಬ್ರಾಂಡ್‌ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ತಯಾರಾದ ರಾಸಾಯನಿಕ ಮುಕ್ತ ಬೆಲ್ಲವನ್ನು ಉಪಯೋಗಿಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದವರು ಬೆಲ್ಲದ ಬರ್ಫಿ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಬೆಲ್ಲದ ಬರ್ಫಿ ರುಚಿಗೆ ಗ್ರಾಹಕರು ಫಿದಾ ಆಗಿರುವುದು ಮಂಡ್ಯ ಬೆಲ್ಲಕ್ಕೆ ಹೆಚ್ಚಿನ ಮಹತ್ವ ತಂದುಕೊಟ್ಟಿದೆ. ವಿ.ಸಿ.ಫಾರಂ ಬ್ರಾಂಡ್‌ ಬೆಲ್ಲಕ್ಕೆ ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳಿಂದಷ್ಟೇ ಅಲ್ಲದೆ ತಮಿಳುನಾಡು ರಾಜ್ಯದಿಂದಲೂ ಬೇಡಿಕೆ ಬರುತ್ತಿದೆ.

ತಿಂಗಳಿಗೆ 3 ಟನ್‌ ಬೆಲ್ಲ ಪೂರೈಕೆ:

ಮನ್‌ಮುಲ್‌ನಲ್ಲಿ ತಯಾರಾಗುತ್ತಿರುವ ಬೆಲ್ಲದ ಬರ್ಫಿಗೆ ಪೈಲಟ್‌ ಪ್ರಾಜೆಕ್ಟ್ನಡಿ 3 ಟನ್‌ ಬೆಲ್ಲವನ್ನು ಪೂರೈಸಲಾಗಿದೆ. ಬೆಲ್ಲದ ಗುಣಮಟ್ಟಉತ್ತಮವಾಗಿರುವುದರಿಂದ ಮುಂದೆ ಪ್ರತಿ ತಿಂಗಳು 2ಟನ್‌ ಬೆಲ್ಲಕ್ಕೆ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಬೆಲ್ಲದ ಪಾರ್ಕ್ ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಫೆಬ್ರವರಿ ತಿಂಗಳಿನಿಂದ ಬೆಲ್ಲದ ಪಾರ್ಕ್ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸ್ಟೀಮ್‌ ಬಾಯ್ಲಿಂಗ್‌ ಯೂನಿಟ್‌, ಪೌಡರ್‌, ಪ್ಯಾಕಿಂಗ್‌, ಶೇಖರಣೆ ಯೂನಿಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಿಶೇಷ ತಳಿಗಳ ಅಭಿವೃಧ್ಧಿ

ಬೆಲ್ಲ ತಯಾರಿಕೆಗೆ ವಿಶೇಷವಾದ ತಳಿಗಳ ಅವಶ್ಯಕತೆ ಇದ್ದು ಸಕ್ಕರೆ ಕಾರ್ಖಾನೆಯಲ್ಲಿ ಉಪಯೋಗಿಸುವ ಎಲ್ಲ ತಳಿಗಳೂ ಬೆಲ್ಲ ತಯಾರಿಕೆಗೆ ಯೋಗ್ಯವಾಗಿರುವುದಿಲ್ಲ. ಆದ ಕಾರಣ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಬೆಲ್ಲ ತಯಾರಿಕೆಗಾಗಿ ಸಿಓ 86032 (ನಯನ), ಸಿಓ 8371, ಸಿಓವಿಸಿ 16061, ಸಿಓವಿಸಿ 16062, ಸಿಓವಿಸಿ 18061 ತಳಿಗಳನ್ನು ಅಭಿವೃದ್ಧಿಪಡಿಸಿ ಕಬ್ಬು ಬೆಳೆಯುವ ದಕ್ಷಿಣ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ.

ವಿಸಿಎಫ್‌ 0517 ತಳಿಯನ್ನು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ.90ರಷ್ಟುರೈತರ ಜಮೀನಿನಲ್ಲಿ ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಕಬ್ಬು ಮತ್ತು ಬೆಲ್ಲದ ಇಳುವರಿ ಕೊಡುವ ಈ ತಳಿಯ ಲಾಭವನ್ನು ರೈತರು ಪಡೆದುಕೊಳ್ಳುತ್ತಿದ್ದು, ಇದೇ ತಳಿಯನ್ನು ರಾಜ್ಯದ ಬೆಳಗಾವಿ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆಯಲ್ಲದೆ, ಹೊರರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲೂ ಸಹ ಬೆಳೆಯಲಾಗುತ್ತಿದೆ.

ರೈತರಿಗೂ ತರಬೇತಿ

ಬೆಲ್ಲದ ಪಾರ್ಕ್ನಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಬಗ್ಗೆ ಜಿಲ್ಲೆಯ ವಿವಿಧ ತಾಲೂಕುಗಳ 254 ರೈತರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಸುಮಾರು 25 ರೈತರು ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡಿದ್ದು ಪಿಎಂಎಫ್‌ಎಂಇ ಯೋಜನೆಯಡಿ ಒಡಿಒಪಿ (ಒಂದು ಜಿಲ್ಲೆ ಒಂದು ಉತ್ಪನ್ನ) ಅಡಿ ಮಂಡ್ಯ ಜಿಲ್ಲೆಯಲ್ಲಿ ಬೆಲ್ಲವನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ 144 ಜನ ಆಲೆಮನೆ ರೈತರು ಧನಸಹಾಯ ಪಡೆದಿದ್ದು ಇವರಿಗೂ ತರಬೇತಿಯನ್ನು ನೀಡಲಾಗಿದೆ. ಈ ಆಲೆಮನೆಗಳನ್ನು ಬಹುತೇಕ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಗೆ ಸಜ್ಜುಗೊಳಿಸಲಾಗುತ್ತಿದೆ.

ವಿ.ಸಿ.ಫಾರಂನಲ್ಲಿರುವ ಜಾಗರಿ ಪಾರ್ಕ್ನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಫೆಬ್ರವರಿಯಿಂದ ಸ್ಟೀಮ್‌ ಬಾಯ್ಲಿಂಗ್‌, ಪೌಡರ್‌, ಪ್ಯಾಕಿಂಗ್‌, ಶೇಖರಣೆ ಯೂನಿಟ್‌ಗಳನ್ನು ಹಾಕಲಾಗುತ್ತಿದೆ. ವಿ.ಸಿ.ಫಾರಂ ಬ್ರಾಂಡ್‌ ಬೆಲ್ಲವನ್ನು ನಂದಿನಿ ಬೆಲ್ಲದ ಬರ್ಫಿಗೆ ಉಪಯೋಗಿಸಲಾಗುತ್ತಿದ್ದು, ಈವರೆಗೆ 3 ಟನ್‌ ಬೆಲ್ಲವನ್ನು ಪೂರೈಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಬೆಲ್ಲಕ್ಕೆ ಬೇಡಿಕೆ ಬರುವ ಸಾಧ್ಯತೆಗಳಿದೆ. ಅಲ್ಲದೆ ಹೊರಗಿನಿಂದಲೂ ನಮ್ಮ ಬೆಲ್ಲಕ್ಕೆ ಬೇಡಿಕೆಯಿದೆ. ಬೇಡಿಕೆಗೆ ತಕ್ಕಂತೆ ಬೆಲ್ಲ ಉತ್ಪಾದನೆಗೆ ಸಜ್ಜಾಗುತ್ತಿದ್ದೇವೆ.

- ಕೇಶವಯ್ಯ, ಪ್ರಾಜೆಕ್ಟ್ ಲೀಡರ್‌, ಬೆಲ್ಲದ ಪಾರ್ಕ್

click me!