KPSC Scam: ಆ 4 ಸಚಿವರು, 4 ಅಧಿಕಾರಿಗಳ ಸುಳಿವು ನೀಡಿದ ಕಾಂತಕುಮಾರ್: ಕೆಪಿಎಸ್‌ಸಿ ಪೂರ್ಣ ರದ್ದತಿಗೆ ಪಟ್ಟು!

Published : Sep 21, 2026, 07:04 PM IST
KPSC Scam

ಸಾರಾಂಶ

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಕುರಿತು ಹೈಕೋರ್ಟ್ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಈ ಹಗರಣದಲ್ಲಿ ಹಲವು ಐಎಎಸ್ ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗಿದ್ದಾರೆ ಎಂದು ಆಕ್ಸಾ ಅಧ್ಯಕ್ಷ ಕಾಂತಕುಮಾರ್ ಆರೋಪಿಸಿದ್ದಾರೆ. ಐಪಿಎಸ್ ಅಲೋಕ್ ಕುಮಾರ್ ನೇತೃತ್ವದ ತನಿಖೆಯಿಂದ ಸತ್ಯಾಸತ್ಯತೆ ಹೊರಬರುವ ವಿಶ್ವಾಸವಿದೆ. ಇದರಲ್ಲಿ 4 ಸಚಿವರು, 4 ಐಎಎಸ್‌ ಅಧಿಕಾರಿಗಳು ಇದ್ದಾರೆ ಎನ್ನುವ ಸುಳಿವು ನೀಡಿದ್ದಾರೆ.

ಧಾರವಾಡ: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸಿದ ಪಶು ಸಂಗೋಪನೆ ಇಲಾಖೆಯ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಮತ್ತು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ' ನಡೆಸಿದ ಜಂಟಿ ತನಿಖಾ ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ವಿಶೇಷ ತನಿಖಾ ತಂಡ (SIT) ರಚನೆಗೆ ಮಹತ್ವದ ಆದೇಶ ನೀಡಿದೆ. ಈ ಕುರಿತು ಧಾರವಾಡದಲ್ಲಿ 'ಆಕ್ಸಾ' (AKSA) ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರೊಂದಿಗೆ ನಡೆಸಿದ ವಿಶೇಷ ಸಂಭಾಷಣೆಯಲ್ಲಿ ಹಲವು ಸ್ಪೋಟಕ ಹೊರಬಿದ್ದಿವೆ.

ಸುವರ್ಣ ನ್ಯೂಸ್ ಹಾಗೂ ನ್ಯಾಯಾಲಯಕ್ಕೆ ಧನ್ಯವಾದ!

ನೇಮಕಾತಿ ಅಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆಕ್ಸಾ ಅಧ್ಯಕ್ಷ ಕಾಂತಕುಮಾರ್ ಅವರು, ಪ್ರಕರಣವನ್ನು ಜನತೆಯ ಮುಂದೆ ತಂದ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಮಾಧ್ಯಮ ಸಮೂಹಕ್ಕೆ ಬಹಿರಂಗವಾಗಿ ಧನ್ಯವಾದ ಸಲ್ಲಿಸಿದರು. "ನಾವು ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವ ನ್ಯಾಯಾಲಯದ ಆದೇಶವನ್ನು ನಾನು ಶಿರಸಾ ವಹಿಸಿ ಗೌರವಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ" ಎಂದು ಕಾಂತಕುಮಾರ್ ಹರ್ಷ ವ್ಯಕ್ತಪಡಿಸಿದರು.

ಕಟ್ಟುನಿಟ್ಟಿನ ಗಡುವು ನೀಡಿದ ಹೈಕೋರ್ಟ್!

ಉನ್ನತ ಮಟ್ಟದ ಎಸ್‌ಐಟಿ ತನಿಖೆಗೆ ಆದೇಶಿಸಿರುವ ಹೈಕೋರ್ಟ್, ತನಿಖಾ ತಂಡಕ್ಕೆ ಅತ್ಯಂತ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. "ಎಸ್‌ಐಟಿ ಅಧಿಕಾರಿಗಳು ಮುಂಬರುವ 100 ದಿನಗಳ ಒಳಗಾಗಿ ಸಂಪೂರ್ಣ ತನಿಖೆಯನ್ನು ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೆ, ಪ್ರತಿ 30 ದಿನಕ್ಕೊಮ್ಮೆ ಅಂದರೆ ತಿಂಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು" ಎಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಈ ಆದೇಶದಿಂದಾಗಿ ಅಕ್ರಮ ಎಸಗಿದ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿದೆ.

ಐಎಎಸ್ ಅಧಿಕಾರಿಗಳು, ಸಚಿವರ ಭಾಗಿ; ಸಿಬಿಐ ತನಿಖೆಗೆ ಆಗ್ರಹ!

ಪ್ರಕರಣದ ತೀವ್ರತೆಯ ಬಗ್ಗೆ ಮಾತನಾಡಿದ ಕಾಂತಕುಮಾರ್, "ಈ ಅಕ್ರಮದಲ್ಲಿ ಕೇವಲ ಸಣ್ಣಪುಟ್ಟ ಸಿಬ್ಬಂದಿ ಮಾತ್ರವಲ್ಲ, ಉನ್ನತ ಮಟ್ಟದ ಅನೇಕ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ನನಗೆ ಸಿಕ್ಕಿರುವ ಖಚಿತ ಮಾಹಿತಿಯಂತೆ ಕನಿಷ್ಠ 3 ರಿಂದ 4 ಜನ ಐಎಎಸ್ (IAS) ಅಧಿಕಾರಿಗಳು ಹಾಗೂ 3 ರಿಂದ 4 ಜನ ಪ್ರಭಾವಿ ಸಚಿವರು ಈ ಅಕ್ರಮ ನೇಮಕಾತಿ ಜಾಲದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇವರೆಲ್ಲರೂ ಅಕ್ರಮ ಹಣವನ್ನು ಎಲ್ಲೆಲ್ಲಿ ಹೂಡಿಕೆ (Invest) ಮಾಡಿದ್ದಾರೆ ಎಂಬ ಅಷ್ಟೂ ದಾಖಲೆಗಳು ಹಾಗೂ ಸಾಕ್ಷ್ಯಗಳು ನನ್ನ ಬಳಿ ಇವೆ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಇನ್ನೂ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ನೀಡಲು ನಾವು ಸಿದ್ಧರಿದ್ದೆವು. ಅಲ್ಲದೆ, ನಿರಂತರ ಅಕ್ರಮಗಳ ತಾಣವಾಗಿರುವ ಕೆಪಿಎಸ್‌ಸಿಯನ್ನು ಪೂರ್ಣವಾಗಿ ರದ್ದುಗೊಳಿಸಬೇಕು" ಎಂದು ಒತ್ತಾಯಿಸಿದರು.

ಐಪಿಎಸ್ ಅಲೋಕ್ ಕುಮಾರ್ ನೇತೃತ್ವದ ಮೇಲೆ ವಿಶ್ವಾಸ!

ಎಸ್‌ಐಟಿ ತನಿಖೆಯ ಮುಖ್ಯಸ್ಥರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದ ಕಾಂತಕುಮಾರ್, "ಅಲೋಕ್ ಕುಮಾರ್ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯ ಮೇಲೆ ನಮಗೆ ಅಪಾರ ವಿಶ್ವಾಸವಿದೆ. ಅವರ ನೇತೃತ್ವದಲ್ಲಿ ಈ ಪ್ರಕರಣದ ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತ ತನಿಖೆ ನಡೆಯಲಿದೆ ಎಂಬ ಭರವಸೆ ನಮಗಿದೆ. ಭ್ರಷ್ಟಾಚಾರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಬಲೆಗೆ ಬೀಳುವುದು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಸೌಜನ್ಯ ಕೇಸ್‌ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದೇನು? ಯಾರೆಲ್ಲಾ ವಿಚಾರಣೆಗೆ ಒಳಗಾಗ್ತಾರೆ..
ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಪ್ರಮೋದಾ ದೇವಿ ಅಚ್ಚರಿ ಹೇಳಿಕೆ