
ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ (CID) ಅಧಿಕಾರಿಗಳಿಗೆ ದಿನಕ್ಕೊಂದು ಬೆಚ್ಚಿಬೀಳಿಸುವ ಸ್ಪೋಟಕ ವಿಚಾರಗಳು ಲಭ್ಯವಾಗುತ್ತಿವೆ. ಪ್ರಭಾವಿ ನಾಯಕರ ಬೆಂಬಲ, ಅಧಿಕಾರಿಗಳ ಶಾಮೀಲು, ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲ ಈ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ವೇಳೆ ಆರಂಭದಲ್ಲಿ ಭಾರಿ ದರ್ಪ ತೋರಿದ್ದ. ತನಗೆ ಪ್ರಭಾವಿ ರಾಜಕಾರಣಿಗಳು, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜೊತೆ ನಿಕಟ ಒಡನಾಟವಿದೆ ಎಂದು ಹೇಳಿಕೊಂಡು ತನಿಖಾಧಿಕಾರಿಗಳನ್ನೇ ಬೆದರಿಸಲು ಯತ್ನಿಸಿದ್ದ. ಈ ವೇಳೆ ಆತನ ದರ್ಪ ಮುರಿಯಲು ಸಿಐಡಿ ಅಧಿಕಾರಿಗಳು ಆತನನ್ನು ಕಟ್ಟಡದ ಕೆಳಮಹಡಿಯ (ಬೇಸ್‌ಮೆಂಟ್) ಸೆಲ್‌ಗೆ ಸ್ಥಳಾಂತರಿಸಿದ್ದರು. ಆ ಸೆಲ್‌ನ ಪಕ್ಕದಲ್ಲೇ ಶೌಚಾಲಯವಿದ್ದು, ವಿಪರೀತ ಸೊಳ್ಳೆಗಳ ಕಾಟವಿತ್ತು. ಸೊಳ್ಳೆಗಳ ಕಾಟಕ್ಕೆ ಬೇಸತ್ತ ಬಸವರಾಜ, ಕೊನೆಗೆ ತನ್ನ ದರ್ಪವೆಲ್ಲವನ್ನು ಬದಿಗಿಟ್ಟು ತನಿಖೆಗೆ ಪೂರ್ಣ ಸಹಕಾರ ನೀಡಲು ಆರಂಭಿಸಿದ್ದಾನೆ.
ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಮೂವರು ಅಭ್ಯರ್ಥಿಗಳಿಂದ ತಲಾ ₹35 ಲಕ್ಷದಂತೆ ಬಸವರಾಜ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ. ಈ ಹಣವನ್ನು ನೇರವಾಗಿ ಪಡೆಯದೆ ತನ್ನ ಆಪ್ತ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ. ನಂತರ ಆ ಖಾತೆಗಳಿಂದ ತನ್ನ ಸ್ವಂತ ಅಕೌಂಟ್‌ಗೆ ಜಮೆ ಮಾಡಿಕೊಂಡಿದ್ದ. ಜನವರಿ ತಿಂಗಳಿನಲ್ಲಿ ಈತನ ಖಾತೆಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಅನುಮಾನಾಸ್ಪದ ವಹಿವಾಟಿನ ಜಾಡು ಹಿಡಿದ ಸಿಐಡಿ ಅಧಿಕಾರಿಗಳು, ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಅಕ್ರಮ ವಹಿವಾಟು ಸಂಪೂರ್ಣವಾಗಿ ಸಾಬೀತಾಗಿದೆ.
ತನಿಖೆಯ ವೇಳೆ ಬಸವರಾಜ ಕನ್ನಾಳೆ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ನಡುವಿನ ಸುದೀರ್ಘ ನಂಟು ಹೊರಬಿದ್ದಿದೆ. 2019 ರಲ್ಲಿ ಜ್ಞಾನೇಂದ್ರ ಬೀದರ್ ಜಿಲ್ಲಾ ಪಂಚಾಯತ್ ಸಿಇಒ (CEO) ಆಗಿದ್ದಾಗ ಬಸವರಾಜನ ಪರಿಚಯವಾಗಿತ್ತು. ಜ್ಞಾನೇಂದ್ರ ವರ್ಗಾವಣೆಯಾದ ನಂತರವೂ ಇಬ್ಬರ ನಡುವಿನ ಕಮಿಷನ್ ದಂಧೆ ಮುಂದುವರಿದಿತ್ತು. ಜ್ಞಾನೇಂದ್ರ ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ನಿಯೋಜನೆಗೊಂಡಾಗ, ಅವರ ಅಧಿಕಾರವನ್ನು ಬಳಸಿಕೊಂಡು ಬಸವರಾಜ ನೇಮಕಾತಿ ಡೀಲ್‌ಗಳನ್ನು ಕುದುರಿಸಲು ಆರಂಭಿಸಿದ್ದ. ಜ್ಞಾನೇಂದ್ರ ನೇರವಾಗಿ ಮುಂಭಾಗಕ್ಕೆ ಬಾರದೆ, ಬಸವರಾಜನ ತಂಡದ ಮೂಲಕ ಹಣ ಸಂಗ್ರಹಿಸುತ್ತಿದ್ದರು. ಜ್ಞಾನೇಂದ್ರ ಅವರಿಗೆ ನಗದು ರೂಪದಲ್ಲಿ ಪಾಲು ತಲುಪುತ್ತಿದ್ದರೆ, ಉಳಿದವರಿಗೆ ಖಾತೆಗಳ ಮೂಲಕ ಹಣ ಸಂದಾಯವಾಗುತ್ತಿತ್ತು.
ವಿಚಾರಣೆ ವೇಳೆ ಮತ್ತೊಂದು ಆಘಾತಕಾರಿ ಸತ್ಯ ಬಯಲಾಗಿದೆ. ಜ್ಞಾನೇಂದ್ರ ಇಡೀ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡುವ ಬದಲು, ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳಲಾಗುವ 70 ಪ್ರಮುಖ ಪ್ರಶ್ನೆಗಳನ್ನು ಲೀಕ್ ಮಾಡಿದ್ದರು. ಬಸವರಾಜ ಕನ್ನಾಳೆ ಹಾಗೂ ಆತನ ತಂಡ ಅಭ್ಯರ್ಥಿಗಳನ್ನು ರಹಸ್ಯವಾಗಿ ರೆಸಾರ್ಟ್‌ಗೆ ಕರೆದೊಯ್ದು, ಈ 70 ಪ್ರಶ್ನೆಗಳಿಗೆ ಉತ್ತರಗಳನ್ನು ರೆಡಿ ಮಾಡಿಸಿ ತರಬೇತಿ ನೀಡಿದ್ದರು ಎಂಬುದು ತಿಳಿದುಬಂದಿದೆ.
ಡೀಲ್ ಹಣದ ವಹಿವಾಟು ಹಾಗೂ ಸಾಗಾಟ ನಿರ್ವಹಣೆಗೆ ಬಸವರಾಜ ತನ್ನ ಮೂವರು ನಿಷ್ಠಾವಂತ ಸಹಚರರನ್ನು ಬಳಸಿಕೊಂಡಿದ್ದ. ಬಸವರಾಜನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಈ ಮೂವರು ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಇವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಇವರು ಸೆರೆಸಿಕ್ಕರೆ ಪ್ರಕರಣದಲ್ಲಿ ಮತ್ತಷ್ಟು ದಂಗೆ ಏಳಿಸುವ ಮಾಹಿತಿಗಳು ಲಭ್ಯವಾಗಲಿವೆ.
ಮತ್ತೊಂದೆಡೆ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಅಕ್ರಮಗಳ ಸರಣಿಯೂ ಸಿಐಡಿ ತನಿಖೆಯಲ್ಲಿ ಬಯಲಾಗುತ್ತಿದೆ. ಶಿವಶಂಕರಪ್ಪ ಸಾಹುಕಾರ್ ತಮ್ಮ ಮಗಳಿಗಷ್ಟೇ ಅಲ್ಲದೆ, ತಮ್ಮ ಬಂಧು ಬಳಗಕ್ಕೂ ಸಾಲಾಗಿ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಧಾರೆ ಎರೆದಿರುವುದು ಪತ್ತೆಯಾಗಿದೆ.
ಅವರ ಹತ್ತಿರದ ಸಂಬಂಧಿ ಸುಗುರೇಶ್ ಎಂಬ ಅಭ್ಯರ್ಥಿಗೆ ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕಗಳನ್ನು ನೀಡಿ ಉನ್ನತ ರ್ಯಾಂಕ್ ಕೊಡಿಸಲಾಗಿತ್ತು. ಆದರೆ, ಆತನ ಶೈಕ್ಷಣಿಕ ಹಿನ್ನೆಲೆ ಪರಿಶೀಲಿಸಿದಾಗ ಬಿಎಸ್‌ಸಿ ವೆಟರಿನರಿ (BSc Veterinary) ಪದವಿಯಲ್ಲಿ ಆತ ಜಸ್ಟ್ ಪಾಸ್ ಆಗಿದ್ದ ಕನಿಷ್ಠ ಅಂಕಗಳ ವಿದ್ಯಾರ್ಥಿ! ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ಟಾಪರ್ ಆದವರೂ ಸಹ 350 ಅಂಕ ದಾಟಲು ಹೆಣಗಾಡುವಾಗ, ಬಿಎಸ್ಸಿ ಪದವಿಯಲ್ಲಿ ಕಮ್ಮಿ ಮಾರ್ಕ್ಸ್ ತೆಗೆದುಕೊಂಡಿದ್ದ ಸುಗುರೇಶ್ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ಸಿಐಡಿ ತನಿಖೆಯಲ್ಲಿ ಉತ್ತರ ಸಿಕ್ಕಿದೆ. ಶಿವಶಂಕರಪ್ಪ ಸಾಹುಕಾರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಗುರೇಶ್‌ಗೆ ಅಂಕಗಳನ್ನು ಧಾರೆ ಎರೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ. ಪ್ರಸ್ತುತ ಸಿಐಡಿ ಅಧಿಕಾರಿಗಳು ಹಗರಣದ ಆಳಕ್ಕೆ ಇಳಿದು ತನಿಖೆ ಮುಂದುವರಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ.