
ಬೆಂಗಳೂರು: ಕರ್ತವ್ಯ ಲೋಪ ಹಿನ್ನೆಲೆ ಬೆಂಗಳೂರು ಕೇಂದ್ರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಹೆಚ್.ವಿ. ರಮೇಶ್ ಅಮಾನತು ಮಾಡಿ ಆದೇಶ ನೀಡಲಾಗಿದೆ. ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕೆಲ ದಿನಗಳ ಹಿಂದಷ್ಟೇ ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದ ವರೆಗೂ ಬೀದಿ ದೀಪಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 222 ವಿದ್ಯುತ್ ಕಂಬಗಳ ಪೈಕಿ 140 ಕಂಬಗಳಲ್ಲಿ ದೀಪಗಳು ಕಾರ್ಯನಿರ್ವಹಿಸದಿರುವುದು ಪತ್ತೆಯಾಗಿತ್ತು. ಇದರೊಂದಿಗೆ ಬೀದಿ ದೀಪಗಳ ನಿರ್ವಹಣೆಯಲ್ಲಿ ಲೋಪ ಆಗಿರುವುದು ಖಚಿತವಾಗಿತ್ತು.
ಸಚಿವರು ಪರಿಶೀಲನೆ ನಡೆಸುವ ಮುನ್ನ ಈ ಸಂಬಂಧ ಎರಡು ಬಾರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆಗಸ್ಟ್ 04 ರಂದು ನಡೆದ ಸಭೆಯಲ್ಲೂ ಬೀದಿ ದೀಪಗಳ ನಿರ್ವಹಣೆಯಲ್ಲಿ ಹೆಚ್ಚಿನ ಗಮನ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಸಚಿವರ ಕಟ್ಟುನಿಟ್ಟಿನ ಸೂಚನೆ ಬಳಿಕವೂ ಅವರ ನಿರ್ದೇಶನಗಳನ್ನು ಪಾಲಿಸದ ಆರೋಪ ಮೇರೆಗೆ ಬೆಂಗಳೂರು ಕೇಂದ್ರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಹೆಚ್.ವಿ. ರಮೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ನೀಡಲಾಗಿದೆ.
ಆಗಸ್ಟ್ 04 ಸಭೆಯಲ್ಲಿ ಮಾತನಾಡಿದ್ದ ಸಚಿವರು, ಸಹಾಯ ಪೋರ್ಟಲ್‌ನಲ್ಲಿ ಬರುತ್ತಿರುವ ದೂರುಗಳಲ್ಲಿ ಶೇಕಡಾ 34ರಷ್ಟು ದೂರುಗಳು ಕಾರ್ಯನಿರ್ವಹಿಸದ ಬೀದಿ ದೀಪಗಳ ಬಗ್ಗೆ ಬರುತ್ತಿದೆ. ಆದ್ದರಿಂದ ತಕ್ಷಣವೇ ಅಧಿಕಾರಿಗಳು, ಜನರು ದೂರು ನೀಡಿದ 48 ಗಂಟೆಗಳ ಒಳಗೆ ಸಮಸ್ಯೆ ಬಗೆಹರಿಸಬೇಕು. ಗುತ್ತಿಗೆದಾರರು ಸಮಸ್ಯೆ ಪರಿಹರಿಸಲು ವಿಫಲವಾದರೆ ದಂಡ ವಿಧಿಸಿ. ಸರಿಯಾಗಿ ಸ್ಪಂದಿಸಿದ್ದರೆ ಗುತ್ತಿಗೆದಾರರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಿದ್ದರು.
ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣಗೊಂಡದರೆ ಶೇಖಡಾ 61.01 ರಷ್ಟು ವಿದ್ಯುತ್ ಉಳಿತಾಯ ಆಗಲಿದೆ. ಆದರೆ ಯೋಜನೆ ನಿರೀಕ್ಷ ಮಟ್ಟದಲ್ಲಿ ವೇಗವಾಗಿ ನಡೆಯುತ್ತಿಲ್ಲ. ಬಾಕಿ ಇರುವ ಎಲ್ಲಾ ಎಲ್‌ಇಡಿ ದೀಪ ಮತ್ತು ಸಿಸಿಎಂಎಸ್ ಪ್ಯಾನಲ್ ಅಳವಡಿಸಲು ಹೆಚ್ಚುರಿಯಾಗಿ ಎರಡು ತಿಂಗಳು ಕಾಲಾವಕಾಶ ನೀಡಿ, ಆಗಸ್ಟ್ 03ರ ವೇಳೆಗೆ ಈ ಕಾರ್ಯ ಮುಕ್ತಾಯಗೊಳಿಸಬೇಕು ಎಂದು ಡೆಡ್‌ಲೈನ್ ಕೂಡ ವಿಧಿಸಿದ್ದರು.