* ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರ
* ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ
* ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಏಕೆ ಮಾಡ್ತಾ ಇದೀರಾ..?
ಹುಬ್ಬಳ್ಳಿ(ಆ.29): ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಅವಳಿ ನಗರಗಳ ಅಭಿವೃದ್ಧಿಗೆ ಪೂರಕ ಪ್ರಣಾಳಿಕೆಯನ್ನ ನೀಡಿದ್ದೇವೆ. ಕಾಂಗ್ರೆಸ್ ಇದುವರೆಗೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸಿದ್ದೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿಯವರೇ ಇದ್ದಾರೆ. ಕೇಂದ್ರ, ರಾಜ್ಯದಲ್ಲಿ ಅವರದ್ದೇ ಅಡಳಿತ ಇದ್ದರೂ ಜನರಿಗೆ ಏನು ಲಾಭ?. 15 ವರ್ಷಗಳಿಂದ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರ ನಡೆಸಿದೆ. ಕಳೆದ ಪ್ರಣಾಳಿಕೆಯಲ್ಲಿ ನೀಡಿದ್ದ ಒಂದೂ ಬೇಡಿಕೆಯನ್ನೂ ಈಡೇರಿಸಿಲ್ಲ. ಜನರಿಗೆ ಯಾಕೆ ಸುಳ್ಳು ಹೇಳ್ತೀರಿ, ತಪ್ಪು ದಾರಿಗೆ ಯಾಕೆ ಎಳೆಯುತ್ತಿದ್ದೀರಿ. ಒಂದೂ ಭರವಸೆ ಈಡೇರಿಸಿಲ್ಲ ಅಂದ ಮೇಲೆ ಜನರ ಬಳಿ ಯಾಕೆ ಹೋಗ್ತೀರಿ..?.ಬಿಜೆಪಿಯವರದ್ದು ಬರೀ ಸುಳ್ಳಿನ ಸರಮಾಲೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಸಮುಕ್ತ ನಗರದ ಮಾಡುವ ಭರವಸೆ ಎಲ್ಲಿ ಹೊಯ್ತು..?
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆರಂಭಿಸುವ ಭರವಸೆ ಏನಾಯಿತು?. ಕಸಮುಕ್ತ ನಗರದ ಮಾಡುವ ಭರವಸೆ ಎಲ್ಲಿ ಹೊಯ್ತು..?. ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರೇ ಎಲ್ಲಿದೆ ಆಸ್ಪತ್ರೆ, ಕಸಮುಕ್ತ ನಗರ..?. ಇಡೀ ರಸ್ತೆಯ ಧೂಳು ಎಲ್ಲ ನಮ್ಮ ಮೈ ಮೇಲೆಯೇ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಮಾಡಿದ ಅಭಿವೃದ್ಧಿಯೇ ಗೆಲವಿಗೆ ಶ್ರೀರಕ್ಷೆ: ಅರವಿಂದ ಬೆಲ್ಲದ
ಅವಳಿ ನಗರದಲ್ಲಿ ಹೊಸ ಈಜುಕೊಳ ಅಂತೇಳಿದ್ರು, ಎಲ್ಲಿದೆ ಈಜುಕೊಳ ತೋರಿಸಿ, ನಾವು ಈಜು ಹೊಡೆಯುತ್ತೇವೆ. ಹುಬ್ಬಳ್ಳಿ- ಬೆಳಗಾವಿ- ಬೆಂಗಳೂರು ಹೈ ಸ್ಪೀಡ್ ರೈಲು ಆರಂಭಿಸುವ ಭರವಸೆ ಎಲ್ಲಿ ಹೋಯ್ತು.?. ನಾನು ಜಗದೀಶ್ ಶೆಟ್ಟರ್ ಸಚಿವರಾಗಿದ್ದಾಗ ಸಲಹೆ ಕೊಟ್ಟಿದ್ದೆ, ಆದ್ರೆ ಪಾಪ ಅವರು ಈಗ ಮಾಜಿ ಆಗಿಬಿಟ್ರು ಎಂದು ಹೇಳಿದ್ದಾರೆ.
ನಿಮ್ಮ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯೋದು ಒಳಿತು. ಹು-ಧಾ, ಬೆಳಗಾವಿ, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ್ರೆ ಮೂರು ನಗರಗಳ ಆಸ್ತಿ ಕರ ಶೇ.50 ರಷ್ಟು ಮನ್ನಾ ಮಾಡುತ್ತೇವೆ ಅಂತ ಭರವಸೆ ನೀಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಇವರದ್ದೆ ಸರ್ಕಾರ, ಕಳೆದ 15 ವರ್ಷಗಳಿಂದ ಪಾಲಿಕೆಯಲ್ಲಿಯೂ ಅಧಿಕಾರದಲ್ಲಿದ್ದೀರಿ ಆದ್ರೆ ಹುಬ್ಬಳ್ಳಿ-ಧಾರವಾಡದ ಜನರಿಗೆ ನೀವು ಕೋಟ್ಟಿದ್ದು ಏನೂ..?. ನೀವು ಸುಳ್ಳಿನ ಸರಮಾಲೆ ಹಾಕಿಕೊಂಡು ಹೊರಟಿದ್ದೀರಿ, ಇಲ್ಲಿರುವಂತಹ ಬಿಜೆಪಿ ಸ್ನೇಹಿತರು ಹಾಗೂ ಕೇಂದ್ರ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಏಕೆ ಮಾಡ್ತಾ ಇದೀರಾ..?. ನಿಮಗೆ ಜನರು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರವಾಗಿದೆ. ಇಲ್ಲಿ ಡ್ಯಾನ್ಸ್ ಕಲಿಯಬೇಕಾಗಿಲ್ಲ, ಹುಬ್ಬಳ್ಳಿ-ಧಾರವಾಡದ ರಸ್ತೆಗಳು ಡ್ಯಾನ್ಸ್ ಹೇಳಿಕೊಡ್ತವೆ. ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಸಾಹೇಬರು ಇತ್ತ ಕಡೆ ನೋಡಬೇಕು. ಇಲ್ಲಿ ನೀವು ಬಂದು ಕೆಲಸ ಮಾಡೋದು ಬೇಡ, ನಿಮ್ಮ ಅಧಿಕಾರಿಗಳನ್ನ ಕಳುಹಿಸಿ ಕೆಲಸ ಮಾಡಿಸಿ ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪಾಲಿಕೆ ನಡೆಯುತ್ತಿದೆ. ನಾನು ಅಪೀಲಲ್ ಮಾಡ್ತಾ ಇದಿನಿ ನಮ್ಮ ಮತದಾರರಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಎಲ್ಲವನ್ನು ಈಡೇರಿಸುತ್ತೆವೆ. ನಾನು ಪ್ರಮಾಣ ಮಾಡ್ತೇನೆ, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಿಮಗೆ ಮಾತು ಕೊಡುತ್ತೇನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.