'ಸಿಎಂ ಹಾಗೂ ಸಚಿವರ ನಡುವೆ ಹೊಂದಾಣಿಕೆ ಇಲ್ಲ'

By Kannadaprabha NewsFirst Published Aug 27, 2021, 9:36 AM IST
Highlights
  • ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ
  • ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ
  • ಮೈಸೂರು ಪ್ರಕರಣ ಸಂಬಂಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ

 ಮೈಸೂರು (ಆ.27):  ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.

ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಸಮನ್ವಯವಿಲ್ಲ ಎನ್ನುವುದಕ್ಕೆ ನಿನ್ನೆ ನೀಡಿದ ಹೇಳಿಕೆಯೇ ಸ್ಪಷ್ಟಉದಾಹರಣೆ. ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇರೆಗೆ ನಾವು ತನಿಖೆ ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ದೆಹಲಿಯಲ್ಲಿ ಹೇಳಿದ್ದಾರೆ. ಅದೇ ಸಮಯಕ್ಕೆ ಮೈಸೂರಿನಲ್ಲಿ ಸಂತ್ರಸ್ತೆಯ ಸ್ನೇಹಿತನ ಹೇಳಿಕೆಯ ಆಧಾರದ ಮೇಲೆ ನಾವು ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಇಲ್ಲಿ ಸ್ಪಷ್ಟತೆ ಇಲ್ಲ. ಹಾಗಾದರೆ ಇಲ್ಲಿ ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿ ಇಲ್ಲವಾ? ಸಿಎಂ ಜೊತೆ ಗೃಹ ಸಚಿವರ ಸಮನ್ವಯತೆ ಇಲ್ಲವಾ ಎಂದು ಪ್ರಶ್ನಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ : ಮಾಲವಿಕಾ ಆಕ್ರೋಶ

ಪ್ರವಾಸೋದ್ಯಮದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರು ಮೈಸೂರಿಗೆ ಕನಿಷ್ಠ 10 ರಿಂದ 20 ಲಕ್ಷ ಜನರು ಬಂದು ಹೋಗುವ ಸಂದರ್ಭ ಇರುವಾಗ ಗ್ಯಾಂಗ್‌ ರೇಪ್‌, ಕೊಲೆ, ಸುಲಿಗೆ, ದರೋಡೆಯಂತಹ ವಿಚಾರಗಳು ಬಂದಾಗ ಮೈಸೂರಿಗೆ ಜನ ಬರಲು ಭಯಭೀತರಾಗುತ್ತಾರೆ. ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚುವ ಕೆಲಸ ಆಗಲಿದೆ. ಈ ವಿಚಾರದಲ್ಲಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಲು ಅನರ್ಹರು. ಅವರು ಸುಮ್ಮನೆ ಬರುತ್ತಾರೆ, ಫೋಟೋ ತೆಗೆಸಿಕೊಂಡು ಹೋಗುವುದು ಬಿಟ್ಟರೆ ಏನು ಪ್ರಯೋಜನ ಇಲ್ಲ ಎಂದು ಅವರು ಕಿಡಿಕಾರಿದರು.

ಮೈಸೂರು ಮತ್ತು ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಬಿಜೆಪಿಯವರು ಸರ್ಕಾರ ರಚನೆ ಮಾಡಲು ಆರಂಭಿಸಿದ ಮೇಲೆ, ಬೆಂಗಳೂರಿನಲ್ಲಿ ದಿನನಿತ್ಯ ಕೊಲೆ, ಸುಲಿಗೆ ದರೋಡೆಯನ್ನು ಕಾಣುತ್ತಿದ್ದೇವೆ. ಈಗ ಮೈಸೂರಿನಂತಹ ಸಾಂಸ್ಕೃತಿಕ ನಗರಕ್ಕೂ ಆವರಿಸಿಕೊಂಡಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ದೂರಿದರು.

ನಿರ್ಭಯಾ ಪ್ರಕರಣದಲ್ಲಿ ದೆಹಲಿಯಲ್ಲಿ ಬಿಜೆಪಿ ಮಹಿಳಾ ನಾಯಕಿಯರು ಮಾಧ್ಯಮಗಳಲ್ಲಿ ಬಂದು ಬೊಬ್ಬೆ ಹೊಡೆಯುತ್ತಿದ್ದರು. ಈಗ ಯಾರೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಅವರು ಕುಟುಕಿದರು.

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಮಾಜಿ ಮೇಯರ್‌ ಅಯೂಬ್‌ ಖಾನ್‌ ಮೊದಲಾದವರು ಇದ್ದರು.

click me!