ಕೋವಿಡ್ ಲಸಿಕೆ : ಉಡುಪಿ ರಾಜ್ಯಕ್ಕೆ 2ನೇ ಸ್ಥಾನ - ಬಾಣಂತಿಗೆ, ಗರ್ಭಿಣಿಯರಿಗೂ ವ್ಯಾಕ್ಸಿನೇಷನ್

By Kannadaprabha News  |  First Published Aug 27, 2021, 9:24 AM IST
  • ಕೋವಿಡ್‌ ಲಸಿಕೆ ವಿತರಣೆಯಲ್ಲಿ ಉಡುಪಿ ಜಿಲ್ಲೆ ಶೇ 83.37 ಸಾಧನೆ
  • ಶೇ. 99ರಷ್ಟುಸಾಧನೆ ಮಾಡಿರುವ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ
  • ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದ್ದರೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಕ್ರಮವಾಗಿ ನಂತರದ ಸ್ಥಾನ

  ಉಡುಪಿ (ಆ.27):  ಕೋವಿಡ್‌ ಲಸಿಕೆ ವಿತರಣೆಯಲ್ಲಿ ಉಡುಪಿ ಜಿಲ್ಲೆ ಶೇ 83.37 ಸಾಧನೆ ಮಾಡಿದ್ದು, ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ.

ಶೇ. 99ರಷ್ಟುಸಾಧನೆ ಮಾಡಿರುವ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದ್ದರೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

Latest Videos

undefined

ಜಿಲ್ಲಾವಾರು 18 ವರ್ಷ ಮೇಲ್ಪಟ್ಟಜನಸಂಖ್ಯೆಯ ಆಧಾರದಲ್ಲಿ ಕೋವಿಡ್‌ ಲಸಿಕೆ ಹಾಕುವ ಗುರಿಯನ್ನು ನೀಡಲಾಗಿದೆ. ಅದರಂತೆ ಉಡುಪಿ ಜಿಲ್ಲೆಗೆ 10,33,870 ಮಂದಿಗೆ ಲಸಿಕೆ ಹಾಕುವ ಗುರಿ ಇದ್ದು, ಬುಧವಾರದವರೆಗೆ 8,61,963 ಮಂದಿಗೆ ಲಸಿಕೆ ಹಾಕಲಾಗಿದೆ. ಅವರಲ್ಲಿ 6,25,086 ಮಂದಿಗೆ 1ನೇ ಡೋಸ್‌ ಮತ್ತು 2,36,877 ಮಂದಿಗೆ 2ನೇ ಡೋಸ್‌ ಲಸಿಕೆ ಹಾಕಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಅಂಕಿ-ಸಂಖ್ಯೆ

ಜಿಲ್ಲೆಯಲ್ಲಿ ಇದುವರೆಗೆ 18ರಿಂದ 45 ವರ್ಷದೊಳಗಿನ 2,77,554 ಮಂದಿಗೆ 1ನೇ ಡೋಸ್‌, 34,962 ಮಂದಿಗೆ 2ನೇ ಡೋಸ್‌ ಲಸಿಕೆ ಹಾಕಲಾಗಿದ್ದರೆ, 45 ವರ್ಷ ಮೇಲ್ಪಟ್ಟವರಲ್ಲಿ 3,58,707 ಮಂದಿಗೆ 1ನೇ ಡೋಸ್‌, 1,91,979 ಮಂದಿಗೆ 2ನೇ ಡೋಸ್‌ ಲಸಿಕೆ ಹಾಕಲಾಗಿದೆ.

ಇನ್ನು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 23,570 (ಶೇ 99) ಮಂದಿಗೆ 1ನೇ ಡೋಸ್‌, 19,609 (ಸೇ 82) ಮಂದಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. 8,120 ಮುಂಚೂಣಿಯ ಕಾರ್ಯಕರ್ತರಲ್ಲಿ 8,079 (ಶೇ 99) ಮಂದಿಗೆ 1ನೇ ಡೋಸ್‌ ಮತ್ತು 4,107 (ಶೇ 51) ಮಂದಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ.

5,000 ಬಾಣಂತಿಯರು, 4,000 ಗರ್ಭಿಣಿಯರಿಗೆ ಲಸಿಕೆ

ಕೋವಿಡ್‌ ಲಸಿಕೆಯಿಂದ ಬಾಣಂತಿಯರು ಮತ್ತು ಗರ್ಭಿಣಿಯರಿಗೆ ರಿಯಾಯತಿ ಇದ್ದರೂ, ಅವರಿಗೆ ಲಸಿಕೆ ನೀಡಿ ಯಾವುದೇ ಅಪಾಯವಾದ ಘಟನೆಗಳು ವರದಿಯಾಗಿಲ್ಲ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಸರಿಸುಮಾರು 14,000ದಷ್ಟುಗರ್ಭಿಣಿಯರು ಮತ್ತು 15,000 ದಷ್ಟುಬಾಣಂತಿಯರು ಇದ್ದಾರೆ. ಅವರಲ್ಲಿ 4,000 ಗರ್ಭಿಣಿಯರಿಗೆ ಹಾಗೂ 5,000ದಷ್ಟುಬಾಣಂತಿಯರಿಗೆ ಲಸಿಕೆ ನೀಡಲಾಗಿದೆ.

ಅಶಕ್ತ ಹಿರಿಯ ನಾಗರಿಕರ ಮನೆಗೆ ತೆರಳಿ ಲಸಿಕೆ: ಡಿಸಿ

1ನೇ ಮತ್ತು 2ನೇ ಕೋವಿಡ್‌ ಅಲೆಯಲ್ಲಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಆದ್ದರಿಂದ ಶೇ. 85ರಷ್ಟುಮಂದಿ ಹಿರಿಯ ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ನಾನಾ ಕಾರಣಗಳಿಂದ ಲಸಿಕೆ ಕೇಂದ್ರಗಳಿಗೆ ಬರಲಾರದ ಶೇ. 15ರಷ್ಟುಮಂದಿ ಹಿರಿಯ ನಾಗರಿಕರ ಮನೆಗೆ ತೆರಳಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಕೊರತೆ ಇಲ್ಲ, ಪ್ರತಿದಿನ 8 - 10 ಸಾವಿರ ಲಸಿಕೆ ಹಾಕಲಾಗುತ್ತಿದೆ.

ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

click me!