ಈ ಹೊಟೇಲ್‌ನಲ್ಲಿ ₹10ಕ್ಕೆ 5 ಇಡ್ಲಿ, ಟೀಗೆ ಕೇವಲ 3 ರು

By Kannadaprabha NewsFirst Published Sep 25, 2018, 12:08 PM IST
Highlights

ಮಹಾನಗರದ ಹೋಟೆಲ್‌ಗಳಲ್ಲಿ ಒಂದು ಇಡ್ಲಿಗೆ ರೂ.14 ಬೆಲೆ ಇರುವಾಗ ಕೊಪ್ಪಳದ ಬಿಬಿಎಂ ಪದವೀಧರನೊಬ್ಬ ಅತಿ ಕಡಿಮೆ ಬೆಲೆಗೆ ಅತ್ಯಂತ ರುಚಿಕರ ಇಡ್ಲಿ ನೀಡಿ ಮಾದರಿಯಾಗಿದ್ದಾನೆ. ಈ ಬಡವರ ಬಂಧು ಚಂದ್ರು ಗೌಳಿಯ ಸ್ಫೂರ್ತಿ ಕತೆ ಇಲ್ಲಿದೆ.

10ರು.ಗೆ ಐದು ಇಡ್ಲಿ. ಕೇವಲ 3ರು.ಗೆ ಒಂದು ಕಪ್ ಬಿಸಿ ಚಹಾ. ಅವಲಕ್ಕಿ, ಉಪ್ಪಿಟ್ಟು, ಮಂಡಾಳು ವಗ್ಗರಣೆ(ಚುರುಮುರಿ) ಯಾವುದನ್ನೇ ಬೇಕಿದ್ದರೂ ಕೇವಲ 5 ರು. ಗೆ ತಿನ್ನಬಹುದು. ಕಳೆದ ನಾಲ್ಕು ವರ್ಷಗಳಿಂದ ಇಷ್ಟು ಕಡಿಮೆ ಬೆಲೆಗೆ ತಿಂಡಿ ನೀಡುತ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಸಹ ಇವರ ಹೊಟೇಲ್‌ನ ರುಚಿ ನೋಡಿ ತೃಪ್ತಿ ಪಟ್ಟುಕೊಂಡಿದ್ದಾರೆ. ಶ್ಲಾಘಿಸಿದ್ದಾರೆ.

ಈ ಅಪರೂಪದ ಹೋಟೆಲ್ ನಡೆಸುತ್ತಿರುವ ವ್ಯಕ್ತಿಯ ಹೆಸರು ಚಂದ್ರು ಗೌಳಿ. ಕೊಪ್ಪಳ ನಗರದ ಕೂಗಳತೆ ದೂರದಲ್ಲಿರುವ ಚಿಲವಾಡಗಿ ಗ್ರಾಮದಲ್ಲಿ ಇವರ ಹೋಟೆಲ್ ಇದೆ. ಬಿಬಿಎಂ ಪದವೀಧರ. 2010ರಲ್ಲಿ ಕೊಪ್ಪಳ ನಗರದ ಮಿಲೇನಿಯಂ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿದ ಬಳಿಕ ಹೋಸಪೇಟೆ, ಬೆಂಗಳೂರು ಸೇರಿದಂತೆ ನಾನಾ ಕಂಪನಿಗಳಲ್ಲಿ ಕ್ಯಾಷಿಯರ್, ಫೈನಾನ್ಸ್ ವಿಭಾಗಗಳಲ್ಲಿ ಕೆಲಸ ಮಾಡಿದ ಚಂದ್ರು ನಂತರ ಮಧ್ಯಪ್ರದೇಶದಲ್ಲಿರುವ ಕಂಪನಿಯೊಂದರಲ್ಲಿ ಕೆಲ ತಿಂಗಳ ಕಾಲ ನಿರ್ವಹಿಸಿದರು. ಆದರೆ, ಆ ಕಂಪನಿಗಳಲ್ಲಿ ಕೆಲಸ ಮಾಡುವ ವೇಳೆ ದಿನನಿತ್ಯದ ಒತ್ತಡದ ಕೆಲಸ ಮನಸ್ಸಿಗೆ ಸರಿ ಹೊಂದದ ಕಾರಣ ಕೆಲಸಕ್ಕೆ ಗುಡ್ ಬೈ ಹೇಳಿ ತಮ್ಮೂರು ಚಿಲವಾಡಗಿಗೆ ಬಂದರು.

ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಹೋಟೆಲ್ ಆರಂಭಿಸಿದರು. ಬೆಳಗ್ಗೆ 4 ಗಂಟೆಗೆ ಎದ್ದು ಮುಂಜಾನೆಯ ಟಿಫಿನ್‌ಗೆ ಅಗತ್ಯವಿರುವ ಸಾಮಗ್ರಿಗಳನು ಸಿದ್ಧಪಡಿಸಿಕೊಳ್ಳಲಾರಂಭಿಸಿದರು. ರುಚಿ, ರುಚಿಯಾದ, ಬಿಸಿ ಬಿಸಿಯಾದ ಆಹಾರ ಪದಾರ್ಥವನ್ನು ತೀರಾ ಕಡಿಮೆ ದರಕ್ಕೆ ನೀಡಿದ್ದರಿಂದ ಬಹುಬೇಗನೆ ಜನಪ್ರಿಯತೆ ಗಳಿಸಿದರು. ಕಳೆದ ಎರಡು ವರ್ಷಗಳಿಂದಲೂ ಇವರ ವ್ಯಾಪಾರ ವಹಿವಾಟು ವೃದ್ಧಿಯಾಗಿದ್ದು, ಪ್ರತಿ ತಿಂಗಳು ಇವರು ಸುಮಾರು ₹ 40 ರಿಂದ ₹50 ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುವಾಗ ಗರಿಷ್ಠ 30 ಸಾವಿರ ಸಂಬಳ ಪಡೆಯುತ್ತಿದ್ದ ಅವರು ಇದೀಗ 50 ಸಾವಿರ ಸಂಪಾದನೆ ಮಾಡುತ್ತಿರುವುದಲ್ಲದೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಂಗಿಯ ಮದುವೆ ಕೂಡ ಮಾಡಿದ್ದಾರೆ. ಸಹೋದರನನ್ನು ಎಂಬಿಎ ಓದಿಸುತ್ತಿದ್ದಾರೆ.

click me!