ಧಾರ್ಮಿಕ ಆಚರಣೆಗಳು ಹೇಗೆ ಇರಬೇಕು ಎಂದು ಕಾನೂನು ನಿರ್ಧರಿಸಲು ಮುಂದಾದರೆ ಒಂದೆಲ್ಲಾ ಒಂದು ಅಡೆತಡೆಗಳು ಉಂಟಾಗುತ್ತಲೇ ಇರುತ್ತವೆ. ಅದಲ್ಲೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಗಣಪತಿ ಹಬ್ಬದ ಡಿಜೆ ಸೌಂಡ್ ಹೈಕೋರ್ಟ್ ಅಂಗಳದಲ್ಲಿ ಮೊಳಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಸಲಿ ಕತೆ ಏನು?
ಕೊಪ್ಪಳ[ಸೆ.20] ನಗರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಮುಖಂಡ ಗವಿಸಿದ್ದಪ್ಪ ಜಂತಕಲ್ ಎಂಬುವವರು ಜಿಲ್ಲಾಡಳಿತದ ಆದೇಶದ ವಿರುದ್ಧ ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಿ ದಾವೆ ಹೂಡಿದ್ದಾರೆ. ಗಣೇಶ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿಜೆ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಡಿಜೆ ಬಳಕೆಗೆ ಅವಕಾಶ ನೀಡಬೇಕು ಎಂದು ಹಲವು ಸಂಘಟನೆಗಳು ಕಳೆದ ಬಾರಿಯೇ ಗಣೇಶ ಹಬ್ಬದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದವು. ಡಿಜೆಯಿಂದಾಗಿ ಸಾರ್ವಜನಿಕರಿಗೆ ವಿವಿಧ ರೀತಿಯ ತೊಂದರೆಯಾಗುತ್ತದೆ ಎಂದು ಡಿಜೆ ಬಳಕೆಯನ್ನು ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೇಳುತ್ತಿದೆ.
ಆದರೆ, ಅಂತಹ ಯಾವುದೇ ತೊಂದರೆಯಾಗಿಲ್ಲ, ತೊಂದರೆಯಾಗುವುದು ಇಲ್ಲ. ಹೀಗಾಗಿ ನಾವು ಜಿಲ್ಲಾಡಳಿತದ ಡಿಜೆ ಬ್ಯಾನ್ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅರ್ಜಿ ವಿಚಾರಣೆ ನಡೆಯಲಿದ್ದು, ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ ಎಂದು ಅರ್ಜಿದಾರ ಗವಿಸಿದ್ದಪ್ಪ ಜಂತಕಲ್ ಹೇಳುತ್ತಿದ್ದಾರೆ. ಒಟ್ಟಾರೆ 9ನೇ ದಿನದ ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್ ಇರುತ್ತದೆಯೋ ಇಲ್ಲವೋ ಎಂಬುದು ನ್ಯಾಯಾಲಯದ ಆದೇಶದ ನಂತರವೇ ಗೊತ್ತಾಗಲಿದೆ.