
ಕೊಪ್ಪಳ: ಮನೆಯಲ್ಲಿ ಹೊಲಕ್ಕೆ ಹೋಗು ಎಂದರೆ ಅಲ್ಲಿ ಹುಲಿ ಬಂದಿದೆ ಎಂದು ಎಐ ಚಿತ್ರದ ಮೂಲಕ ಹುಲಿ ಇರುವುದನ್ನು ತೋರಿಸಿದ್ದಲ್ಲದೆ, ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡುವ ಮೂಲಕ ಆತಂಕ ಸೃಷ್ಟಿಸಿದ ಯುವಕನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಕವಳಿ ಗ್ರಾಮದ ಈರಣ್ಣ ಹೊನ್ನುಂಚಿ ಎನ್ನುವ ಯುವಕ ಇಂಥದ್ದೊಂದು ಆತಂಕ ಸೃಷ್ಟಿಸಿರುವುದನ್ನು ಪತ್ತೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಆತ ಸೃಷ್ಟಿ ಮಾಡಿದ ಎಐ ಚಿತ್ರದಲ್ಲಿರುವ ಗುಡ್ಡದ ಬಳಿ ಕರೆದುಕೊಂಡು ಹೋಗಿ ಆತನ ಮೂಲಕವೇ ಆತನು ಮಾಡಿದ ತಪ್ಪನ್ನು ಹೇಳಿಸಿದ್ದಾರೆ. ಅಷ್ಟೇ ಅಲ್ಲ ಯುವಕನಿಗೆ 50 ಬಸ್ಕಿ ಹೊಡಿಸಿದ್ದಾರೆ.
ಈರಣ್ಣ ಎನ್ನುವಾತನಿಗೆ ಮನೆಯಲ್ಲಿ ಹೊಲಕ್ಕೆ ಹೋಗು ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಿಕೊಳ್ಳಲು ತನ್ನ ಮೊಬೈಲ್ ನಲ್ಲಿ ಹೊಲದ ಪಕ್ಕದಲ್ಲಿರುವ ಗುಡ್ಡವೊಂದರ ಚಿತ್ರವನ್ನು ಬಳಸಿ ಎಐ ಮೂಲಕ ಗುಡ್ಡದ ಮೇಲೆ ಹುಲಿ ಕಾಣಿಸುವಂತೆ ಮಾಡಿದ್ದಾನೆ. ಅದನ್ನು ಮನೆಯವರಿಗೆ ತೋರಿಸಿ ಅಲ್ಲಿ ಹುಲಿ ಬಂದಿದೆ ಎಂದು ಹೇಳಿದ್ದಾನೆ. ಇದರಿಂದ ಅವರು ಹೊಲಕ್ಕೆ ಹೋಗುವುದು ಬೇಡ ಎಂದಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಈರಣ್ಣ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾನೆ. ಹೀಗೆ ಅಪ್ಲೋಡ್ ಆದ ಫೋಟೋದಿಂದ ಜನರು ಆತಂಕಗೊಂಡಿದ್ದಾರೆ. ಈ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?
ಫೋಟೋದ ಮೇಲೆ ಅನುಮಾನ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಅದನ್ನು ಪರಾಮರ್ಶೆಗೆ ಒಳಪಡಿಸಿದಾಗ ಅದು ಕೃತಕ ಬುದ್ಧಿಮತ್ತೆಯ ಚಿತ್ರ ಎನ್ನುವುದು ಗೊತ್ತಾಗಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ಅಪ್ಲೋಡ್ ಮಾಡಿದ ಯುವಕನನ್ನು ಬೆನ್ನಟ್ಟಿದ್ದಾರೆ. ಯುವಕ ಈರಣ್ಣ ಪತ್ತೆಯಾದ ಮೇಲೆ ಆತನು ಬಳಕೆ ಮಾಡಿದ ಚಿತ್ರ ಗುಡ್ಡದ ಬಳಿಗೆ ಕರೆದುಕೊಂಡು ಹೋಗಿ, ಆತನ ಮೂಲಕವೇ ನಾನೇನು ತಪ್ಪು ಮಾಡಿದ್ದೇನೆ ಎಂದು ಹೇಳಿಸಿ, ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಹೀಗೆ ಕೃತಕ ಬುದ್ಧಿಮತ್ತೆಯ ಚಿತ್ರ ದುರ್ಬಳಕೆ ಮಾಡಿಕೊಂಡ ಈರಣ್ಣನಿಗೆ 50 ಬಸ್ಕಿ ಹೊಡೆಸಿದ್ದಾರೆ.
ಇದನ್ನೂ ಓದಿ: Koppal: ವಿಚಿತ್ರ ಖಯಾಲಿ, ಬಳ್ಳಾರಿ ಮೂಲದ ಬೈಕ್ ಕಳ್ಳ ಕೊಪ್ಪಳದಲ್ಲಿ ಅರೆಸ್ಟ್! ಕದ್ದಿದ್ದೆಷ್ಟು ಗೊತ್ತಾ?