ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ: ಕಾರಣ ಇದೇನಾ?

Published : Sep 05, 2026, 09:22 PM IST
DK Shivakumar

ಸಾರಾಂಶ

ಗಂಗಾವತಿ ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಚಂಡಿಕಾಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿರುವುದಾಗಿ ಡಿಕೆಶಿ ಹೇಳಿದರು.

ಗಂಗಾವತಿ (ಸೆ.05): ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಭೇಟಿ ನೀಡಿ, ಚಂಡಿಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರು ಸೆ.6ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ಬೂದೇಶ್ವರ ದೇವಸ್ಥಾನದಲ್ಲಿ ಚಂಡಿಕಾಯಾಗ, ಸಂಕಲ್ಪ ಹೋಮ ಹಾಗೂ ಅಷ್ಟೋತ್ತರ ಹೋಮಗಳನ್ನು ಆಯೋಜಿಸಿದ್ದರು.

ಯಾಗದಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಕಾರಣಾಂತರಗಳಿಂದ ಭಾನುವಾರ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಒಂದು ದಿನ ಮುಂಚಿತವಾಗಿಯೇ ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೂದೇಶ್ವರ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.

‘ರಾಮುಲು ಅವರು ನಮ್ಮ ಪಕ್ಷದ ಹಿರಿಯರು, ತಂದೆ-ಮಗನ ಸಂಬಂಧವಿದೆ’

ಪೂಜೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಎಚ್.ಜಿ.ರಾಮುಲು ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ತಮ್ಮೊಂದಿಗೆ ಸುಮಾರು 40 ವರ್ಷಗಳಿಂದ ಪರಿಚಯ ಹೊಂದಿದ್ದಾರೆ ಎಂದು ಹೇಳಿದರು.

'ರಾಮುಲು ಅವರಿಗೂ ನನಗೂ ತಂದೆ-ಮಗನ ಸಂಬಂಧವಿದೆ. ಅವರ ಆಶೀರ್ವಾದ ಪಡೆಯಬೇಕು ಎಂಬ ಉದ್ದೇಶದಿಂದ ದೇವಸ್ಥಾನಕ್ಕೆ ಬಂದಿದ್ದೇನೆ. ಅವರು ಕೂಡ ಹಲವು ವರ್ಷಗಳಿಂದ ಬೂದೇಶ್ವರ ದೇವಸ್ಥಾನಕ್ಕೆ ಬನ್ನಿ ಎಂದು ಹೇಳುತ್ತಿದ್ದರು. ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಸಮಯ ಕೂಡಿ ಬಂದಿರುವುದರಿಂದ ದೇವಸ್ಥಾನಕ್ಕೆ ಬಂದಿದ್ದೇನೆ' ಎಂದರು.

ನಾಳೆ ಚಂಡಿಕಾಯಾಗ ನಡೆಯಲಿರುವ ಹಿನ್ನೆಲೆಯಲ್ಲಿ ಸಂಕಲ್ಪ ಮಾಡಲು ಆಗಮಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಉತ್ತಮ ಬೆಳೆ ಆಗಬೇಕು, ಜಲಾಶಯಗಳು ಭರ್ತಿಯಾಗಬೇಕು ಎಂದು ಸಂಕಲ್ಪ ಮಾಡಿರುವುದಾಗಿ ಹೇಳಿದರು. ಇದೇ ವೇಳೆ, ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ. ತಾವು ಭಕ್ತಿಯಿಂದ ದೇವಸ್ಥಾನಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ರಾಮುಲು ಭೇಟಿಯಾಗಿ ಆಶೀರ್ವಾದ ಪಡೆದ ಸಿಎಂ

ದೇವಸ್ಥಾನಕ್ಕೆ ತೆರಳುವುದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರನ್ನು ಭೇಟಿಯಾಗಿ ಅವರ ಪಾದಗಳಿಗೆ ನಮಸ್ಕರಿಸಿದರು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್, ಹೊಸಪೇಟೆ ಶಾಸಕ ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಎಚ್.ಆರ್.ಭರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪೂರ್ಣಕುಂಭ, ವೇದಘೋಷದೊಂದಿಗೆ ಸ್ವಾಗತ

ಬೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸುತ್ತಿದ್ದಂತೆ ಪುರೋಹಿತರು ಪೂರ್ಣಕುಂಭ ಹಾಗೂ ವೇದಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

PREV
Read more Articles on
click me!

Recommended Stories

2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ: ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು
30 ಕಿ.ಮೀ ಹೋಗಿ ದಾರಿ ತಪ್ಪಿದ್ದ 14ರ ಶಿವಮೊಗ್ಗದ ಮೂಕ ಬಾಲಕಿ; WhatsApp ಒಂದು ಫೋಟೋದಿಂದ ಪತ್ತೆ ಹಚ್ಚಿದ ಪೊಲೀಸರು!