
ಗಂಗಾವತಿ (ಸೆ.20): ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮರೆಯದೆ, ರಷ್ಯಾದಲ್ಲಿ ನೆಲೆಸಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಗಣೇಶೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿ ಗಮನ ಸೆಳೆದಿದ್ದಾರೆ. ರಷ್ಯಾದ ಯೊಷ್ಕರ್ ಓಲಾದಲ್ಲಿರುವ ಮಾರಿ ಸ್ಟೇಟ್ ಯುನಿವರ್ಸಿಟಿಯ ಪಾರ್ಕೋಮೆಂಕೋ ಹಾಸ್ಟೆಲ್‌ನಲ್ಲಿ ಭಾರತದ ವಿವಿಧ ರಾಜ್ಯಗಳ ವೈದ್ಯಕೀಯ ವಿದ್ಯಾರ್ಥಿಗಳು ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಅದೇ ರೀತಿಯಾಗಿ ಭಾರತದಿಂದಲೇ ಗಣೇಶನ ವಿಗ್ರಹವನ್ನು ರಷ್ಯಾಕ್ಕೆ ತೆಗೆದುಕೊಂಡು ತೆರಳಿದ್ದ ವಿದ್ಯಾರ್ಥಿಗಳು, ಐದು ದಿನಗಳ ಕಾಲ ಪ್ರತಿದಿನ ಗಣೇಶನಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಭಾರತೀಯ ಸಂಸ್ಕೃತಿಯ ಮಾದರಿಯಲ್ಲಿ ಆಯೋಜಿಸಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ವಿದೇಶಿ ನೆಲದಲ್ಲೂ ಭಾರತೀಯ ಸಂಸ್ಕೃತಿಯ ಕಂಪನ್ನು ಪಸರಿಸಿದ ವಿದ್ಯಾರ್ಥಿಗಳ ಗಣೇಶೋತ್ಸವಕ್ಕೆ ರಷ್ಯಾದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೂ ಸಾಥ್ ನೀಡಿದರು.
ಅದ್ಧೂರಿ ಮೆರವಣಿಗೆ
ಭಾರತೀಯ ಸಂಪ್ರದಾಯ, ಆಚರಣೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಹತ್ತಿರದಿಂದ ತಿಳಿದುಕೊಳ್ಳಲು ಈ ಕಾರ್ಯಕ್ರಮ ಅವರಿಗೆ ಅವಕಾಶ ಕಲ್ಪಿಸಿತು. ಐದು ದಿನಗಳ ಗಣೇಶೋತ್ಸವದ ಬಳಿಕ ಗಣೇಶನ ವಿಗ್ರಹವನ್ನು ಭಜನೆ, ಜೈಕಾರ ಹಾಗೂ ನೃತ್ಯದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಗಣೇಶೋತ್ಸವದ ಸಂಭ್ರಮ
ಭಾರತದ ವಿವಿಧ ರಾಜ್ಯಗಳಿಂದ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಗಣೇಶೋತ್ಸವದಲ್ಲಿ ಭಾಗವಹಿಸಿದ್ದರು. ವೈದ್ಯಕೀಯ ವಿದ್ಯಾರ್ಥಿಗಳಾದ ದೀಪಕ್ ಪಂಡಿತ್, ಲಕ್ಷ್ಮೀ, ವಾರುಣಿ ನವಲಿ, ಭರತ್ ಗುಜ್ಜರ್, ತೇಜಸ್ ಗೌಡರ್, ನಂದೀಶ್, ಉದಯ ಬಡಿಗೇರ್ ಸೇರಿದಂತೆ ಹಲವರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ವಿದ್ಯಾರ್ಥಿಗಳೊಂದಿಗೆ ರಷ್ಯಾದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶೋತ್ಸವದ ಸಂಭ್ರಮವನ್ನು ಹಂಚಿಕೊಂಡರು.
ಭಾರತೀಯ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ತಮ್ಮ ನೆಲದ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಹಬ್ಬಗಳ ಮೇಲಿನ ಪ್ರೀತಿ ಮತ್ತು ಗೌರವವನ್ನು ಉಳಿಸಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಷ್ಯಾದ ನೆಲದಲ್ಲಿ ನಡೆದ ಈ ಗಣೇಶೋತ್ಸವವು ಭಾರತೀಯ ಸಂಸ್ಕೃತಿಯ ಸೌಹಾರ್ದತೆ ಮತ್ತು ವೈವಿಧ್ಯತೆಯನ್ನು ಮತ್ತೊಮ್ಮೆ ಪರಿಚಯಿಸಿತು.