
ಉಡುಪಿ: ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ್ ರೈ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ದುರ್ಘಟನೆಯಲ್ಲಿ ಮಾಜಿ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾರ್ಕಳದ ಸಾಣೂರಿನಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಮೂಡುಬಿದಿರೆಗೆ ತೆರಳುತ್ತಿತ್ತು. ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಕಡೆಗೆ ಹೋಗುತ್ತಿತ್ತು. ಈ ವೇಳೆ ಭೀಕರ ಅಪಘಾತವಾಗಿದೆ. ಇನ್ನು ಘಟನೆಯಲ್ಲಿ ಮಾಜಿ ಸಚಿವರ ಕಾರು ಚಾಲಕ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಗೊಂಡಿರುವ ಮಾಜಿ ಸಚಿವರ ಕಾರು ಚಾಲಕ ಹಾಗೂ ರಮಾನಾಥ್ ರೈ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ಹೊಡೆತಕ್ಕೆ ಕಾರು ಹಾಗೂ ಖಾಸಗಿ ಬಸ್‌ಗೆ ಹಾನಿಯಾಗಿದೆ. ಇನ್ನು, ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಸ್ವಲ್ಪದರಲ್ಲಿ ಭಾರೀ ದೊಡ್ಡ ಅನಾಹುತ ತಪ್ಪಿದೆ.
ಕಾರ್ಕಳದ ಸಾಣೂರಿನಲ್ಲಿ ಬರುವ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ ಇದೆ. ಇದು ತಿಳಿಯದೇ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತ ಬೆನ್ನಲ್ಲೇ, ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಅಲ್ಲಿನ ಸ್ಥಳೀಯರು ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇನ್ನು, ಅಪಘಾತದ ಬಗ್ಗೆ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.