
ಬಾಗಲಕೋಟೆ: ಇಳಕಲ್ಲ ನಗರದ ಮುಸ್ಲಿಂ ಸಮಾಜದ ಯುವ ಮುಖಂಡ ರಾಜ ಮಹಮ್ಮದ್ ಮನೆಗೆ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಆಕಸ್ಮಿಕ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಇಳಕಲ್ಲದ ರಾಜ ಮಹಮ್ಮದ್ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪರಮ ಭಕ್ತರು. ಕೊಪ್ಪಳ ಶ್ರೀಮಠಕ್ಕೆ ಹೋದಾಗ ಒಂದು ಬಾರಿ ನಮ್ಮ ಮನೆಗೆ ಆಗಮಿಸುವಂತೆ ಆಗಾಗ ಮನವಿ ಮಾಡುತ್ತಿದ್ದರು. ಶ್ರೀಗಳು ಇಳಕಲ್ಲ ನಗರದ ಮೂಲಕ ಕೊಪ್ಪಳಕ್ಕೆ ಪ್ರಯಾಣಿಸುವಾಗ ರಾಜು ಅವರ ನೆನಪಾಗಿ ವಾಹನವನ್ನು ಇಳಕಲ್ಲ ನಗರದ ರಾಜು ಮಹಮ್ಮದ ಮನೆಯತ್ತ ಹೋಗಲು ತಿಳಿಸಿದರು. ಶ್ರೀಗಳು ಮನೆಗೆ ಬರುತ್ತಿರುವುದನ್ನು ಕೇಳಿ ರಾಜು ಮಹಮ್ಮದ್ ಹಾಗೂ ಕುಟುಂಬದವರ ಸಂತಸ ಹೇಳತಿರದು. ಮನೆಗೆ ಬಂದ ಶ್ರೀಗಳನ್ನು ಸ್ವಾಗತಿಸಿಕೊಂಡ ರಾಜು ಕುಟುಂಬದ ಪರವಾಗಿ ಗೌರವ ಸತ್ಕಾರ ಮಾಡಿದರು. ರಾಜು ಮಹಮ್ಮದ್ ಸಮಾಜ ಸೇವೆಗೆ ಶ್ರೀಗಳು ಶ್ರೀಮಠದ ಪರವಾಗಿ ರಾಜು ಮಹಮ್ಮದಗೆ ಗೌರವಿಸಿ ಸತ್ಕರಿಸಿದರು.
ನೀತಿಯ ಮೇಲೆ ಸಮಾಜ ಕಟ್ಟಲಿ: ಗವಿ ಶ್ರೀ
ಜಾತೀಯತೆ ಮೇಲೆ ಸಮಾಜ ಕಟ್ಟುವ ಬದಲು ನೀತಿಯ ಮೇಲೆ ಸಮಾಜ ಕಟ್ಟುವ ಅವಶ್ಯಕತೆ ಇದೆ ಎಂದು ಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀ ಅಭಿಪ್ರಾಯಪಟ್ಟರು. ಪಟ್ಟಣದ ಜಗದಂಬಾ ದೇಗುಲದ ಕಳಸಾರೋಹಣದ ಹಿನ್ನಲೆಯಲ್ಲಿ ಸೋಮವಾರ ದೇಗುಲಕ್ಕೆ ಭೇಟಿ ನೀಡಿ ಕಳಸಾರೋಹಣದ ಸಿದ್ಧತೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪರಿಶೀಲಿಸಿ ಮಾತನಾಡಿದರು.
ಇದನ್ನೂ ಓದಿ: Koppal: ಗವಿಸಿದ್ದೇಶ್ವರ ಮಠದ ಶಾಖೆಗಳಿಗೆ ಉತ್ತರಾಧಿಕಾರಿಗಳ ನೇಮಕ
ಮಕ್ಕಳಿಗೆ ಶಿಕ್ಷಣ ಒದಗಿಸಲು ಪೋಷಕರು ಸದಾ ಮುಂದಾಗಬೇಕು. ಶಿಕ್ಷಣದ ಜೊತೆಗೆ ಜೀವನದ ಪಾಠ ಕಲಿಸುವಲ್ಲಿ ಪೋಷಕರು ಎಚ್ಚರ ವಹಿಸಬೇಕು. ಸಹೋದರತೆ ಮತ್ತು ಪರಸ್ಪರರಲ್ಲಿ ಬಾಂಧವ್ಯ ವೃದ್ಧಿಯಾಗಲಿ ಎಂದು ಹಾರೈಸಿದರು. ಶ್ರೀಗಳ ಪಾದಪೂಜೆ ನೆರವೇರಿಸಿದ ಸಮಾಜದ ಅಧ್ಯಕ್ಷ ದೀಪಕ್ ಕಠಾರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಗುಲ ನಿರ್ಮಾಣದ ಹಿಂದೆ ಸಮಾಜ ಬಾಂಧವರ ಶ್ರಮವಿದೆ. ಮುಂದಿನ ದಿನಗಳಲ್ಲಿ ಸಹಸ್ರಾರ್ಜುನ ಭವನ ನಿರ್ಮಾಣಕ್ಕೆ ಶಾಸಕರ ಅನುದಾನ ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Gavi Mutt: 15 ಕಿ.ಮೀ ದೂರದಿಂದ ಗವಿಮಠಕ್ಕೆ ಅರ್ಧ ಕ್ವಿಂಟಲ್ ಅಕ್ಕಿ ಹೊತ್ತುಕೊಂಡು ಬಂದ ಭಕ್ತ