
ಯಮಕನಮರಡಿ (ಏ.14): ತನ್ನ ಪತಿಯೊಂದಿಗೆ ಜೀವನ ನಡೆಸದೆ, ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮಾನವನ್ನು ಹರಾಜು ಹಾಕಿದಳು ಎಂಬ ಕಾರಣಕ್ಕೆ ಯುವತಿಯನ್ನು ಕುಟುಂಬಸ್ಥರೇ ಹತ್ಯೆ ಮಾಡಿ, ನಂತರ ಸಾಕ್ಷಿ ನಾಶಕ್ಕಾಗಿ ಶವ ಸುಟ್ಟುಹಾಕಿದ ಘಟನೆ ಮಾ.13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹೆಳವಿ (24) ಹತ್ಯೆಗೀಡಾದ ಯುವತಿ. ಯುವತಿ ಸಾವಿಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲೂಕಿನ ನದಿ ಗುಡಿಕ್ಷೇತ್ರ ಗ್ರಾಮದ ಪ್ರಕಾಶ ಹೆಳವರ (ಯುವತಿ ಚಿಕ್ಕಪ್ಪ), ಶ್ಯಾನೂರ ಹೆಳವರ (ಯುವತಿ ಸಹೋದರ) ಹಾಗೂ ರಾಯಬಾಗ ತಾಲೂಕಿನ ಮೊರಬದ ಕಲ್ಲಪ್ಪ (ಯುವತಿ ಸಹೋದರಿಯ ಪತಿ) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸತ್ಯವ್ವಳನ್ನು ಸಂತೋಷ ಹೆಳವಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಸತ್ಯವ್ವ ಪತಿಯನ್ನು ಬಿಟ್ಟು ತಾನು ಪ್ರೀತಿಸುತ್ತಿದ್ದ ಕೃಷ್ಣಾ ಪಾಟೀಲ (28) ಎಂಬಾತನ ಜೊತೆಗೆ ಪರಾರಿಯಾಗಿದ್ದಳು. ಈ ಕುರಿತು ಕಾಣೆಯಾದ ಬಗ್ಗೆಯೂ ದೂರು ದಾಖಲಾಗಿತ್ತು. ಆದರೆ, ಇವರನ್ನು ಸತ್ಯವ್ವ ಕಡೆಯ ಕುಟುಂಬದವರು ಪತ್ತೆ ಮಾಡಿ ಹತ್ಯೆ ಮಾಡಿದ್ದರು.
ಅವರು ಸಿಕ್ಕಿದ್ದು ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದು ಹೇಳಲಾಗುತ್ತಿದೆ. ನಂತರ ಆಕೆಯನ್ನು ಅಲ್ಲಿಯೇ ಹತ್ಯೆ ಮಾಡಿ ಶವ ಸುಟ್ಟು ಹಾಕಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಮಹಾರಾಷ್ಟ್ರದ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಪೊಲೀಸರು ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.