ಕೊಪ್ಪಳ: ಶಾಲಾ ಆವರಣದಲ್ಲಿ ಆಣೆವಾರಿ, ಸಾವಿರಕ್ಕೂ ಅಧಿಕ ರೈತರಿಗೆ ದೋಖಾ

By Web Desk  |  First Published Nov 29, 2019, 8:26 AM IST

ಅಧಿಕಾರಿ ಯಡವಟ್ಟಿನಿಂದ ರೈತರಿಗೆ ಕೋಟ್ಯಂತರ ರುಪಾಯಿ ಹಾನಿ| ರಾಜ್ಯಪಾಲರ ಹೆಸರಿನಲ್ಲಿರುವ ಸರ್ಕಾರಿ ಶಾಲೆಯ ಭೂಮಿಯಲ್ಲಿ ಕಡಲೆ ಬೆಳೆ ಕಟಾವು| ಮೆಕ್ಕೆಜೋಳ, ಸಜ್ಜೆ ಬಳಿಕ ಈ ಬಾರಿ ಕಡಲೆ ಬೆಳೆ ವಿಮೆ ತಪ್ಪಿತು| 2.60 ಕೋಟಿ ಹಾನಿಯಾದರೂ ಅಧಿಕಾರಿಗೆ ಕೇವಲ ಅಮಾನತು ಶಿಕ್ಷೆ|
 


ಸೋಮರಡ್ಡಿ ಅಳವಂಡಿ

ಕೊಪ್ಪಳ[ನ.29]: ಬೆಳೆ ಇರುವ ರೈತರ ಭೂಮಿಯಲ್ಲಿ ‘ಆಣೆವಾರಿ’ (ಬೆಳೆ ಕಟಾವು ಸಮೀಕ್ಷೆ) ಮಾಡುವುದು ನಿಯಮ. ಆದರೆ, ಸರ್ಕಾರಿ ಶಾಲಾ ಆವರಣದಲ್ಲಿ ಆಣೆವಾರಿ ಮಾಡುವ ಮೂಲಕ ಇಲ್ಲಿನ ಅಧಿಕಾರಿಗಳು ಅನ್ನದಾತರಿಗೆ ಮುಂಗಾರಿ ಹಂಗಾಮಿನ ಬೆಳೆವಿಮೆ ಕೈಗೆ ದಕ್ಕದಂತೆ ಮಾಡಿದ್ದಾರೆ.

Tap to resize

Latest Videos

ಹೌದು! ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆದಿದ್ದು, ಅಧಿಕಾರಿಗಳ ತಪ್ಪಿನಿಂದಾದ ಈ ಪ್ರಮಾದದಿಂದ ರೈತರು ಪರಿತಪಿಸುತ್ತಿದ್ದಾರೆ. ಸಾವಿರಾರು ರೈತರ ಕೋಟ್ಯಂತರ ವಿಮಾ ಪರಿಹಾರದ ಮೊತ್ತ ಕೈತಪ್ಪಿದೆ.

ಬೆಟಗೇರಿ ಗ್ರಾಪಂ ವ್ಯಾಪ್ತಿಯ 389-4 ಸರ್ವೇ ನಂ. ಭೂಮಿಯಲ್ಲಿ ಬೋಚನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಇದೆ. ಈ ಭೂಮಿ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿದೆ. 2018-19ನೇ ಸಾಲಿನ ಹಿಂಗಾರು ಬೆಳೆ ಕಟಾವು ತಪಾಸಣೆಯಲ್ಲಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಬೆಟಗೇರಿ ಗ್ರಾಪಂ ವ್ಯಾಪ್ತಿಯ ಕಡಲೆ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದೆ. ಭೀಕರ ಬರ ಆವರಿಸಿದ್ದರೂ ಅದ್ಯಾವ ಹೊಲದಲ್ಲಿ ಬೆಳೆ ಕಟಾವು ತಪಾಸಣೆ ಮಾಡಿದ್ದಾರೆ ಎಂದು ರೈತರು ಪರಿಶೀಲಿಸಿದಾಗ ಈ ಸತ್ಯ ಬೆಳಕಿಗೆ ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಪ್ಪು ಭೂಮಿಯಲ್ಲಿ ಮಾತ್ರ ಸಾಮಾನ್ಯವಾಗಿ ಹಿಂಗಾರು ಕಡಲೆ ಬೆಳೆ ಬೆಳೆಯಲಾಗುತ್ತದೆ. ಆದರೆ, ಕೆಂಪು ಮಣ್ಣಿನ ಮಸಾರಿಯಲ್ಲಿ ಬೆಳೆ ಕಟಾವು ತಪಾಸಣೆ ಮಾಡಿದ್ದಾರೆ. ಅದು ಶಾಲಾ ಕಟ್ಟಡ ಇರುವ ಸರ್ವೆ ನಂಬರ್‌ನ ಭೂಮಿಯಲ್ಲಿ ಬೆಳೆ ಕಟಾವು ಮಾಡಿದ್ದಾಗಿ ನಮೂದಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳದೇ ಸಮೀಕ್ಷೆ ಮಾಡದೇ ಕುಳಿತಲ್ಲಿಂದಲೇ ಮನಸ್ಸಿಗೆ ಬಂದ ಸರ್ವೆ ನಂಬರ್‌ ದಾಖಲಿಸಿ ವರದಿ ಸಲ್ಲಿಸಿದ್ದರಿಂದ ಇಂತಹ ಯಡವಟ್ಟುಗಳು ಪದೇ ಪದೇ ಆಗುತ್ತಿದೆ. ಇದೇ ಪಿಡಿಒ ಇಂತಹ ಹಲವಾರು ‘ಸಮೀಕ್ಷೆ’ ಮಾಡಿದ್ದರಿಂದ ಸಾವಿರಾರು ರೈತರು ತೊಂದರೆಗೆ ಸಿಲುಕಿದ್ದಾರೆ.

ಸಾವಿರಕ್ಕೂ ಅಧಿಕ ರೈತರಿಗೆ ದೋಖಾ:

ಪಿಡಿಒ ಅಕ್ಬರ್‌ ಮಿಠಾಯಿ ಮಾಡಿದ ಯಡವಟ್ಟಿನಿಂದ ಸಾವಿರಕ್ಕೂ ಅಧಿಕ ರೈತರಿಗೆ ಬರಬೇಕಾಗಿದ್ದ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದೆ. ಹೀಗೆ ತಪ್ಪು ಮಾಡಿರುವುದು ಇದು ಮೊದಲೇನೂ ಅಲ್ಲ. 2018-19ನೇ ಸಾಲಿನ ಮುಂಗಾರು ಬೆಳೆ ಕಟಾವು ವೇಳೆಯಲ್ಲಿಯೂ ಪಿಡಿಒ ಅಕ್ಬರ್‌ ಮಿಠಾಯಿ ಯಡವಟ್ಟಿನಿಂದಾಗಿಯೇ ರೈತರಿಗೆ ಬರಬೇಕಾಗಿದ್ದ 2.60 ಕೋಟಿ ತಪ್ಪಿದೆ. ಇದರ ತಪ್ಪನ್ನು ಒಪ್ಪಿಕೊಂಡಿದ್ದು ಆಗಿದೆ, ಅಮಾನತು ಮಾಡಲಾಗಿದೆ.

ಮೆಕ್ಕೆಜೋಳ ಬೆಳೆ ಕಟಾವಿನಲ್ಲಿಯೂ ಹೀಗೆ ಮಾಡಿದ್ದರು. ಇದಾದ ಮೇಲೆ ಸಜ್ಜೆ ಬೆಳೆ ಕಟಾವಿನಲ್ಲಿಯೂ ಹೀಗೆ ಮಾಡಿದ್ದರು. ಈಗ ಮೂರನೇ ಬಾರಿ ಕಡಲೆ ಬೆಳೆ ಕಟಾವಿನಲ್ಲಿ ದೊಡ್ಡ ಅವಾಂತರವನ್ನೇ ಮಾಡಿದ್ದಾರೆ. ಅವರ ಯಡವಟ್ಟಿನಿಂದಾಗ ಸಾವಿರಾರು ರೈತರಿಗೆ ದೋಖಾ ಆಗಿದೆ.

ಈ ಮೊದಲು ಆಗಿರುವ ತಪ್ಪಿನಿಂದ ರೈತರಿಗೆ ಬೆಳೆ ವಿಮಾ ಪರಿಹಾರ ಬಾರದಂತೆ ಆಗಿದೆ. ಹೀಗಾಗಿಯೇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ರೈತರಿಗೆ ಬೆಳೆ ವಿಮಾ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ಈಗ ಪುನಃ ಅದೇ ರೀತಿಯಾಗಿದ್ದರೆ ಪರಿಶೀಲನೆ ಮಾಡಲಾಗುವುದು ಎಂದು ಕೊಪ್ಪಳ ಜಿಪಂ ಸಿಇಒ 
ರಘುನಂದನ್‌ಮೂರ್ತಿ ಅವರು ಹೇಳಿದ್ದಾರೆ.

ರಾಜ್ಯಪಾಲರ ಹೆಸರಿನಲ್ಲಿ ಇರುವ ಭೂಮಿಯಲ್ಲಿ ಶಾಲಾ ಕಟ್ಟಡವಿದೆ. ಅಲ್ಲಿ ಕೃಷಿ ಮಾಡುವುದೇ ಇಲ್ಲ. ಅಷ್ಟಾದರೂ ಆರ್‌ಸಿಸಿ ಕಟ್ಟಡದ ಮೇಲೆ ಅದೇಗೆ ಬೆಳೆ ಕಟಾವು ಮಾಡಿದರು ? ದೇವರೇ ಬಲ್ಲ. ಅಧಿಕಾರಿಯ ಯಡವಟ್ಟಿನಿಂದ ಸಾವಿರಾರು ರೈತರಿಗೆ ಅನ್ಯಾಯವಾಗಿದೆ ಎಂದ ರೈತ ಪ್ರಭು ಬಾವಿ ಅವರು ತಿಳಿಸಿದ್ದಾರೆ.

ಪದೇ ಪದೇ ಹೀಗೆ ಮಾಡುತ್ತಿರುವುದರ ಹಿಂದೆ ಯಾರದೋ ಕೈವಾಡ ಇರಬಹುದು. ಒಂದು ಬಾರಿಯಲ್ಲ, ಮೂರನೇ ಬಾರಿಯೂ ತಪ್ಪು ಮಾಡುವುದು ಎಂದರೆ ಏನರ್ಥ? ಅಧಿಕಾರಿಯ ವಿರುದ್ಧ ಏನಾದರೂ ಕ್ರಮಕೈಗೊಳ್ಳಿ, ರೈತರಿಗೆ ಪರಿಹಾರ ಕೊಡಿ ಎಂದು ತಾಪಂ ಮಾಜಿ ಸದಸ್ಯರು
ವೀರೇಶ ಸಜ್ಜನ ಅವರು ಆಗ್ರಹಿಸಿದ್ದಾರೆ.

click me!