ಗಂಗಾವತಿ ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆ| ಸೇತುವೆ ಮೇಲೆ ಸಂಚರಿಸದಂತೆ ಎಚ್ಚರಿಕೆಯ ನಾಮಫಲಕ|ಈ ಯೋಜನೆಗೆ 2012ರಲ್ಲಿ ಜಲ ಮಂಡಳಿಗೆ ಸರ್ಕಾರ 61 ಕೋಟಿ ಅನುದಾನ ನೀಡಿದ್ದು ಈ ವರೆಗೂ ಪೂರ್ಣಗೊಂಡಿಲ್ಲ| 10 ಲಕ್ಷ ವೆಚ್ಚದಲ್ಲಿ 60 ಮೀಟರ್ ಸೇತುವೆ ನಿರ್ಮಾಣ|
ರಾಮುಮೂರ್ತಿ ನವಲಿ
ಗಂಗಾವತಿ[ನ.29]: ನಗರಕ್ಕೆ ನಿರಂತರವಾಗಿ ನೀರು ಪೂರೈಸಬೇಕೆಂದು ಸಮೀಪದ ದೇವಘಾಟ್ ಬಳಿ ತುಂಗಭದ್ರಾ ನದಿಯಲ್ಲಿ ನಿರ್ಮಿಸಿದ ಜಾಕ್‌ವೆಲ್ ಸಂಪರ್ಕಿಸುವ ಸೇತುವೆ ಕುಸಿದಿದ್ದು, ಜನರ ಸಂಚಾರ ನಿಷೇಧಿಸಲಾಗಿದೆ.
ಈ ಯೋಜನೆಗೆ 2012ರಲ್ಲಿ ಜಲ ಮಂಡಳಿಗೆ ಸರ್ಕಾರ 61 ಕೋಟಿ ಅನುದಾನ ನೀಡಿದ್ದು ಈ ವರೆಗೂ ಪೂರ್ಣಗೊಂಡಿಲ್ಲ. ನಗರದಿಂದ 3 ಕಿಮೀ ದೂರದಲ್ಲಿರುವ ದೇವಘಾಟ್ ತುಂಗಭದ್ರಾ ನದಿಗೆ ಜಾಕ್‌ವೆಲ್ ನಿರ್ಮಿಸಿ ಯಂತ್ರಗಳನ್ನು ಅಳವಡಿಸಿ 10 ಲಕ್ಷ ವೆಚ್ಚದಲ್ಲಿ 60 ಮೀಟರ್ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಮೇಲೆ ರಾ ವಾಟರ್ ಬೃಹತ್ ಪೈಪ್‌ಗಳನ್ನು ಜೋಡಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ ಈಗ ಸೇತುವೆ ಕುಸಿಯುತ್ತಿದ್ದು ಜಾಕ್‌ವೆಲ್‌ನಲ್ಲಿ ಅಳವಡಿಸಿದ ಯಂತ್ರಗಳನ್ನು ಪ್ರಾರಂಭಿಸಲು ಸಿಬ್ಬಂದಿ ಹಿಂಜರಿಯುತ್ತಿದ್ದಾರೆ. ಜತೆಗೆ ಜಲ ಮಂಡಳಿ ಸಹ ಸೇತುವೆ ಕುಸಿದಿದ್ದು ಸಾರ್ವಜನಿಕರು ಸೇರಿದಂತೆ ಯಾರು ಇತ್ತ ಬರಬಾರದು ಎಂದು ನಾಮಫಲಕ ಹಾಕಿದೆ. ಸೇತುವೆಗಳಿಗೆ 40ಕ್ಕೂ ಹೆಚ್ಚು ಪಿಲ್ಲರ್‌ಗಳಿದ್ದು, ಅವು ಡೊಂಕಾಗಿವೆ. ಇದರಿಂದ ಸೇತುವೆ ಮಧ್ಯ ಬಿರುಕು ಬಿಟ್ಟಿದ್ದು ನಗರಕ್ಕೆ ನೀರು ಪೂರೈಸುವ ಎಸ್ಕೇಪ್ ಕುಸಿದಿದೆ. ಇದರಿಂದ ಯಂತ್ರಗಳನ್ನು ಪ್ರಾರಂಭಿಸಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. 15 ವರ್ಷಗಳ ಹಿಂದೆ ಆನೆಗೊಂದಿ ತಳವಾರ ಘಟ್ಟದ ತುಂಗಭದ್ರಾ ಸೇತುವೆ ಕುಸಿದು 8 ಮಂದಿ ಮೃತಪಟ್ಟ ಘಟನೆ ಕಣ್ಮುಂದೆ ಇದ್ದರೂ ಕುಸಿಯುತ್ತಿರುವ ಸೇತುವೆ ದುರಸ್ತಿಗೆ ಮುಂದಾಗದೆ ಇರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಯೋಜನೆ ಅಪೂರ್ಣ:
ನಗರಕ್ಕೆ ನಿರಂತರ ನೀರು ಪೂರೈಸುವ ಉದ್ದೇಶದಿಂದ ನಗರದಲ್ಲಿ 7 ಮೇಲ್ಮಟ್ಟದ ನೀರು ಸಂಗ್ರಹಗಾರ ನಿರ್ಮಿಸುವ ಹಂತದಲ್ಲಿದ್ದು ಜಯನಗರ ಮತ್ತು ಸರ್ವೇ ನಂ. 56ರಲ್ಲಿ ಮಾತ್ರ ಪೂರ್ಣಗೊಂಡಿದೆ. ಜಯನಗರದಲ್ಲಿ ಮಾತ್ರ ಪ್ರಾರಂಭಿಕವಾಗಿ ನೀರು ಪೂರೈಸುತ್ತಿದ್ದು ಇನ್ನೂ 24 ವಾರ್ಡ್‌ಗಳಿಗೆ ಪೂರೈಕೆಯಾಗಬೇಕಿದೆ. ಜಾಕ್‌ವೆಲ್ ಒಳಗೆ ನೀರು ಪೂರೈಸುವ 2 ಯಂತ್ರ ವಿದ್ಯುತ್ ಸ್ಪರ್ಶದಿಂದ ಸುಟ್ಟಿವೆ. ಇದರಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತವಾಗಿದೆ. ಜಾಕ್‌ವೆಲ್‌ನಲ್ಲಿ 90 ಎಚ್‌ಪಿಯ 2 ಯಂತ್ರ ಅಳವಡಿಸಲಾಗಿದ್ದು, ಪಂಪ್, ಪರಿವರ್ತಕ, ಮೀಟರ್ ಸೇರಿದಂತೆ ಒಟ್ಟು 1.50 ಕೋಟಿ ವ್ಯಯಿಸಲಾಗಿದೆ. ಇದರ ನಿರ್ಮಾಣದ ಜವಾಬ್ದಾರಿ ಹೊತ್ತ ಬೆಂಗಳೂರಿನ ಗುತ್ತಿಗೆದಾರ 2018ರಲ್ಲಿ ಜಲಮಂಡಳಿಗೆ ಹಸ್ತಾಂತರಿಸಿದ್ದಾನೆ. ಹೊಸ ಯಂತ್ರಗಳು ಇದ್ದರೂ ವಾರಕ್ಕೊಮ್ಮೆ ಅವುಗಳು ಕೈ ಕೊಡುತ್ತಿವೆ. 24X7 ಯೋಜನೆಯಲ್ಲಿ ಹೊಸ ಪೈಪ್‌ಗಳ ಜೋಡಣೆಯಾಗಬೇಕು. ಆದರೆ ಜಲ ಮಂಡಳಿ 40 ವರ್ಷಗಳ ಹಿಂದೆ ಹಾಕಲಾಗಿದ್ದ ಹಳೆ ಪೈಪ್‌ಗಳಿಗೆ ಹೊಸ ಯೋಜನೆಯ ಸಂಪರ್ಕ ಕಲ್ಪಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತುತ ಗಂಗಾವತಿ ನಗರಕ್ಕೆ ಹೊಸ ಯೋಜನೆಯ ನೀರು ಸ್ಥಗಿತಗೊಡಿದ್ದು, ಹಳೆಯ ಜಾಕವೆಲ್‌ನಿಂದ ನೀರು ಪೂರೈಸಲಾಗುತ್ತಿದೆ.
ತುಂಗಭದ್ರಾ ಪ್ರವಾಹ ಬಂದ ವೇಳೆ ಜಲ ಮಂಡಳಿ ನಿರ್ಮಿಸಿದ ಸೇತುವೆ ಕುಸಿದಿದೆ. ದಿನದಿಂದ ದಿನಕ್ಕೆ ಸೇತುವೆಗೆ ನಿರ್ಮಿಸಿದ ಪಿಲ್ಲರ್‌ಗಳು ಕುಸಿಯುತ್ತಿದ್ದು ಸೇತುವೆ ಮೆಲೆ ಯಾರು ಸಂಚರಿಸದಂತೆ ನಾಮಫಲಕ ಹಾಕಲಾಗಿದೆ. ಶೀಘ್ರದಲ್ಲಿ ಸೇತುವೆ ನಿರ್ಮಿಸಲಾಗುವುದು. ಈಗಾಗಲೇ 24ಗಿ7 ನೀರು ಪೂರೈಸುವ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ ಎಂದು ಗಂಗಾವತಿ ಜಲಮಂಡಳಿ ಕಿರಿಯ ಅಭಿಯಂತರರು ಅವಿನಾಶ್ ಅವರು ಹೇಳಿದ್ದಾರೆ.
ನಿರಂತರ ನೀರು ಪೂರೈಸುವ ಜಾಕ್‌ವೆಲ್ ಸೇತುವೆ ಕುಸಿದ ಬಗ್ಗೆ ಮಾಹಿತಿ ಪಡೆದಿದ್ದು ತನಿಖೆ ನಡೆಲಾಗುವುದು. ಪಿಲ್ಲರ್ ಹಾಗೂ ಬಿರುಕು ಬಿಟ್ಟು ಸೇತುವೆ ಕಾಮಗಾರಿಯನ್ನು ಪುನರ್ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಕುರಿತು ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದು ಕಾಮಗಾರಿಯ ಹಣ ನೀಡುವುದಿಲ್ಲ ಎಂದು ತಿಳಿಸಲಾಗಿದೆ ಎಂದು ಗಂಗಾವತಿ ಜಲ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ನಾರಾಯಣರಾವ ಅವರು ಹೇಳಿದ್ದಾರೆ.