ನಮ್ಮೂರಿಗೆ ಕರೆದುಕೊಂಡು ಹೋಗಿ ಪುಣ್ಯಕಟ್ಟಿಕೊಳ್ಳಿ ಎಂದು ಕೋರಿಕೆ| ಊಟ, ಉಪಾಹಾರಕ್ಕೂ ತತ್ವಾರ, ಕಿ.ಮೀ. ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ| ಗುಜರಾತ್ ಸರ್ಕಾರ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದೆ| ಅದು ಸಮರ್ಪಕವಾಗಿಲ್ಲ. ಅದಕ್ಕಾಗಿ ಕಿ.ಮೀ. ವರೆಗೆ ಸರದಿಯಲ್ಲಿ ನಿಂತು ಪಡೆಯಬೇಕು| ಸಿಕ್ಕರೆ ಪುಣ್ಯ, ಒಂದೊಂದು ದಿನ ಸಿಗದೇ ಉಪವಾಸ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.01): ಗುಜರಾತ್‌ದ ಸೂರತ್‌ನ ದಿಂಡೋಲಿಯಲ್ಲಿ ಸಿಲುಕಿರುವ ಕೊಪ್ಪಳ ಭಾಗ್ಯನಗರದ 40 ಜನ ಗುಜರಿ ಮತ್ತು ಸ್ಟೇಷನರಿ ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ನಮ್ಮನ್ನು ಕಾಪಾಡಿ ಎನ್ನುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಬೇಡಿಕೊಂಡಿದ್ದಾರೆ.
ಪ್ರತಿ ವರ್ಷ ಶಾಲೆಗೆ ರಜೆ ನೀಡುತ್ತಿದ್ದಂತೆಯೇ ಭಾಗ್ಯನಗರದ ವ್ಯಾಪಾರಿಗಳು ಗುಜರಿ ವ್ಯಾಪಾರಕ್ಕೆ ಹೋಗುತ್ತಾರೆ. ಈ ಬಾರಿಯೂ ಮಕ್ಕಳು ವೃದ್ಧರು, ಯುವಕರು ಸೇರಿ 40 ಜನರು ಗುಜರಾತ್‌ಗೆ ತೆರಳಿದ್ದಾರೆ. ಅಲ್ಲಿ ವ್ಯಾಪಾರ, ವ್ಯವಹಾರ ಮಾಡುತ್ತಿರುವಾಗಲೇ ಲಾಕ್‌ಡೌನ್ ಆಗಿದೆ. ಇದರಿಂದ ಅಲ್ಲಿರಲಾರದೇ, ಊರಿಗೆ ವಾಪಸ್ ಬರಲಾರದೇ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ವ್ಯಾಪಾರವೂ ಇಲ್ಲ. ತಿನ್ನಲು ಏನೂ ಸಿಗುತ್ತಿಲ್ಲ. ಇದ್ದ ಹಣವೂ ಖರ್ಚಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.
ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್ ನೋಟ್ ಬಿದ್ರೂ ಮುಟ್ಟದ ಜನ..!
ಹೀಗೆ ಸಿಲುಕಿಕೊಂಡವರಿಗೆ ಅಲ್ಲಿನ ಸರ್ಕಾರ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದೆ. ಆದರೆ ಅದು ಸಮರ್ಪಕವಾಗಿಲ್ಲ. ಅದಕ್ಕಾಗಿ ಕಿ.ಮೀ. ವರೆಗೆ ಸರದಿಯಲ್ಲಿ ನಿಂತು ಪಡೆಯಬೇಕು. ಸಿಕ್ಕರೆ ಪುಣ್ಯ, ಒಂದೊಂದು ದಿನ ಸಿಗದೇ ಉಪವಾಸ ಇದ್ದದ್ದೂ ಇದೆ ಎನ್ನುತ್ತಾರೆ ಹೀಗೆ ಸಿಲುಕಿರುವ ಮಹೇಶ.
ನಮ್ಮೂರಿಗೆ ಕರೆದುಕೊಂಡು ಹೋಗಿ ಪುಣ್ಯ ಕಟ್ಟಿಕೊಳ್ಳಿ, ರೋಗದ ಭಯವೂ ಇದೆ. ಊಟ, ಉಪಹಾರದ ಸಮಸ್ಯೆಯೂ ಎದುರಾಗಿದೆ. ಮಕ್ಕಳು, ವೃದ್ಧರೂ ಸಹ ನಮ್ಮ ಜೊತೆ ಇದ್ದಾರೆ. ನಮ್ಮನ್ನು ಕರೆದೊಯ್ದು ಪುಣ್ಯ ಕಟ್ಟಿಕೊಳ್ಳಿ ಎಂದು ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ನಮ್ಮ ಗೋಳು ಹೇಳುವಂತಿಲ್ಲ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಇಲ್ಲಿಗೆ ಬರುತ್ತಲೇ ಇರಲಿಲ್ಲ. ಈಗ ಇಲ್ಲಿ ಬಂದು ಸಿಲುಕಿದ್ದು, ನಮನ್ನು ನಮ್ಮೂರಿಗೆ ಕರೆದುಕೊಂಡು ಹೋಗುವಂತೆ ಮಾಡಿ ಎಂದು ಸೂರತ್‌ನಲ್ಲಿ ಸಿಲುಕಿಕೊಂಡಿರುವ ವೃದ್ಧೆ ಕಮಲಮ್ಮ ಅವರು ಹೇಳಿದ್ದಾರೆ.
ದಯಮಾಡಿ ಏನಾದರೂ ಮಾಡಿ ನೀವು ಕಾಪಾಡಿ ಸಾರ್, ನಮಗೆ ಸಾಕಾಗಿ ಹೋಗಿದೆ. ವ್ಯಾಪಾರ ಮಾಡಲು ಆಗುತ್ತಿಲ್ಲ. ನಮಗೇನು ಸಿಗುತ್ತಲೂ ಇಲ್ಲ. ಇದ್ದ ಅಲ್ಪಸ್ವಲ್ಪ ಹಣವೂ ಪೂರ್ಣ ಮುಗಿದು ಹೋಗುತ್ತಿದೆ. ದಯಮಾಡಿ ನಮ್ಮನ್ನು ನಮ್ಮೂರಿಗೆ ಕಳುಹಿಸಿ ಎಂದು ಸೂರತ್‌ನಲ್ಲಿ ಸಿಲುಕಿರುವ ವ್ಯಕ್ತಿ ಹುಸೇನಪ್ಪ ತಿಳಿಸಿದ್ದಾರೆ.