ಹಾರಂಗಿಯ ಹಿನ್ನೀರಿನಲ್ಲಿ ಬುಧವಾರ ಸಾರ್ವಜನಿಕರು ಹಿಡಿದಿದ್ದ ಸುಮಾರು 38 ಕೆ.ಜಿ. ಗಾತ್ರದ ಮೀನು ತಿಂದವರಿಗೆ ಈಗ ಸಂಕಟ ಎದುರಾಗಿದೆ. ಈ ಮೀನನ್ನು ಹಿಡಿಯುವುದು ಅಪರಾಧವಾಗಿದ್ದು, ಮೀನು ಹಿಡಿದವರಿಗೆ ಮೀನುಗಾರಿಕೆ ಇಲಾಖೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದೆ.
ಮಡಿಕೇರಿ(ಮೇ.01): ಹಾರಂಗಿಯ ಹಿನ್ನೀರಿನಲ್ಲಿ ಬುಧವಾರ ಸಾರ್ವಜನಿಕರು ಹಿಡಿದಿದ್ದ ಸುಮಾರು 38 ಕೆ.ಜಿ. ಗಾತ್ರದ ಮೀನು ಅಳಿವಿನಂಚಿನಲ್ಲಿರುವ ಮಹಶೀರ್ ಜಾತಿಗೆ ಸೇರಿದ್ದಾಗಿದ್ದು, ಇದನ್ನು ಹಿಡಿಯುವಂತಿಲ್ಲ. ಈ ಮೀನನ್ನು ಹಿಡಿಯುವುದು ಅಪರಾಧವಾಗಿದ್ದು, ಮೀನು ಹಿಡಿದವರಿಗೆ ಮೀನುಗಾರಿಕೆ ಇಲಾಖೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ನಾಕೂರು- ಶಿರಂಗಾಲ ಗ್ರಾಮದ ಹಾರಂಗಿಯ ಹಿನ್ನೀರಿನಲ್ಲಿ ತಂಡವೊಂದು ಬುಧವಾರ ಗಾಳ ಹಾಕಿದ್ದ ಸಂದರ್ಭ ಈ ಅಪರೂಪದ ಮಹಶೀರ್ ಮೀನು ಸಿಕ್ಕಿದೆ. ಈ ಮೀನನ್ನು ಹಿಡಿದರೂ ನಿಯಮದಂತೆ ಅದನ್ನು ಅಲ್ಲೇ ಬಿಡಬೇಕು. ಕೊಲ್ಲಬಾರದು. ಆದರೆ ಈ ತಂಡ ಮೀನನ್ನು ಅಲ್ಲೇ ಬಿಡದೆ, ತೆಗೆದುಕೊಂಡು ಹೋಗಿ ತಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ದರ್ಶನ್ ಅವರು, ಮೀನು ಹಿಡಿದವರ ಮನೆಗೆ ತೆರಳಿ ಈ ಬಗ್ಗೆ ಪ್ರಶ್ನಿಸಿ, ನೋಟಿಸ್ ನೀಡಿದ್ದು ಇದಕ್ಕೆ ಉತ್ತರಿಸುವಂತೆ ಸೂಚಿಸಿದ್ದಾರೆ.
ಹಾರಂಗಿ ಜಲಾಶಯ ಹಿನ್ನೀರಲ್ಲಿ ಗಾಳಕ್ಕೆ ಬಿತ್ತು ಬೃಹತ್ ಕಟ್ಲಾ ಮೀನು
ಹಾರಂಗಿ ಜಲಾಶಯದಲ್ಲಿ ಸರ್ಕಾರದಿಂದ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ಮೀನು ಹಿಡಿಯಲು ಗುತ್ತಿಗೆ ನೀಡಲಾಗಿದೆ. ಮಹಶೀರ್ ಅಳಿವಿನಂಚಿನಲ್ಲಿರುವ ಮೀನಾಗಿದ್ದು, ಇಂತಹ ಮೀನನ್ನು ಹಿಡಿಯಬಾರದು, ಕೊಲ್ಲಬಾರದು ಎಂದು ಮೀನುಗಾರಿಕಾ ಇಲಾಖೆಯಿಂದ ಷರತ್ತು ವಿಧಿಸಲಾಗಿದೆ. ಹಾರಂಗಿ ಜಲಾಶಯದ ಮೀನು ಉತ್ಪಾದನಾ ಘಟಕದಲ್ಲಿ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದ್ದು, ಈಗಾಗಲೇ 15 ಸಾವಿರ ಮರಿಗಳನ್ನು ಉತ್ಪಾದಿಸಲಾಗಿದೆ. ಕಾಟ್ಲಾ ಜಾತಿಗೆ ಸೇರಿದ ಮೀನು 25 ಕೆ.ಜಿ. ವರೆಗೆ ಬೆಳೆಯಬಲ್ಲದು. ಆದರೆ ಈ ಮಹಶೀರ್ ಮೀನು 60 ಕೆ.ಜಿ. ವರೆಗೂ ಬೆಳೆಯುತ್ತದೆ. ಈ ಮೀನು ಈಗ ಅಳಿವಿನಂಚಿನಲ್ಲಿದೆ ಎಂದು ಕೆ.ಟಿ. ದರ್ಶನ್ ಮಾಹಿತಿ ನೀಡಿದ್ದಾರೆ.
ಮಾಂಸ ಮಾರಾಟವಿಲ್ಲ: ಮೀನಿಗೆ ಮುಗಿಬಿದ್ದ ಜನ, ಇಲ್ಲಿವೆ ಫೋಟೋಸ್
ದೇಶದಲ್ಲಿ ಪುಣೆ ಹೊರತು ಪಡಿಸಿದರೆ ಕರ್ನಾಟಕದ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಮಾತ್ರ ಈ ಅಳಿವಿನಂಚಿನಲ್ಲಿರುವ ಮಹಶೀರ್ ಮೀನನ್ನು ಬೆಳೆಸಲಾಗುತ್ತಿದೆ. ಪುಣೆಯಲ್ಲಿ ಖಾಸಗಿ ಸಂಸ್ಥೆ ಉತ್ಪಾದಿಸುತ್ತಿದ್ದು, ಹಾರಂಗಿಯಲ್ಲಿ ಸರ್ಕಾರ ಉತ್ಪಾದನೆ ಮಾಡುತ್ತಿರುವುದು ವಿಶೇಷ. ಪಶ್ಚಿಮ ಘಟ್ಟಗಳ ಕಾವೇರಿ ನದಿಗಳಲ್ಲಿ ಈ ಮೀನನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾರಂಗಿಯಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಇಲ್ಲಿ 2 ಸಾವಿರ ತಾಯಿ ಮೀನುಗಳನ್ನು ಸಂಗ್ರಹಿಸಲಾಗಿದೆ.
ಬೃಹತ್ ತಲೆಯನ್ನು ಹೊಂದಿರುವ ಮಹಶೀರ್ ಮೀನನ್ನು ‘ಮಹಾಶಿರ’, ‘ದೇವರ ಮೀನು’ ಹಾಗೂ ಬಿಳಿ ಮೀನು ಎಂದೂ ಕರೆಯಲಾಗುತ್ತದೆ. ಅಂದಾಜು 50ರಿಂದ 60 ಕೆ.ಜಿ.ಯ ವರೆಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುವ ಈ ಮೀನು ಉತ್ತಮ ಆಹಾರದೊಂದಿಗೆ ಉತ್ತಮ ಕ್ರೀಡಾ ಮೀನು ಎಂದೂ ಪ್ರಸಿದ್ಧಿ ಪಡೆದಿದೆ.
ಉತ್ಪಾದನಾ ಘಟಕ:
ಮಹಶೀರ್ ಮೀನುಗಳ ಸಂತತಿಯ ಉಳಿವಿಗಾಗಿ ಸರ್ಕಾರ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ಮಹಶೀರ್ ಮೀನುಮರಿ ಉತ್ಪಾದನಾ ಘಟಕವನ್ನು 1986ರಲ್ಲಿ ಸ್ಥಾಪಿಸಿದೆ. ಆದರೆ ಕಾರಣಾಂತರಗಳಿಂದ ಮೀನುಗಳನ್ನು ಬಿತ್ತನೆ ಮಾಡಲಾಗಿರಲಿಲ್ಲ. 2015ರಲ್ಲಿ ಸುಮಾರು 15 ಸಾವಿರ ಮರಿಗಳು ಹಾಗೂ 2 ಸಾವಿರ ತಾಯಿ ಮೀನುಗಳಿವೆ. ಕಾಲಕಾಲಕ್ಕೆ ಈ ಕೇಂದ್ರದಲ್ಲಿ ಉತ್ಪಾದಿಸಿದ ಮೀನು ಮರಿಗಳನ್ನು ಹಾರಂಗಿ ನದಿಯಲ್ಲಿ ಬಿತ್ತನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ
ಅಳಿವಿನಂಚಿನಲ್ಲಿರುವ ಮಹಶೀರ್ ಮೀನನ್ನು ಕೊಡಗಿನ ಹಾರಂಗಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಸಾರ್ವಜನಿಕರೊಬ್ಬರು ಅಪರೂಪದ ಮಹಶೀರ್ ಮೀನನ್ನು ಹಾರಂಗಿ ಹಿನ್ನೀರಿನಲ್ಲಿ ಗಾಳ ಬಳಸಿ ಹಿಡಿದಿದ್ದು, ನೋಟಿಸ್ ನೀಡಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು. ಹಾರಂಗಿ ಜಲಾಶಯದಲ್ಲಿ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ಮೀನು ಹಿಡಿಯಲು ಗುತ್ತಿಗೆ ನೀಡಲಾಗಿದೆ. ಆದರೆ ಅವರು ಕೂಡ ಮಹಶೀರ್ ಮೀನು ಹಿಡಿಯುವಂತಿಲ್ಲ ಎಂದು ಮೀನುಗಾರಿಕೆ ಇಲಾಖೆ ಮಡಿಕೇರಿ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ತಿಳಿಸಿದ್ದಾರೆ.
-ವಿಘ್ನೇಶ್ ಎಂ. ಭೂತನಕಾಡು