
ಕೊಪ್ಪಳ (ಫೆ.23): ಕೊಪ್ಪಳ ಜಿಲ್ಲೆಯ ಪರಿಸರ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಲಿರುವ ಬಲ್ಡೋಟಾ (ಎಕ್ಸ್-ಇಂಡಿಯಾ ಸ್ಟೀಲ್ಸ್ ಲಿಮಿಟೆಡ್) ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ಐತಿಹಾಸಿಕ ಹೋರಾಟಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ನಾಳೆ (ಫೆಬ್ರವರಿ 24) ಕೊಪ್ಪಳ ಮತ್ತು ಭಾಗ್ಯನಗರದಲ್ಲಿ 'ಸ್ವಯಂಪ್ರೇರಿತ ಬಂದ್'ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಹೀಗಾಗಿ, ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಜನಜೀವನದಲ್ಲಿ ಹಲವು ಬದಲಾವಣೆಗಳಾಗಲಿವೆ.
ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವು ನಾಳೆ ಜಿಲ್ಲಾ ಕೇಂದ್ರದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಇನ್ನು ಕೊಪ್ಪಳ ವಿಶ್ವವಿದ್ಯಾಲಯವು ನಾಳೆ ನಡೆಯಬೇಕಿದ್ದ ಸ್ನಾತಕೋತ್ತರ (PG) ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಅಧಿಕೃತ ಆದೇಶ ಹೊರಡಿಸಿದೆ. ಬಂದ್ ತೀವ್ರತೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವರ್ಷ ಫೆಬ್ರವರಿ 24 ರಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಅಂದು ಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಾರ್ಖಾನೆಯನ್ನು ಶಾಶ್ವತವಾಗಿ ನಿಲ್ಲಿಸಲು ಗಡುವು ನೀಡಿದ್ದರು. ಆದರೆ, ಈವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ಕಾರಣ, ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ನಿರಂತರ ಪ್ರತಿಭಟನೆ ನಡೆಸುತ್ತಿದೆ. ಈಗ ಒಂದು ವರ್ಷ ತುಂಬಿದ ನೆನಪಿಗಾಗಿ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ.
ನಾಳೆ ಬೆಳಿಗ್ಗೆ 7 ಗಂಟೆಗೆ ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ಬೈಕ್ ಹಾಗೂ ಆಟೋ ರ‍್ಯಾಲಿ ಮೂಲಕ ಬಂದ್‌ಗೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10 ಗಂಟೆಗೆ ಐತಿಹಾಸಿಕ ಗವಿಮಠದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳಲಿದೆ. ಈ ರ‍್ಯಾಲಿಯು ನಗರದ ಪ್ರಮುಖ ರಸ್ತೆಗಳಾದ ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ಹಾದು ನಗರಸಭೆಯ ಮುಂಭಾಗದಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ತಲುಪಲಿದೆ. ಅಲ್ಲಿ ಬೃಹತ್ ಬಹಿರಂಗ ಸಭೆ ಜರುಗಲಿದೆ.
ಈ ಹೋರಾಟಕ್ಕೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು ಹಾಗೂ ಹಿರಿಯ ಪರಿಸರ ಹೋರಾಟಗಾರ ಎ.ಟಿ. ರಾಮಸ್ವಾಮಿ ಅವರು ಭಾಗವಹಿಸಲಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿಗಳ ಬೆಂಬಲದ ಬಗ್ಗೆ ಮಾತನಾಡಿದ ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ, 'ಶ್ರೀಗಳ ಆಶೀರ್ವಾದ ನಮ್ಮ ಮೇಲಿದೆ. ತಮ್ಮ ಹಂತದಲ್ಲಿ ಅವರು ಕಾರ್ಯ ಮಾಡುತ್ತಿದ್ದಾರೆ. ಗವಿಸಿದ್ದಪ್ಪನ ಅಪ್ಪಣೆಯಾದಾಗ ಖಂಡಿತಾ ನಮ್ಮೊಂದಿಗೆ ಬೀದಿಗಿಳಿಯುವುದಾಗಿ ಶ್ರೀಗಳು ತಿಳಿಸಿದ್ದಾರೆ' ಎಂದು ಹೇಳಿದ್ದಾರೆ.
ವಕೀಲರ ಸಂಘ, ವರ್ತಕರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಈ ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದ್ದು, ಕೊಪ್ಪಳ ಜಿಲ್ಲಾ ಕೇಂದ್ರ ನಾಳೆ ಸ್ತಬ್ಧಗೊಳ್ಳುವ ಸಾಧ್ಯತೆಯಿದೆ.