ಪವಿತ್ರಾ ಗೌಡಗೆ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಗೆ ಅಪೊಲೊ ಫಾರ್ಮಸಿ ಕೊಡ್ತಿದ್ದ ಸಂಬಳ ರಿವೀಲ್ ಮಾಡಿದ ತಾಯಿ!

Published : Feb 23, 2026, 04:29 PM IST
Renukaswamy messages Pavithra Gowda

ಸಾರಾಂಶ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ, ಮೃತನ ತಾಯಿ ರತ್ನಪ್ರಭಾ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದರು. ತನ್ನ ಮಗ ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ತನಗೆ ತಿಳಿದಿಲ್ಲವೆಂದೂ, ಅವನೊಂದಿಗಿನ ಕೊನೆಯ ಕರೆಯ ವಿವರಗಳನ್ನು ಹಂಚಿಕೊಂಡರು. ಆತನಿಗೆ ಅಪೊಲೋ ಫಾರ್ಮಸಿ ನೀಡ್ತಿದ್ದ ಸಂಬಳ ವಿವರ ಹಂಚಿಕೊಂಡರು.

ಬೆಂಗಳೂರು (ಫೆ.23): ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಚುರುಕಾಗಿ ನಡೆಯುತ್ತಿದೆ. ಇಂದು ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದರು. ಈ ವೇಳೆ ಆರೋಪಿಗಳ ಪರ ವಕೀಲರು ನಡೆಸಿದ ಪಾಟೀ ಸವಾಲಿಗೆ (Cross-examination) ಅವರು ಉತ್ತರಿಸಿದರು.

ಆರೋಪಿಗಳ ಪರಿಚಯವಿರಲಿಲ್ಲ:

ಪ್ರಕರಣದ 13ನೇ ಆರೋಪಿ (A13) ದೀಪಕ್ ಪರ ವಕೀಲರು ರತ್ನಪ್ರಭಾ ಅವರನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಉತ್ತರಿಸಿದ ಅವರು, 'ನನಗೆ ದೀಪಕ್ ಎಂಬ ವ್ಯಕ್ತಿ ಈ ಮೊದಲು ಯಾರೆಂದು ಗೊತ್ತಿರಲಿಲ್ಲ. ಟಿವಿಯಲ್ಲಿ ಸುದ್ದಿ ಬಂದಾಗ ನೋಡಿ ಆತನ ಬಗ್ಗೆ ತಿಳಿಯಿತು. ನನ್ನ ಮಗನ ಸಾವಿನ ಸುದ್ದಿ ನಮಗೆ ಮೊದಲು ತಿಳಿದಿದ್ದು ನಮ್ಮ ಸಂಬಂಧಿ ಸಿದ್ದಲಿಂಗಸ್ವಾಮಿ ಅವರಿಂದ. ನಂತರ ಬೆಂಗಳೂರಿಗೆ ಬಂದು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಮಗನ ಕೊಲೆಯಾಗಿರುವುದು ಖಚಿತವಾಯಿತು' ಎಂದು ತಿಳಿಸಿದರು.

ಅಶ್ಲೀಲ ಮೆಸೇಜ್ ಬಗ್ಗೆ ತಾಯಿಯ ಸ್ಪಷ್ಟನೆ:

'ರೇಣುಕಾಸ್ವಾಮಿ ಎ1 ಆರೋಪಿ ಪವಿತ್ರಾ ಗೌಡ ಅಥವಾ ಇತರ ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನೇ?' ಎಂಬ ಪ್ರಶ್ನೆಗೆ ಉತ್ತರಿಸಿದ ರತ್ನಪ್ರಭಾ, 'ನನ್ನ ಮಗ ಅಂತಹ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಷಯ ನನಗೆ ಗೊತ್ತಿಲ್ಲ. ಅವನು ಮತ್ತು ಸೊಸೆ ಮಧ್ಯೆ ಯಾವುದೇ ಜಗಳ ನಡೆಯುತ್ತಿರಲಿಲ್ಲ, ಅವರ ಸಂಸಾರ ಚೆನ್ನಾಗಿತ್ತು' ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಮಗನ ಫೋನ್‌ನಲ್ಲಿ ಏಕೆ ಎರಡು ಸಿಮ್ ಕಾರ್ಡ್‌ಗಳಿದ್ದವು ಎಂಬ ಬಗ್ಗೆಯೂ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಕರಾಳ ದಿನದ ನೆನಪು:

'ಜೂನ್ 8, 2024ರಂದು ಮಧ್ಯಾಹ್ನ 2:30ಕ್ಕೆ ಮಗ ನನಗೆ ಕೊನೆಯದಾಗಿ ಕರೆ ಮಾಡಿದ್ದ. ಅಂದು ಸಂಜೆ ಎರಡೂ ನಂಬರ್‌ಗಳಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿತ್ತು. ಮರುದಿನ ಅವನು ಕೆಲಸ ಮಾಡುತ್ತಿದ್ದ ಅಪೋಲೋ ಫಾರ್ಮಸಿಗೆ ಕರೆ ಮಾಡಿ ವಿಚಾರಿಸಿದೆ. ಜೂನ್ 10ರಂದು ಮಗನ ಬೈಕ್ ಪತ್ತೆಯಾದ ಬಗ್ಗೆ ತಿಳಿಯಿತು. ದರ್ಶನ್ ಕಡೆಯವರಿಗೆ ಮೆಸೇಜ್ ಮಾಡಿದ್ದಕ್ಕೆ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ನಮಗೆ ಹೇಳಿದರು' ಎಂದು ವಿವರಿಸುವಾಗ ರತ್ನಪ್ರಭಾ ಭಾವುಕರಾದರು.

ರೇಣುಕಾಸ್ವಾಮಿ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದನು. ಮಗನ ದಿನಚರಿಯನ್ನು ತಾನು ನಿಯಮಿತವಾಗಿ ತಿಳಿದುಕೊಳ್ಳುತ್ತಿದ್ದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಿಚಾರಣೆಯು ಮುಂದುವರಿದಿದ್ದು, ಪ್ರಕರಣದ ಇತರೆ ಸಾಕ್ಷಿಗಳ ವಿಚಾರಣೆಯೂ ನಡೆಯಲಿದೆ.

PREV
Read more Articles on
click me!

Recommended Stories

ಸರ್ಕಾರಿ ಶಾಲಾ ವಿದ್ಯಾರ್ಥಿನಿ ಬಟ್ಟೆ ಎಳೆದ ಶಿಕ್ಷಕ ಜಡೇಶನ ಜುಟ್ಟು ಹಿಡಿದ ಗ್ರಾಮಸ್ಥರು! ಶಾಲೆಮುಂದೆ ಪ್ರತಿಭಟನೆ
ಬರ್ತ್‌ಡೇ ಮುಗಿದ ಬೆನ್ನಲ್ಲೇ ದರ್ಶನ್‌ಗೆ ಶುರುವಾಯ್ತಾ ಒಳ್ಳೆ ದಿನ? ಕೋರ್ಟ್‌ನಿಂದ ಗುಡ್‌ ನ್ಯೂಸ್‌ ಪಡೆದ ಕಿಲ್ಲಿಂಗ್‌ ಸ್ಟಾರ್‌!