
ರಾಯಚೂರು: ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಕೂಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 222 ಕಾರ್ಮಿಕರ 80 ದಿನಗಳ ಕೂಲಿ ಮೊತ್ತ 1 ಕೋಟಿ 1 ಲಕ್ಷ 1 ಸಾವಿರ ರು. ಹಣವನ್ನು ಇದೇ ಅ.22 ರೊಳಗೆ ಡಿಎಲ್ಸಿ ಕಲಬುರಗಿ ಖಾತೆಗೆ ಜಮಾ ಮಾಡುವಂತೆ ಕಲಬುರಗಿ ಕಾರ್ಮಿಕ ನ್ಯಾಯಾಲಯವು ಆದೇಶ ಹೊರಡಿಸಿದ್ದು, ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ (ಟಿಯುಸಿಐ) ಅಧ್ಯಕ್ಷ ಆರ್.ಮಾನಸಯ್ಯ ಒತ್ತಾಯಿಸಿದರು.
ಮಂಗಳವಾರ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯ ತುಂಗಭದ್ರ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ 2025 ಏಪ್ರಿಲ್ ನಿಂದ ಜೂ.30 ವರೆಗೆ ಕೆಲಸವೇ ಮಾಡಿಲ್ಲ, ವರ್ಷಪೂರ್ತಿ ವೇತನಕ್ಕೆ ಅವಕಾಶವಿಲ್ಲ ಎಂದು ನೆಪಹೇಳಿ ಸಿರವಾರದ ವಿಜಯಲಕ್ಷ್ಮೀ ಪಾಟೀಲ್, ಸಿಂಧನೂರಿನ ಸತ್ಯನಾರಾಯಣ ಶೆಟ್ಟಿ ಮತ್ತು ಯರಮರಸ್ನ ಕಾರ್ಯಪಾಲಕ ಅಭಿಯಂತರರು ವಂಚಿಸಿದ್ದರ ವಿರುದ್ದ ಉಪ ಕಾರ್ಮಿಕ ಆಯುಕ್ತರಿಗೆ ದಾವೆ ಹೂಡಲಾಗಿತ್ತು. ಅರ್ಜಿ ವಿಚಾರಣೆ ನಡೆಸಿ ಕಾರ್ಮಿಕ ನ್ಯಾಯಾಲಯ ಪ್ರತಿ ಕಾರ್ಮಿಕನಿಗೆ 40 ಸಾವಿರ ರು. ವೇತನ, ಹಾಗೂ 5,500 ರು. ಪರಿಹಾರ ಸೇರಿಸಿ ಒಂದು ತಿಂಗಳೊಳಗೆ ಹಣ ಪಾವತಿಸಲು ಆದೇಶ ಮಾಡಿದೆ.
ಸಿರವಾರ ಉಪ ವಿಭಾಗದ 96 ಕಾರ್ಮಿಕರಿಗೆ 43 ಲಕ್ಷ ರು., ಸಿಂಧನೂರು ವಲಯದ 28 ಜನ ಕಾರ್ಮಿಕರಿಗೆ 12 ಲಕ್ಷ ರು., ಯರಮರಸ್ ವಲಯದ 88 ಕಾರ್ಮಿಕ ರಿಗೆ 45 ಸೇರಿ ಒಟ್ಟು ಹಣವನ್ನು ಕಲಬುರಗಿ ಉಪ ಆಯುಕ್ತರ ಆದೇಶದಂತೆ ಇದೇ ಅ.22 ರೊಳಗೆ ಡಿಎಲ್ಸಿ ಇವರ ಖಾತೆ ಜಮಾ ಮಾಡಲು ಮುಂದಾಗಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಕಾರ್ಮಿಕರ ಕೂಲಿ ಹಣ್ಣ ಕದ್ದಿರುವ ವಿಜಯಲಕ್ಷ್ಮೀ ಪಾಟೀಲ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು, ನಿಗಧಿತ ಅವಧಿಯಲ್ಲಿ ಕೂಲಿ ಪಾವತಿಸದೇ ಹೋದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಜೊತೆಗೆ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ನಿಗಮದ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದರೂ ಯಾವುದೇ ರೀತಿಯ ಕ್ರಮವಾಗದ ಸ್ಥಿತಿ ನಿರ್ಮಾಣಗೊಂಡಿರುವುದು ಶೋಚನೀಯ ಸಂಗತಿಯಾಗಿದ್ದು,ಸಿರವಾರ ಕಾರ್ಯಪಾಲಕ ಎಂಜಿನಿಯರಾಗಿರುವ ವಿಜಯಲಕ್ಷ್ಮೀ ಪಾಟೀಲ್ ಅವರು ಈ ಮುಂಚೆ ಯರಮರಸ್ ವಲಯದಲ್ಲಿ ಸ್ಟೋರ್ ಕೀಪರ್ ಆಗಿ ಕಾರ್ಯ ನಿರ್ವಹಿಸಿ, ಕಳೆದ 2021 ಸೆ.30 ರಂದು ಸಿರವಾರಕ್ಕೆವರ್ಗಾವಣೆಯಾಗಿ ಬಿಡುಗಡೆ ಹೊಂದಿದ್ದರು. ಆದರೆ ಇಂದಿಗೂ ಆರು ವರ್ಷವಾದರೂ ಪ್ರಭಾರವನ್ನು ಸಂಬಂಧಿಸಿ ಅಧಿಕಾರಿಗೆ ಹಸ್ತಾಂತರ ಮಾಡಿಲ್ಲ.
ದ್ವಿತೀಯ ಸಹಾಯಕ ಸತೀಶ ಇವರಿಗೆ ಪ್ರಭಾರ ಹಸ್ತಾಂತರಿಸುವಂತೆ ಅಧಿಕಾರಿಗಳು ಪತ್ರ ಬರೆದರೂ ಹಸ್ತಾಂತರಿಸಿಲ್ಲ. ಅಕ್ರಮವಾಗಿ ಅಧಿಕಾರ ಹಸ್ತಾಂತರಿಸದೇ ನಿಗಮ ಅಧಿಕಾರಿಗಳ ಆದೇಶ ಪಾಲಿಸದೇ ಕರ್ತವ್ಯ ಲೋಪ ಎಸಗಿದ ವಿಜಯಕ್ಷ್ಮೀ ಪಾಟೀಲ್ ಇವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಹನುಮಂತಪ್ಪ ಸಿಂಧನೂರು, ಹನುಮಂತಪ್ಪ ಲಿಂಗಸುಗೂರು, ಅಮರೇಗೌಡ, ಹನುಮಂತಪ್ಪ ಸಿರವಾರ ಇದ್ದರು.
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಆ ದೃಶ್ಯ! ಕುಡುಕನ ಅವಾಂತರಕ್ಕೆ ಜನರು ಕಂಗಾಲು!