
ಕೊಪ್ಪಳ: ಕಾರಟಗಿ ಸಮೀಪದ ಬೇವಿನಾಳ ಗ್ರಾಮದಲ್ಲಿ ಕನಕಗಿರಿ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ ಅಪರೂಪದ ಶಾಸನವೊಂದು ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಚೆನ್ನಬಸಪ್ಪ ಮಲಕಂದಿನ್ನಿ ತಿಳಿಸಿದ್ದಾರೆ.
ಬೇವಿನಾಳ ಗ್ರಾಮದ ದಕ್ಷಿಣ ದಿಕ್ಕಿನಲ್ಲಿರುವ ಮಠಂಪೊದೆ ಎಂದು ಕರೆಯಲಾಗುವ ಪ್ರದೇಶದಲ್ಲಿ ಈ ಶಾಸನ ಪತ್ತೆಯಾಗಿದೆ. ಕೆಂಪುಕಲ್ಲಿನ ಮೇಲೆ ಕೆತ್ತಲಾಗಿರುವ ಶಾಸನವು ಸುಮಾರು ನಾಲ್ಕು ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಿದ್ದು, ಕನ್ನಡ ಲಿಪಿಯನ್ನು ಹೊಂದಿದೆ.
ಶಾಸನವು ಕನಕಗಿರಿ ಅರಸರ ಆಡಳಿತಕ್ಕೆ ಸೇರಿದ ಕ್ರಿ.ಶ. 1701 (ಶಾಲಿವಾಹನ ಶಕ 1623)ರ ಅವಧಿಗೆ ಸೇರಿದ್ದಾಗಿರಬಹುದು ಎಂದು ಸಂಶೋಧಕರ ಅಭಿಪ್ರಾಯಪಟ್ಟಿದ್ದಾರೆ.
ರಾಜಶ್ರೀ ಜನ್ಮಮ ಶಿವಾಯದೇವರು ಎಂಬಾತ ಈ ಶಿಲಾಶಾಸನವನ್ನು ಬರೆಸಿದ್ದು, ರವುಡಕುಂದಾ ಸೀಮೆಯ ನಾಡಗೌಡರು ಈ ಸ್ಥಳದ ಮಾಲೀಕರಾಗಿದ್ದರು ಎಂಬ ವಿವರಗಳು ಶಾಸನದಲ್ಲಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸರ್ವಾನುಮತದಿಂದ ಇಲ್ಲಿ ಮಠ ಸ್ಥಾಪನೆ ಮಾಡಲಾಗಿದ್ದು, ಅರಮನೆಯವರು ಪೂಜೆ ಸಲ್ಲಿಸುವ ಪ್ರಸ್ತಾಪವೂ ಶಾಸನದಲ್ಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಕಾರ್ಕಳದ ಮಾಳದಲ್ಲಿ ಇತಿಹಾಸದ ಹೆಜ್ಜೆಗುರುತು, 5 ಅಪರೂಪದ ಜಿನ ಶಾಸನ ಪತ್ತೆ: 14ನೇ ಶತಮಾನದ ಐತಿಹಾಸಿಕ ರಹಸ್ಯ ಅನಾವರಣ!
ಇತಿಹಾಸಾಸಕ್ತರ ತಂಡದ ಹುಡುಕಾಟದ ಫಲವಾಗಿ ಶಾಸನ ಪತ್ತೆಯಾಗಿದ್ದು, ಈ ಕುರಿತು ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ, ಗ್ರಾಮದ ಬಾಷಾಸಾಬ್ ಬೇವಿನಾಳ, ಹನುಮಂತಪ್ಪ ತೊಂಡಿಹಾಳ, ಶಿಕ್ಷಕ ರಾಘವೇಂದ್ರ ಕಾಂತಿ, ವೆಂಕಟೇಶ ಭಜಂತ್ರಿ ಹಾಗೂ ಬಿ.ಕೆ. ವೀರೇಶ ಸಹಕಾರ ನೀಡಿದರು.
ಇದನ್ನೂ ಓದಿ: ಹಗರಿಬೊಮ್ಮನಹಳ್ಳಿಯಲ್ಲಿ ಹಳೆಗನ್ನಡ ಶಾಸನವಿರುವ ಅಪರೂಪದ ವೀರಗಲ್ಲು ಪತ್ತೆ, ನಿಧಿಗಾಗಿ ಕಿಡಿಗೇಡಿಗಳ ಹುಡುಕಾಟ!