
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ನಾಲ್ಕು ಪ್ರಮುಖ ಮನವಿಗಳನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಸಲ್ಲಿಸಿದ್ದಾರೆ.
ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸುವಂತೆ ಮೊದಲ ಮನವಿಯಲ್ಲಿ ಕೋರಲಾಗಿದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚುವರಿ ರೈಲು ಸೇವೆ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ಶಾಶ್ವತ ನಿಲುಗಡೆ ಕಲ್ಪಿಸುವಂತೆ ಮತ್ತೊಂದು ಪ್ರಮುಖ ಬೇಡಿಕೆ ಮುಂದಿಡಲಾಗಿದೆ. ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರಯಾಣಿಕರಿಗೆ ಬೆಂಗಳೂರು ಮತ್ತು ಮಂಗಳೂರು ಸಂಪರ್ಕಕ್ಕೆ ಇದು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್
ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಲೋಂಡಾ-ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸುವ ಹಾಗೂ ರೈಲಿನ ಸಂಚಾರ ವ್ಯವಸ್ಥೆಯನ್ನು ಪುನರ್ ರಚಿಸುವ ಪ್ರಸ್ತಾವನೆಯನ್ನೂ ಸಚಿವರ ಮುಂದಿಡಲಾಗಿದೆ.
ವಾರಾಂತ್ಯಕ್ಕೆ ವಿಶೇಷ ರೈಲು
ಇದರ ಜತೆಗೆ ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ವಾರಾಂತ್ಯ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಲಾಗಿದೆ. ವಾರಾಂತ್ಯದಲ್ಲಿ ಬೆಂಗಳೂರು-ಕರಾವಳಿ ನಡುವೆ ಸಂಚರಿಸುವ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ಈ ಸೇವೆ ಆರಂಭಿಸುವ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕರಾವಳಿಯ ಭವಿಷ್ಯ ಬದಲಿಸುತ್ತಾ ನಾಳೆಯ ಮಂಗಳೂರು ಸಂಪುಟ ಸಭೆ? ಈ 3 ಮಹತ್ವದ ಘೋಷಣೆ ಸಾಧ್ಯತೆ?