ಕೋಲಾರದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಲು ಬಂದ ಅರಣ್ಯ ಸಿಬ್ಬಂದಿ ಮತ್ತು ಜೆಸಿಬಿಗಳ ಮೇಲೆ ಜನರು ಕಲ್ಲು ತೂರಾಟ ಮಾಡಿದ್ದಾರೆ.
ಕೋಲಾರ (ಸೆ.09): ದೇಶದ ಯಾವುದೇ ಪ್ರಜೆ ಸರ್ಕಾರದ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಸರ್ಕಾರದ ಅಧೀನವಾಗಿರುವ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಬಂದ ಅರಣ್ಯ ಸಿಬ್ಬಂದಿ ಮತ್ತು ಜೆಸಿಬಿಗಳ ಮೇಲೆ ಜನರು ಕಲ್ಲು ತೂರಾಟ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಹೌದು, ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳುವುದು ಅಪರಾಧ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೂ, ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಂಡು ಅಪರಾಧ ಮಾಡಿದ್ದಲ್ಲದೇ, ಭೂಮಿ ಒತ್ತುವರಿ ತೆರವಿಗೆ ಬಂದ ಸರ್ಕಾರಿ ಅಧಿಕಾರಿಗಳು ಮತ್ತು ಜೆಸಿಬಿ ವಾಹನದ ಮೇಲೆ ಸ್ಥಳೀಯ ಜನರೇ ವಿರೋಧ ವ್ಯಕ್ತಪಡಿಸಿ ಕಲ್ಲೆಸೆದಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರು ಬಂದು ಕಲ್ಲು ತೂರಾಟ ಮಾಡುತ್ತಿದ್ದಂತೆ ಕಂಗಾಲಾದ ಅಧಿಕಾರಿಗಳು ಪ್ರಾಣ ಉಳಿದರೆ ಸಾಕೆಂದು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಇನ್ನು ಸ್ಥಳದಲ್ಲಿದ್ದ 5 ಜೆಸಿಬಿ ಯಂತ್ರಗಳ ಮೇಲೆ ಜನರು ಕಲ್ಲೆಸೆದಿದ್ದು, ಗಾಜುಗಳು ಪುಡಿಪುಡಿಯಾಗಿವೆ.
ನಾಲ್ಕು ವರ್ಷದಲ್ಲಿ 2,529 ಸರ್ಕಾರಿ ಶಾಲೆಗಳನ್ನು ಮುಚ್ಚಿ, 2,949 ಖಾಸಗಿ ಶಾಲೆಗಳಿಗೆ ಅನುಮತಿ ಕೊಟ್ಟ ಸರ್ಕಾರ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಾರಮಾಕನ ಹಳ್ಳಿಯಲ್ಲಿ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಭೂಮಿ ತೆರವು ಮಾಡುವ ವೇಳೆ ಕಲ್ಲುತೂರಾಟ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು 5 ಜೆಸಿಬಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದಕ್ಕೆ ಸಂಸದ ಮುನಿಸ್ವಾಮಿ ಉತ್ತೇಜನೆಯಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸುಮಾರು 3,800 ಎಕರೆಯಷ್ಟು ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅದನ್ನು ಅರಣ್ಯ ಇಲಾಖೆಯು ಆಗಸ್ಟ್ 23 ರಿಂದ ತೆರವು ಕಾರ್ಯಾಚರಣೆ ಮಾಡುತ್ತಾ ಬಂದಿದೆ.
ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಏಳುಕೊಂಡಲು ಅವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿಯನ್ನು ತೆರವು ಮಾಡುತ್ತಿದ್ದರು. ಇಂದು ಸ್ಥಳಕ್ಕೆ ಆಗಮಿಸಿದ ಕೆಲವು ಸ್ಥಳೀಯರು ಹಾಗೂ ಭೂಮಿ ಒತ್ತುವರಿದಾರರು ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರು ಬೆಳೆದ ಬೆಳೆಯನ್ನು ಬಿಡದೆ ತೆರವು ಮಾಡ್ತಿದ್ದಾರೆ. ಕೆಲವರದು ಕಂದಾಯ ಇಲಾಖೆಗೆ ಸೇರಿರುವ ದಾಖಲಾತಿಗಳಿವೆ. ಮಾವು, ತರಕಾರಿ ಬೆಳೆಗಳನ್ನು ತೆರವು ಮಾಡ್ತಿದ್ದಾರೆ ಎಂದು ಕೂಗಾಟ ಮಾಡಿದ್ದು, ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ.
ಪ್ರೀತಿಗೆ ವಯಸ್ಸಿನ ಗಡಿ ಇಲ್ಲ: 75ರ ವಯಸ್ಸಿನಲ್ಲೂ 35ರ ಯುವತಿಗೆ ತಾಳಿ ಕಟ್ಟಿದ ಅಜ್ಜ!
ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ತೆರವು ಕಾರ್ಯಾಚರಣೆ ಮುಂದುವರೆಸುತ್ತಿದ್ದಂತೆ, ಜನರು ಏಕಾಏಕಿ ಜೆಸಿಬಿಗಳು ಹಾಗೂ ಅಲ್ಲಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜೆಸಿಬಿ ಆಪರೇಟರ್‌ಗಳು ತಮ್ಮ ವಾಹನವನ್ನು ಬಿಟ್ಟು ಅಲ್ಲಿಂದ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಇನ್ನು ಕೆಲವರು ಸಂಸದ ಮುನಿಸ್ವಾಮಿ ಉತ್ತೇಜನೆಯಿಂದ ಜೆಸಿಬಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.