ದಶಕದಿಂದ ಉದ್ಘಾಟೆನೆಗೆ ಕಾಯುತ್ತಿರುವ ರೈಲ್ವೆ ನಿಲ್ದಾಣ; ಬೆಂಗಳೂರಿಗೆ ಪ್ರಯಾಣಿಸುವ ಅನಾನೂಕೂಲ

Published : Aug 09, 2026, 08:51 AM IST
Hudukala Railway Station

ಸಾರಾಂಶ

ಬಂಗಾರಪೇಟೆ ಬಳಿಯ ಹುದುಕುಳ ರೈಲ್ವೆ ನಿಲ್ದಾಣವು ದಶಕ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಬೆಂಗಳೂರಿಗೆ ಪ್ರಯಾಣಿಸುವ ಸಾವಿರಾರು ಜನರಿಗೆ ಅನುಕೂಲವಾಗಬೇಕಿದ್ದ ಈ ನಿಲ್ದಾಣ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ಪಾಳುಬಿದ್ದು ಅನಾಥವಾಗಿದೆ.

ರಮೇಶ್ ಕೆ. ಬಂಗಾರಪೇಟೆ

ಕೋಲಾರ: ಉದ್ಯೋಗಕ್ಕಾಗಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಶಂಕುಸ್ಥಾನೆಯಾದ ಹುದುಕುಳ ರೈಲ್ವೆ ನಿಲ್ದಾಣ ಕಾಮಗಾರಿ ದಶಕವಾದರೂ ಉದ್ಘಾಟನೆಯಾಗದೆ ಇರುವುದು ಚುನಾಯಿತ ಪ್ರತಿನಿಧಿಗಳ ಇಚ್ಚಾಶಕ್ತಿಗೆ ಹಿಡಿದ ಕೈಕನ್ನಡಿಯಾಗಿದೆ.

ಯಾವುದೇ ಕಾರ್ಖಾನೆಗಳಿಲ್ಲದ ಬಂಗಾರಪೇಟೆ ಕ್ಷೇತ್ರದಲ್ಲಿ ಮೂರೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ 20 ಸಾವಿರಕ್ಕೂ ಹೆಚ್ಚಿನ ಜನರು ರೈಲುಗಳ ಮೂಲಕ ಬೆಂಗಳೂರಿಗೆ ಹೋಗಿ ಸಂಜೆ ವಾಪಸ್ ಬರುವರು. ಅಂತೆಯೇ ಕಸಬಾ ಹೋಬಳಿಯ ಜನರೂ ಸಹ ಅಧಿಕ ಸಂಖ್ಯೆಯಲ್ಲಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದರಿಂದ ಈ ಹೋಬಳಿಯ ಜನರು ಮುಂಜಾನೆ 4 ಗಂಟೆಯಿಂದಲೇ ದ್ವಿಚಕ್ರ ವಾಹನಗಳಲ್ಲಿ ನಗರಕ್ಕೆ ಬಂದು ರೈಲು ಹತ್ತಬೇಕಿತ್ತು. ಕೋಲಾರ ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಹುದುಕುಳ ಗ್ರಾಮದಲ್ಲಿ ಈ ಹಿಂದೆ ಬ್ರಿಟೀಷರ ಕಾಲದಲ್ಲಿ ರೈಲ್ವೆ ನಿಲ್ದಾಣವಿತ್ತು. ನಂತರ ಆ ನಿಲ್ದಾಣವನ್ನು ಮುಚ್ಚಲಾಗಿತ್ತು.

ಈ ಹಿನ್ನೆಲೆಯಲ್ಲಿ ಹುದುಕುಳ ಗ್ರಾಮದಲ್ಲಿ ಮುಚ್ಚಿರುವ ರೈಲ್ವೆ ನಿಲ್ದಾಣವನ್ನು ಪುನರಾಂಭಿಸುವ ಮೂಲಕ ಈ ವ್ಯಾಪ್ತಿಯಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಅಂದಿನ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಪ್ರಯಾಣಿಕರು ಮನವಿ ಸಲ್ಲಿಸಿದರು. ಅಂತೆಯೇ ಚಿನ್ನಕೋಟೆ ಗ್ರಾಮದಲ್ಲಿಯೂ ಸಹ ಹಾಲ್ಟ್ ಸ್ಟೇಷನ್ ಆರಂಭಿಸುವಂತೆ ಒತ್ತಾಯಕ್ಕೆ ಮಣಿದು ಎರಡೂ ಕಡೆ ಹೊಸ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತು.

ಗ್ರಾಮಸ್ಥರಿಗೆ ನಿರಾಶೆ

ಅಂದುಕೊಂಡ ಸಮಯದಲ್ಲಿ ಚಿನ್ನಕೋಟೆ ಗ್ರಾಮದಲ್ಲಿ ಮಾತ್ರ ಹಾಲ್ಟ್ ಸ್ಟೇಷನ್ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಆದರೆ ಹುದುಕುಳ ಗ್ರಾಮದಲ್ಲಿನ ಹೊಸ ನಿಲ್ದಾಣ ಕಾಮಗಾರಿಗೆ ಗ್ರಹಣ ಹಿಡಿಯಿತು. 10 ವರ್ಷಗಳೇ ಕಳೆದರೂ ಕಟ್ಟಡವೇನೋ ತಲೆ ಎತ್ತಿದೆ, ಮುಂದಿನ ಚಟುವಟಿಕೆಗಳು ಮಾತ್ರ ಸಾಗಲೇ ಇಲ್ಲ. ಈ ಗ್ರಾಮದ ಸುತ್ತಮುತ್ತಲಿನ ಪ್ರಯಾಣಿಕರು ಇಂದೋ ನಾಳೆನೋ ರೈಲು ಗ್ರಾಮದಲ್ಲಿ ಬಂದು ನಿಲ್ಲಲಿದೆ ಎಂದು ಭಾವಿಸಿದ್ದವರಿಗೆ ನಿರಾಶೆ ಮೂಡಿಸಿದೆ.

ಇದನ್ನೂ ಓದಿ: ಕೋಲಾರದಲ್ಲಿ ಹೃದಯ ವಿದ್ರಾವಕ ಘಟನೆ.. ತಾಯಿ, ಮಗಳು, ಮಗ ದುರಂತ ಅಂತ್ಯ.. ಅಸಲಿಗೆ ಆಗಿದ್ದೇನು?

ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಇಲಾಖೆ ಮತ್ತೆ ದುರಸ್ಥಿಗೊಳಿಸಿ ಹೆಸರು ಸಹ ಬರೆದು ಬಣ್ಣ ಬಳಿಯಲಾಗಿದೆ. ಪ್ರಯಾಣಿಕರು ನಿಲ್ಲಲು ಪ್ಲಾಟ್ ಫಾರಂ ನಿರ್ಮಾಣಕ್ಕೆ ಮಣ್ಣು ಹಾಕಿ ಬಿಟ್ಟಿರುವುದರಿಂದ ಮಳೆ ಬಂದರೆ ಅದು ಕೆಸರು ಗದ್ದೆಯಾಗುವುದು. ಕಟ್ಟಡಕ್ಕೆ ಸಮರ್ಪಕ ರೀತಿ ಬಾಗಿಲು, ಕಿಟಕಿ ಅಳವಡಿಸದೆ ಹಾಗೆ ಬಿಟ್ಟಿರುವುದರಿಂದ ಮತ್ತೆ ರಾತ್ರಿಯ ವೇಳೆ ಕಾನೂನು ಬಾಹಿರ ಅಡ್ಡವಾಗಿ ಪರಿವರ್ತನೆಯಾಗಿದೆ.

ಕೆ.ಹೆಚ್.ಮುನಿಯಪ್ಪ ಮಾಜಿಯಾದರೂ ಅವರ ಜಾಗಕ್ಕೆ ಬಂದ ಸಂಸದ ಎಸ್.ಮುನಿಸ್ವಾಮಿ ಸಹ ಈ ನಿಲ್ದಾಣದ ಬಗ್ಗೆ ಗಮನಹರಿಸಿಲ್ಲ. ಈಗ ಮಲ್ಲೇಶಬಾಬು ಸಂಸದರಾಗಿ ಎರಡು ವರ್ಷಗಳಾಗಿದೆ ಅವರೂ ಯಾಕೋ ಈ ನಿಲ್ದಾಣದ ಕಡೆ ಆಸಕ್ತಿ ತೋರದೆ ಕಾರಣ ನಿಲ್ದಾಣ ಅನಾಥವಾಗಿದೆ.

ಇದನ್ನೂ ಓದಿ: ಕೋಲಾರ ಮಹಿಳಾ ಉದ್ಯಮಿಯ ಸಾಧನೆ: ಮಾಲ್ಡೀವ್ಸ್‌ಗೆ ಮೊದಲ ಬಾರಿಗೆ ಕರ್ನಾಟಕದಿಂದ ಮಾವು ರಫ್ತು, ರೈತರಿಗೆ ಅಶ್ವಿನಿ ಸಾಥ್!

PREV
Read more Articles on
click me!

Recommended Stories

B Nagendra: ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: ಇಡಿ ತನಿಖೆ, ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?
ಒತ್ತುವರಿದಾರರಿಗೆ ಬಿಗ್ ಶಾಕ್: 165 ಎಕರೆ ಭೂಮಿಯನ್ನು ವಶಕ್ಕೆ ಪಡೆದುಕೊಂಡ ಬಿಎಂಟಿಸಿ