* ರೈತ ವಿರೋಧಿ ಕಾನೂನಿಗೆ ಅವಕಾಶ ನೀಡಲ್ಲ
* ರೈತರ ಸಮಾವೇಶದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ
* ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನು ಹಿಂಪಡೆಯಬೇಕು
ಮುಂಡಗೋಡ(ಆ.27): ದೇಶದಲ್ಲಿ ಶೇ. 70ರಷ್ಟು ಕೃಷಿ ಅವಲಂಬಿತ ಕೋಟ್ಯಂತರ ಜನ ಜೀವನ ಸಾಗಿಸುತ್ತಾರೆ. ರೈತ ವಿರೋಧಿ ಕಾನೂನು ಜಾರಿಗೆ ತರಲು ಬಿಡುವುದಿಲ್ಲ. ಬೋಲೋ ಭಾರತ ಮಾತಾಕಿ ಜೈ ಎಂದು ಹೇಳಿಕೊಂಡು ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಟೀಕಿಸಿದ್ದಾರೆ.
ಗುರುವಾರ ತಾಲೂಕಿನ ಮಳಗಿ ಧರ್ಮಾ ಕಾಲನಿಯಲ್ಲಿ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವ 16 ರಾಜ್ಯದಲ್ಲಿ ಜಾರಿಗೆ ತರದ ರೈತ ವಿರೋಧಿ ಭೂಸುಧಾರಣಾ ಕಾಯ್ದೆ ಜಾರಿಗೆ ತಂದಿರುವ ರೈತ ನಾಯಕ ಎಂದು ಹೇಳಿಕೊಂಡು ಬಂದಿರುವ ಬಿ.ಎಸ್. ಯಡಿಯೂರಪ್ಪ ರಾಜ್ಯದ ರೈತರಿಗೆ ದ್ರೋಹ ಮಾಡಿದ್ದಾರೆ.
undefined
ಚಟುವಟಿಕೆ ಮಾಡಲು ನಿಮ್ಮ ಅವಶ್ಯತೆ ಇಲ್ಲ. ಅದಕ್ಕೆ ಕಾರ್ಪೊರೇಟ್ ಕಂಪನಿಗಳಿವೆ ಎಂದು ಹೇಳಲು ಹೊರಟಿರುವ ನರೇಂದ್ರ ಮೋದಿ ಇಂತಹ ಕ್ರಮ ಕೈಗೊಂಡಿದ್ದಾರೆ. ಭೂಸುಧಾರಣಾ, ಕೃಷಿ ಮಾರುಕಟ್ಟೆಸೇರಿದಂತೆ 3 ಕಾನೂನುಗಳು ಅಪಾಯಕಾರಿ ಕಾಯ್ದೆಗಳಾಗಿವೆ. ಸಣ್ಣಪುಟ್ಟದೇಶಗಳಲ್ಲಿ ಇದು ನಡೆಯುತ್ತದೆ. ಆದರೆ ನಮ್ಮ ದೇಶದಲ್ಲಿ ನಡೆಯುದಿಲ್ಲ. ಈ ಕಾನೂನು ಜಾರಿಗೆ ಬಂದರೆ ದೇಶದ 55 ಕೋಟಿ ಜನ ಬದಲಾವಣೆಯಾಗಬೇಕು. ಅದಕ್ಕೇನಾದರೂ ಪರ್ಯಾಯ ವ್ಯವಸ್ಥೆ ಮಾಡಿದ್ದೀರಾ ಎಂದು ಪ್ರಶ್ನಿಸಿದ ಅವರು, ಕೃಷಿ ಬಿಡಬೇಕಾದರೆ ಬೇರೆ ಏನಾದರೂ ಉದ್ಯೋಗ ಬೇಕಲ್ಲವೇ? ಹಾಗಾಗಿ ಜನರಿಗೆ ತೊಂದರೆ ಕೊಡಬೇಡಿ. ಜನರ ಬದುಕು ಅಲ್ಲಾಡಿಸಲು ಹೋದರೆ ನಿಮ್ಮ ಕುರ್ಚಿ ಅಲುಗಾಡುತ್ತದೆ. ಮುಂದೆ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಎಫ್‌ಐಆರ್ ದಾಖಲು
ದೇಶದಲ್ಲಿ ಕೃಷಿಯಿಂದಲೇ ಕೈಗಾರಿಕಾ ಕಚ್ಚಾ ವಸ್ತುಗಳು ತಯಾರಾಗುತ್ತವೆ. ಶೇ. 75ರಷ್ಟುತೆರಿಗೆ ಕೂಡ ಹಳ್ಳಿ ಭಾಗದಿಂದಲೇ ಭರಣವಾಗುತ್ತದೆ ಅದನ್ನು ಅರ್ಥ ಮಾಡಿಕೊಳ್ಳಬೇಕಿದೆ. ರೈತರ ರಕ್ಷಣೆಗಳಿಗಾಗಿ ಇರುವ ಕಾಯ್ದೆಗಳಿಗೆ ಸರ್ಕಾರ ಕೊಡಲಿ ಪೆಟ್ಟು ನೀಡಿದೆ. ಬೆಳೆವಿಮೆ ಯೋಜನೆಯ ಬುಡವನ್ನು ಕತ್ತರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಅಧಿಕಾರದ ಮದ, ಹುಚ್ಚು ಭ್ರಮೆಗೆ ಕರೆದುಕೊಂಡು ಹೋಗಿದೆ. ಇದೇ ಭ್ರಮೆ ಹಿಂದೆ ಇಂದಿರಾಗಾಧಿ ಕೂಡ ಮಾಡಿದ್ದರು. ತಮ್ಮ ವಿರುದ್ಧ ಮಾತನಾಡುವವರನ್ನೆಲ್ಲ ಜೈಲಿಗೆ ಹಾಕುವಂತಹ ಕೆಲಸ ಮಾಡಿದ್ದರು. ಅದೇ ಸ್ಥಿತಿ ಈಗಲೂ ಇದೆ. ಮುಂದಾಗುವ ಅಪಾಯದ ಬಗ್ಗೆ ಎಚ್ಚರಿಕೆಯನ್ನು ಅರಿಯಬೇಕಿದೆ ಎಂದರು.
ರೈಲ್ವೆ ಖಾಸಗೀಕರಣ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಮಾಡಲಾಗುತ್ತಿದೆ. ಯಾವುದೇ ಹೆದ್ದಾರಿಗಳಲ್ಲಿ ಸಂಚರಿಸಬೇಕಾದರೂ ಟೋಲ್ ನೀಡಬೇಕು. ಮುಂದಿನ ದಿನಗಳಲ್ಲಿ ಎಲ್ಲ ಹೆದ್ದಾರಿಗಳನ್ನು ಖಾಸಗಿ ಕಂಪನಿಗಳಿಗೆ ನೀಡಲು ಹೊರಟಿದೆ. ದೇಶ ಮಾರಾಟ ಮಾಡಿ ಸರ್ಕಾರ ನಡೆಸಲು ಅಧಿಕಾರ ನೀಡಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಹಿಂದೆ ಕೂಡ ಒಂದೇ ಒಂದು ಕಂಪನಿ ನಮ್ಮ ದೇಶವನ್ನು ಆಳಿದ ಉದಾಹರಣೆ ಇದೆ. ಅದೇ ಪರಿಸ್ಥಿತಿ ಮತ್ತೆ ಬರದಂತೆ ನೋಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನು ಹಿಂಪಡೆಯಬೇಕು. ಇಲ್ಲದೆ ಹೋದಲ್ಲಿ ರೈತರ ಜನಾಂದೋಲನ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕಿರವತ್ತಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಕಲ್ಮೇಶ ಅಗಾದಿ, ಎನ್.ಎ. ನಾಯ್ಕ, ಫೀರಜ್ಜ ಸಾಗರ, ರುದ್ರಪ್ಪ ಬಳಿಗಾರ, ಜಗದೀಶ ಪಾಟೀಲ, ಬಸವಂತೆಪ್ಪ ಮೆಟಳ್ಳಿ, ವೀರಭದ್ರ ನಾಯ್ಕ, ಶಂಕ್ರಪ್ಪ ಗಾಣಿಗೇರ, ಪ್ರಮೋದ ಜಕ್ಕಣ್ಣವರ, ಜಾಕೀರ ಹುಸೇನ, ದೀಪಕ ಶೇಟ್, ಶ್ರೀಧರ ಪಾಟೀಲ, ಮರ್ಧಾನಸಾಬ, ರಾಜೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ದೇವರಾಜ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.