ಮಂಗಳೂರು (ಆ.27): ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ಸೂಚ್ಯಂಕ ಶೇ.2.4ರಷ್ಟಿರುವ ಕಾರಣ ಸೆಪ್ಟೆಂಬರ್ 15ರವರೆಗೂ ಯಾವುದೇ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸದಂತೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನಿರ್ದೇಶನ ನೀಡಿದ್ದಾರೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ವೈದ್ಯ ಕಾಲೇಜಿನ 34 ವೈದ್ಯ ವಿದ್ಯಾರ್ಥಿಗಳಿಗೆ ಸೋಂಕು
ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಸೆಪ್ಟೆಂಬರ್ 15ರೊಳಗೆ ಕಡಿಮೆಯಾದರೆ ಮತ್ತೊಮ್ಮೆ ಸಂಬಂಧಪಟ್ಟಕಾಲೇಜು ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ಬ್ಯಾಚ್‌ವೈಸ್ ಮೂಲಕ ಕೋವಿಡ್ ಮಾರ್ಗಸೂಚಿಗಳ ಅನುಸಾರವೇ ನಡೆಸಬೇಕು, ಉಳಿದ ವಿಭಾಗಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದ ಸಂಸ್ಥೆಗಳ ಮಾಹಿತಿಯನ್ನು ಕಾಲೇಜು ಶಿಕ್ಷಣಾಧಿಕಾರಿಗಳು ನೀಡಬೇಕು. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು ಸಮಸ್ಯೆಯಾಗಿದೆ, ಜಿಲ್ಲಾಡಳಿತದಿಂದ ಪರ್ಯಾಯ ಮಾರ್ಗ ಹುಡುಕಿ ಅಂತಹ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕಿಶೋರ್ ಕೆ., ಕಾಲೇಜು ಶಿಕ್ಷಣ ವಿಶೇಷಾಧಿಕಾರಿ ಜಯಕರ ಭಂಡಾರಿ, ನಿಟ್ಟೆವಿಶ್ವವಿದ್ಯಾನಿಲಯದ ನೋಡಲ್ ಅಧಿಕಾರಿ ಡಾ.ದಾನೇಶ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.