
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.23): ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಆಕೆಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಆಕೆ ಹಸೆಮಣೆ ಏರಿ ತುಂಬು ಕುಟುಂಬವನ್ನು ಕೂಡಿದ್ದಾಳೆ. ಆ ಸಂಭ್ರಮ ಹೇಗಿತ್ತು ನೀವು ನೋಡಿ. ಇದು ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು.
ಹೌದು ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು. ನಿತ್ಯ ಇಲ್ಲಿ ಎಲ್ಲವೂ ಶೂನ್ಯ ಎನ್ನುವಂತಿದ್ದ ಆಶ್ರಮದಲ್ಲಿ ನಗುವೇ ತುಂಬಿತ್ತು. ಔದು ಎಲ್ಲರನ್ನು ಕಳೆದುಕೊಂಡು ಯಾರು ಇಲ್ಲವೆಂದು ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾನ ಮದುವೆ ಸಂಭ್ರಮ ಮನೆ ಮಾಡಿತ್ತು.
ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು. ತಾವು ಮುಸಲ್ಮಾನರಾದರೂ ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ವಿಶೇಷವಾಗಿತ್ತು. ಹಿಂದೂ ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ನಿಂತು ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿತ್ತು.
ಕೊಡವ ಸಂಪ್ರದಾಯದಂತೆ ವಿವಾಹ ನಡೆದಿದ್ದರಿಂದ ನಿನ್ನೆಯಿಂದಲೇ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ನೆರವೇರಿದ್ದವು. ಇಂದು ಬೆಳಿಗ್ಗೆ ತಮ್ಮ ಬಂಧು ಬಾಂಧವರೊಂದಿಗೆ ತಮ್ಮೂರಿನಿಂದ ಮಡಿಕೇರಿಗೆ ಆಗಮಿಸಿದ ಮದುಮಗ ಪೂವಣ್ಣ ಅವರನ್ನು ತನಲ್ ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಹಾಗೂ ನೆರೆದಿದ್ದ ಜನರು ಗೌರವದಿಂದ ಬರಮಾಡಿಕೊಂಡರು. ಬಳಿಕ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದ ಮೈನಾ ಅವರನ್ನು ತನಲ್ ಸಂಸ್ಥೆಯ ಒಳಗಿನಿಂದ ಕರೆತಂದು ಚಪ್ಪರದಲ್ಲಿ ಕೂರಿಸಿ ಮುಹೂರ್ತ ನೆರವೇರಿಸಿದರು.
ಎಲ್ಲರೂ ಕೊಡವ ಸಂಪ್ರದಾಯದಂತೆ ಅಕ್ಷತೆ ಹಾಕಿ ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ವರ ಪೂವಣ್ಣ ಅವರ ಬಂದು ಬಳಗ ಎಲ್ಲರೂ ಸಾಕ್ಷಿಯಾದರು. ಕಷ್ಟದ ದಿನಗಳಿಂದ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟ ನವ ವಧುವರರು ಕೂಡ ಮದುವೆ ಆಗುತ್ತಿರುವುದಕ್ಕೆ ಸಂಭ್ರಮ ಹಂಚಿಕೊಂಡರು. ಇನ್ನು ಎಲ್ಲಾ ಮದುವೆಗಳಂತೆ ಭರ್ಜರಿ ಬೂರಿ ಭೋಜನವಿತ್ತು.
ಗೀರೈಸ್, ಚಿಕನ್ ಮಸಾಲ, ಕಬಾಬ್, ಪರೋಟ ಚಿಕನ್ ಸುಕ್ಕಾ, ಮೊಸರನ್ನ ಪಾಯಸ ಹೀಗೆ ಭರ್ಜರಿ ಊಟವನ್ನೂ ಎಲ್ಲರೂ ಸವಿದರು. ಈ ಸಂದರ್ಭ ಮಾತನಾಡಿದ ವಧುವರರು ಕೂಡ ಖುಷಿಯನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ತನ್ನವರೆನ್ನುವವರು ಯಾರೂ ಇಲ್ಲ, ನನ್ನದೆನ್ನುವುದು ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು ನವ ಜೋಡಿಯ ಬದುಕು ಖುಷಿಯಾಗಿರಲಿ ಎಂದು ನಾವೂ ಹಾರೈಸೋಣ.