
ಮೈಸೂರು (ಏ.23): ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಚೆಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಈ ಘಟನೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಐಸಿಯು (ICU) ನಲ್ಲಿದ್ದ ಮಗುವಿಗೆ ಇರುವೆಗಳು ಕಚ್ಚಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಆಸ್ಪತ್ರೆ ಮಂಡಳಿಯು ಈ ಆರೋಪವನ್ನು ತಳ್ಳಿಹಾಕಿದ್ದು, ಸಾವಿಗೆ ವೈದ್ಯಕೀಯ ಕಾರಣಗಳನ್ನು ನೀಡಿದೆ.
ಕಳೆದ ಏಪ್ರಿಲ್ 15 ರಂದು ಜನಿಸಿದ್ದ ಗಂಡು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆಲುವಾಂಬ ಆಸ್ಪತ್ರೆಯ ಐಸಿಯು ವಿಭಾಗಕ್ಕೆ ದಾಖಲಿಸಲಾಗಿತ್ತು. ಮಗು ಏಳು ತಿಂಗಳಿಗೇ (ಅವಧಿ ಪೂರ್ವ) ಜನಿಸಿದ್ದರಿಂದ ಅದರ ತೂಕ ಕೇವಲ 1 ಕೆಜಿ 40 ಗ್ರಾಂ ಇತ್ತು. ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಮಗು ಸಾವನ್ನಪ್ಪುತ್ತಿದ್ದಂತೆಯೇ ಪೋಷಕರು ಆಸ್ಪತ್ರೆಯ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಐಸಿಯು ನಲ್ಲಿ ಇರುವೆಗಳ ಕಾಟ ವಿಪರೀತವಾಗಿತ್ತು. ಮಗುವಿನ ದೇಹದ ಮೇಲೆ ಇರುವೆಗಳು ಓಡಾಡುತ್ತಿವೆ ಎಂದು ನಾವು ಸಿಬ್ಬಂದಿಗೆ ಮೊದಲೇ ತಿಳಿಸಿದ್ದೆವು. ಆದರೆ ಅವರು 'ಸಿಹಿ ಇರುವುದರಿಂದ ಒಂದೆರಡು ಇರುವೆಗಳು ಬಂದಿರಬಹುದು' ಎಂದು ಹಾರಿಕೆ ಉತ್ತರ ನೀಡಿದರು. ಈಗ ಮಗುವಿನ ಮುಖ ಮತ್ತು ಎದೆಯ ಮೇಲೆ ಗಾಯದ ಗುರುತುಗಳಿವೆ, ಇರುವೆ ಕಚ್ಚಿದ್ದರಿಂದಲೇ ನಮ್ಮ ಮಗು ಸತ್ತಿದೆ' ಎಂದು ಪೋಷಕರು ಕಣ್ಣೀರು ಹಾಕುತ್ತಾ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.
ಪೋಷಕರ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ್ ಮತ್ತು ಮಕ್ಕಳ ವೈದ್ಯ ಡಾ. ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ. ಮಗುವಿನ ಸಾವಿಗೆ ಇರುವೆ ಕಚ್ಚಿರುವುದು ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅವಧಿ ಪೂರ್ವ ಜನನ: ಮಗು ಕೇವಲ 7 ತಿಂಗಳಿಗೆ ಜನಿಸಿದ್ದು, ತೂಕ ಬಹಳ ಕಡಿಮೆ ಇತ್ತು. ಇಂತಹ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ.
ಗಾಯದ ಗುರುತುಗಳ ರಹಸ್ಯ: ಮಗುವಿನ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಅಳವಡಿಸಲಾಗಿತ್ತು. ಅದರ ಒತ್ತಡದಿಂದಾಗಿ ಮುಖದ ಮೇಲೆ ಕೆಲವು ಗುರುತುಗಳಾಗಿವೆ. ಅಲ್ಲದೆ, ಮಗುವಿನ ಹೃದಯ ಬಡಿತ ಕಡಿಮೆಯಾದಾಗ ಪುನಶ್ಚೇತನಗೊಳಿಸಲು (CPR) ಎದೆಯನ್ನು ಒತ್ತಲಾಗಿತ್ತು. ಆ ಗುರುತುಗಳು ಎದೆಯ ಮೇಲಿವೆ. ಇವು ಇರುವೆ ಕಚ್ಚಿದ ಗುರುತುಗಳಲ್ಲ.
ಇರುವೆ ಇರುವುದು ಸತ್ಯವೇ?: ಗ್ಲೂಕೋಸ್ ಬಾಟಲಿಯ ಬಳಿ ಒಂದೇ ಒಂದು ಇರುವೆ ಇತ್ತು. ಅದನ್ನು ನೋಡಿದ ಪೋಷಕರು ಇಡೀ ಘಟನೆಗೆ ಇರುವೆಗಳೇ ಕಾರಣ ಎನ್ನುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು.
ಸದ್ಯ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆಸ್ಪತ್ರೆ ಮಂಡಳಿಯು ಪೋಷಕರ ದುಃಖವನ್ನು ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ವೈದ್ಯಕೀಯವಾಗಿ ಇರುವೆ ಕಚ್ಚಿ ಸಾವು ಸಂಭವಿಸುವುದು ಅಸಾಧ್ಯ ಎಂದು ಹೇಳಿದೆ. ಈ ಪ್ರಕರಣವು ಈಗ ತನಿಖೆಯ ಹಂತದಲ್ಲಿದ್ದು, ಮೇಲಾಧಿಕಾರಿಗಳ ವರದಿಗಾಗಿ ಕಾಯಲಾಗುತ್ತಿದೆ.