ತನ್ನ ಕುಟುಂಬದ 7 ಮಂದಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿದ್ದ ವ್ಯಕ್ತಿ ಇದೀಗ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗೋಣಿಕೊಪ್ಪ (ಏ.07): ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪಟ್ರೋಲ್ ಸುರಿದು ಬೆಂಕಿ ಹಚ್ಚಿ 7 ಜನರ ಸಾವಿಗೆ ಕಾರಣನಾದ ಆರೋಪಿ ಬೋಜ (50) ಎಂಬಾತನ ಮೃತದೇಹ ಗ್ರಾಮದ ಕಾಫಿ ತೋಟದಲ್ಲಿ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.
ಆರೋಪಿ ವಾಸ ಮಾಡುತ್ತಿದ್ದ ಲೈನ್ ಮನೆಯ ಸಮೀಪದ ತೋಟದಲ್ಲಿ ಶವ ಪತ್ತೆಯಾಗಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಗಾಯಾಳು ಭಾಗ್ಯ ಸಾವು: ಶನಿವಾರ ದುರ್ಘಟನೆ ನಡೆದ ದಿನ ಸುಟ್ಟಗಾಯದಿಂದ 6 ಮಂದಿ ಸಜೀವ ದಹನವಾಗಿದ್ದರು. ಆರೋಪಿ ಬೋಜನ ಪತ್ನಿ ಬೇಬಿ (40), ಅತ್ತೆ ಸೀತೆ (55), ತೋಲ ಎಂಬವರ ಮಗಳು ಪ್ರಾರ್ಥನ (6) ಸ್ಥಳದಲ್ಲಿಯೆ ಸಜೀವ ದಹನವಾಗಿದ್ದರು.
ಮಂಜು ಎಂಬವರ ಮಕ್ಕಳಾದ ಪ್ರಕಾಶ್ (6), ವಿಶ್ವಾಸ (3), ತೋಲ ಅವರ ಮಗ ವಿಶ್ವಾಸ್ (7) ಗಂಭೀರ ಗಾಯಗೊಂಡು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ದೇಹದ ಭಾಗವು ಬಹುತೇಕ ಬೆಂಕಿಗೆ ಆಹುತಿಯಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದರು.
ಕೊಡಗು; ಎಣ್ಣೆ ಏಟು.. ವಿರಹ.. ಮತಾಂತರ... ಮನೆಗೆ ಬೆಂಕಿ ಇಟ್ಟಿದ್ದ!
ಮಂಗಳವಾರ ಬೆಳಗ್ಗೆ ಭೋಜ ಮೃತದೇಹ ಪತ್ತೆಯಾಗುತ್ತಿದ್ದಂತೆ ಆತ್ತ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಭಾಗ್ಯ(28) ಕೂಡ ಮೃತಪಟ್ಟರು. ಭಾಗ್ಯ ಅವರ ಇಬ್ಬರು ಮಕ್ಕಳು ಘನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಇದರೊಂದಿಗೆ 7 ಜನರ ಸಾವಿಗೆ ಕಾರಣವಾದ ಆರೋಪಿ ಬೋಜ ಕೂಡ ಇಹಲೋಕ ತ್ಯಜಿಸಿದ್ದಾನೆ.
ಮಗಳಿಗೆ ಕರೆ: ಆರೋಪಿ ಬೋಜ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ನಂತರ ಮಗಳಿಗೆ ಕರೆ ಮಾಡಿ ಮಾತನಾಡಿದ್ದ ಆಡಿಯೋ ಲಭ್ಯವಾಗಿದೆ. ಮಗಳಿಗೆ ಕರೆ ಮಾಡಿ, ನಿನ್ನ ತಾಯಿಯನ್ನು ಎರಡು ವಾರಗಳಿಂದ ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ. ಬಂದು ನೋಡು ಅವಳ ಪರಿಸ್ಥಿತಿ. ಬಾಗಿಲು ಹಾಕಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದೇನೆ. ನಾನು ಸಾಯುತ್ತೇನೆ. ಬಂದು ನೋಡು ಅವರ ಗೋಳು ಎಂದು ಹೇಳಿ ಆರೋಪಿ ಕರೆ ಕಟ್ ಮಾಡಿದ್ದಾನೆ.
ಆರೋಪಿ ಬೋಜ, ಶನಿವಾರ ತನ್ನ ಪತ್ನಿಯ ಮೇಲಿನ ದ್ವೇಷದಿಂದ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಬೆಳಗ್ಗಿನ ಜಾವ ಕುಡಿದು ಬಂದು ತೋಟದ ಲೈನ್ಮನೆಯಲ್ಲಿ ತನ್ನ ಮಗ ವಾಸಿಸುತ್ತಿದ್ದ ಕಟ್ಟಡದ ಹೆಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ನಾಪತ್ತೆಯಾಗಿದ್ದ.
ಮಂಗಳವಾರ ಬೆಳಗ್ಗೆ ಮೃತಳಾದ ಭಾಗ್ಯ (28) ಹಾಗೂ ಪಾತೆ (58) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾತೆ ಅವರಿಗೆ ಚಿಕಿತ್ಸೆ ಮುಂದುವರೆದಿದೆ.