ಗೌಡರ ಎದುರೇ ಕೊಡಗು ಜೆಡಿಎಸ್ ಮುಖಂಡರ ಕಿತ್ತಾಟ| ಜಗಳ ಬಿಡಿಸಲಾಗದೆ ಸಭೆ ಅರ್ಧಕ್ಕೇ ನಿಲ್ಲಿಸಿ ಹೊರಟ ದೇವೇಗೌಡ| ಪಕ್ಷದ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ| ನಾವು ಪಕ್ಷಕ್ಕೆ ನಿಷ್ಠೆಯಿಂದ ದುಡಿದರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ: ಪಕ್ಷದ ಮುಖಂಡರು| ಪಕ್ಷದ ನಾಯಕರೇ ವಿಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ|
ಬೆಂಗಳೂರು: (ಸೆ .18 ) ಕೊಡಗು ಜಿಲ್ಲಾ ಜೆಡಿಎಸ್ ಘಟಕದ ಮುಖಂಡರು ಪಕ್ಷದ ವರಿಷ್ಟ ಹೆಚ್. ಡಿ. ದೇವೇಗೌಡ ಅವರ ಸಮ್ಮುಖದಲ್ಲೇ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಖಂಡರ ನಡುವಿನ ಜಗಳ ಬಿಡಿಸಲು ಸಾಧ್ಯವಾಗದೆ ದೇವೇಗೌಡರು ಸಭೆಯಿಂದಲೇ ಅರ್ಧಕ್ಕೆ ಹೊರನಡೆದಿದ್ದಾರೆ.
ನಗರದ ರಾಜ್ಯ ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸಂಘಟನೆ ವಿಚಾರವಾಗಿ ಸೋಮವಾರ ಸಂಜೆ ಕೊಡಗು ಜಿಲ್ಲಾ ಮುಖಂಡರ ಸಭೆಯನ್ನು ದೇವೇಗೌಡರು ಕರೆದಿದ್ದರು. ಈ ಸಂದರ್ಭದಲ್ಲಿ ಪಕ್ಷದ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾವು ಪಕ್ಷಕ್ಕೆ ನಿಷ್ಠೆಯಿಂದ ದುಡಿದರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಿಮ್ಮೊಂದಿಗೆ ವೇದಿಕೆ ಮೇಲೆ ಕುಳಿತುಕೊಳ್ಳುವ ನಾಯಕರೇ ವಿಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆಯುತ್ತಾರೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ವೇದಿಕೆಯಲ್ಲಿದ್ದ ಮುಖಂಡರ ಬೆಂಬಲಿಗರು ವಿರೋಧಿಸಿದ್ದರಿಂದ ಗದ್ದಲ ಆರಂಭವಾಗಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ದೊಡ್ಡಗೌಡರು ಸಮಾಧಾನದಿಂದ ಇರುವಂತೆ ಎರಡೂ ಗುಂಪುಗಳಿಗೆ ಮನವಿ ಮಾಡಿದ್ದಾರೆ.
ಆದರೆ ಗೌಡರ ಸೂಚನೆಗೆ ಬಗ್ಗದೆ ಮುಖಂಡರ ನಡುವಿನ ವಾಗ್ಯುದ್ಧ ತೀವ್ರ ಸ್ವರೂಪವಾಗಿ ಮುಂದುವರೆದಿದ್ದರಿಂದ ಈ ನಡವಳಿಕೆಗೆ ಬೇಸರಗೊಂಡ ಗೌಡರು, ಸಭೆಯನ್ನು ಅರ್ಧಕ್ಕೆ ಬರ್ಖಾಸ್ತುಗೊಳಿಸಿ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.