Kodagu: ಜಮ್ಮಾಬಾಣೆ ಲೀಜ್ ಗೆ ಕೊಡುತ್ತೇವೆಂದ ಆರ್‌.ಅಶೋಕ್ ವಿರುದ್ದ ಜಮ್ಮಾ ಹಿಡುವಳಿದಾರರ ಆಕ್ರೋಶ

By Suvarna News  |  First Published Feb 16, 2023, 9:55 PM IST

ಕೊಡಗು ಜಿಲ್ಲೆ ಭೌಗೋಳಿಕ ಸ್ಥಿತಿಗತಿ, ಆಸ್ತಿಯ ಹಕ್ಕುಗಳ ವಿಷಯದಲ್ಲೂ ವಿಶೇಷವೇ. ಆದರೆ ಕಂದಾಯ ಸಚಿವ ಆರ್ ಅಶೋಕ್ ಅವರು ಕೊಡಗಿನ ಜನರ ಆಸ್ತಿಯ ವಿಷಯದಲ್ಲಿ ನೀಡಿರುವ ಹೇಳಿಕೆ ಸಾಕಷ್ಟು ವಿವಾದ ಎಬ್ಬಿಸಿದೆ. ಅವರ ಆ ಹೇಳಿಕೆಗೆ ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.16): ಕೊಡಗು ಜಿಲ್ಲೆ ಸಾಂಸ್ಕೃತಿಕ ವಿಷಯದಲ್ಲಷ್ಟೇ ವಿಶೇಷ ಅಲ್ಲ. ಅದರ ಜೊತೆಗೆ ಇಲ್ಲಿನ ಭೌಗೋಳಿಕ ಸ್ಥಿತಿಗತಿ, ಆಸ್ತಿಯ ಹಕ್ಕುಗಳ ವಿಷಯದಲ್ಲೂ ವಿಶೇಷವೇ. ಆದರೆ ಕಂದಾಯ ಸಚಿವ ಆರ್ ಅಶೋಕ್ ಅವರು ಕೊಡಗಿನ ಜನರ ಆಸ್ತಿಯ ವಿಷಯದಲ್ಲಿ ನೀಡಿರುವ ಹೇಳಿಕೆ ಸಾಕಷ್ಟು ವಿವಾದ ಎಬ್ಬಿಸಿದೆ. ಅವರ ಆ ಹೇಳಿಕೆಗೆ ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಪೈಸಾರಿ ಜಾಗ ದೊಡ್ಡ ಪ್ರಮಾಣದಲ್ಲಿ ಇದ್ದು, ಅದನ್ನು ಉಳ್ಳವರೇ ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ದೇವರ ಬನಕಾಡು, ಜಮ್ಮಾಬಾಣೆ  ಆಸ್ತಿಗಳು ವಿಶೇಷವಾಗಿ ಇವೆ. ಈ ಜಮ್ಮಾಬಾಣೆ ಎನ್ನುವುದು ಕೊಡಗಿನ ಮೂಲ ನಿವಾಸಿಗಳಿಗೆ ಕೊಡಗಿನ ರಾಜರು ಕೊಟ್ಟ ವಿಶೇಷವಾದ ಆಸ್ತಿ ಹಕ್ಕು. ಇದನ್ನು ಬೇರೆಯವರಿಗೆ ಮಾರಾಟ ಮಾಡುವುದಾಗಲಿ ಹಸ್ತಾಂತರ ಮಾಡುವುದಾಗಲಿ ಸಾಧ್ಯವಿಲ್ಲ. ಆದರೆ ಈ ಜಮ್ಮಾಬಾಣೆ ಆಸ್ತಿಯನ್ನು ಸರ್ಕಾರ ಇಷ್ಟು ವರ್ಷಗಳಿಗೆ ಎಂದು ಗುತ್ತಿಗೆ ಕೊಡುವುದಾಗಿ ಹೇಳಿರುವುದು ವಿವಾದ ಮತ್ತು ಕೊಡಗಿನವರ ಆಕ್ರೋಶಕ್ಕೆ ಕಾರಣವಾಗಿದೆ.

Latest Videos

undefined

ಸಚಿವ ಆರ್ ಅಶೋಕ್ ಅವರು ಒಂದು ವಾರದ ಹಿಂದೆ ಜಮ್ಮಾಬಾಣೆ, ಕುಮ್ಕಿ, ಸೊಪ್ಪಿನಬೆಟ್ಟ ಇವೆಲ್ಲವನ್ನು ಗುತ್ತಿಗೆ ನೀಡುವುದಾಗಿ ಹೇಳಿದ್ದರು. ಆದರೆ ಇದು ಆಕಸ್ಮಿಕವಾಗಿ ಬಂದ ಹೇಳಿಕೆಯಾಗಿರಬಹುದು. ಕೊಡಗಿನ ಶಾಸಕರು ಅದನ್ನು ಕಂದಾಯ ಸಚಿವರಿಗೆ ಸ್ಪಷ್ಟಪಡಿಸಿ ಅವರಿಂದಲೂ ಸ್ಪಷ್ಟನೆ ಕೊಡಿಸಬಹುದು ಎಂದು ತಾಳ್ಮೆಯಿಂದ ಇದ್ದರು. ಒಂದು ವಾರವಾದರೂ ಸಚಿವರು, ಶಾಸಕರು ಇದರ ಬಗ್ಗೆ ಚಕಾರ ಎತ್ತಲಿಲ್ಲ.

ಹೀಗಾಗಿ ಜಮ್ಮಾಬಾಣೆಯನ್ನು ಗುತ್ತಿಗೆ ಕೊಡುವುದಾಗಿ ಸಚಿವರು ಉದ್ದೇಶ ಪೂರಕವಾಗಿಯೇ ನೀಡಿದ್ದಾರೆ. ಇದು ಚುನಾವಣೆ ಹೊಸ್ತಿಲಲ್ಲಿ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿ ಮತ್ತೆ ನಾವು ಸರಿಮಾಡಿದ್ದೇವೆ ಎಂದು ನಾಟಕವಾಡಿ ಮತಗಿಟ್ಟಿಸಿಕೊಳ್ಳಲು ಆಡುತ್ತಿರುವ ನಾಟಕ ಎಂದು ಕಾಂಗ್ರೆಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ. ಎಸ್ ಪೊನ್ನಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮ್ಮಾಬಾಣೆ ಎನ್ನುವುದು ಆಸ್ತಿಯ ಹಕ್ಕು ಅಷ್ಟೇ ಅಲ್ಲ, ಇದರ ಜೊತೆಗೆ ಕೋವಿಯೂ ಕೂಡ ಜಮ್ಮಾ ಹಿಡುವಳಿದಾರರಿಗೆ ದೊರೆತ್ತಿರುವ ವಿಶೇಷ ಹಕ್ಕು.

ಆದರೆ ಕಂದಾಯ ಸಚಿವ ಆರ್ ಅಶೋಕ್ ಅವರು ಜಮ್ಮಾ ಭೂಮಿಯನ್ನು ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನುಗಳಿಗೆ ಹೋಲಿಸಿ ಲೀಸಿಗೆ ಕೊಡಲಾಗುವುದು ಎಂದು ಹೇಳಿರುವುದು ಕಾನೂನು ಬಾಹಿರ. 1992 ರಲ್ಲಿ ಚಕ್ಕೇರ ಪೂವಯ್ಯ v/s ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ಹೈಕೋರ್ಟಿನ ಪೂರ್ಣ ಪ್ರಮಾಣದ ತ್ರಿಸದಸ್ಯ ಪೀಠ ತೀರ್ಪು ನೀಡಿದ್ದು, ಜಮ್ಮಾಬಾಣೆ ಜಾಗವು ಅನುಭೋಗದಾರರ ಹಕ್ಕು. ಇತರೆ ಕಂದಾಯ ಭೂಮಿಯನ್ನು ಹೊಂದಿರುವವರಂತೆ ಜಮ್ಮಾಬಾಣೆ ಕೂಡ ವಿಶೇಷ ಆಸ್ತಿಯ ಹಕ್ಕು ಎಂದು ತೀರ್ಪು ನೀಡಿದೆ.

Kodagu: ನೀರಿನ ಟ್ಯಾಂಕ್ ಕೆಡವಿ ಜಾಗ ಕಬಳಿಕೆಗೆ ಪ್ಲಾನ್, 12-15 ಲಕ್ಷ ಮೌಲ್ಯದ ಆಸ್ತಿ ಲಪಟಾಯಿಸಲು ಪಂಚಾಯಿತಿಯವರೇ ಸಾಥ್?

ಆದರೆ ಕಂದಾಯ ಸಚಿವರು ಅದನ್ನೇ ಉಲ್ಲಂಘಿಸಿದ್ದಾರೆ. ಅವರಿಗೆ ಕಾನೂನು ಅರಿವಿನ ಕೊರತೆ ಇರಬಹುದು. ನಮ್ಮ ಭೂಮಿಯನ್ನು ಲೀಸಿಗೆ ಕೊಡುವುದಕ್ಕೆ ಇವರ್ಯಾರು. ಭೂಮಿ ಏನು ಸರ್ಕಾರದ್ದೇ ಎಂದು ಪೊನ್ನಣ್ಣ ಖಾರವಾಗಿ ಪ್ರಶ್ನಿಸಿದ್ದಾರೆ. ಜಮ್ಮಾಹಿಡುವಳಿದಾರರಾದ ಮತ್ತು ವಕೀಲರಾದ ಪವನ್ ಪೆಮ್ಮಯ್ಯ ಅವರು ಇದು ರಾಜರ ಕಾಲದಲ್ಲಿಯೇ ನಮಗೆ ಕೊಟ್ಟಿರುವ ಭೂಮಿ. ಇದನ್ನು ಕಾಫಿತೋಟ ಮಾಡಬಹುದು. ವಿಶೇಷ ಸಂದರ್ಭದಲ್ಲಿ ಪರಿವರ್ತನೆ ಮಾಡಬಹುದು. ಕಂದಾಯ ಸಚಿವರಿಗೆ ಈ ಕುರಿತು ಮಾಹಿತಿಯ ಕೊರತೆ ಇರಬಹುದು. ಇದಕ್ಕೆ ಕೊಡಗಿನ ಜನತೆ ಕಂಗಾಲಾಗುವ ಅಗತ್ಯವಿಲ್ಲ.

 

Kodagu: ವಾಣಿಜ್ಯ ಭೂಪರಿವರ್ತನೆಗೆ ಪರಿಸರವಾದಿಗಳ ವಿರೋಧ: ರದ್ದತಿಗೆ ಮನವಿ

ಆದರೆ ಜಿಲ್ಲೆಯ ಇಬ್ಬರು ಶಾಸಕರು ತಕ್ಷಣ ಪ್ರತಿಕ್ರಿಯೆ ಕೊಟ್ಟು ಕಂದಾಯ ಸಚಿವರಿಗೆ ಸ್ಪಷ್ಟಪಡಿಸಿದ್ದರೆ ಜಮ್ಮಾ ವಿಷಯ ದೊಡ್ಡ ಗುಮ್ಮವಾಗಿ ಪರಿವರ್ತನೆ ಆಗುತ್ತಿರಲಿಲ್ಲ. ಆದರೆ ಜಿಲ್ಲೆಯ ಶಾಸಕರು ಕೊಡಗಿನ ಜ್ವಲಂತ ಸಮಸ್ಯೆಗಳು ಬಂದಾಗ ನಿದ್ರೆಯಲ್ಲಿ ಇರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮೂಲ ನಿವಾಸಿಗಳ ವಿಶೇಷ ಆಸ್ತಿಯ ಹಕ್ಕನ್ನು ಕಂದಾಯ ಸಚಿವರು ಲೀಸ್ಗೆ ಕೊಡುವುದಾಗಿ ಹೇಳಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

click me!